30 ಬೆಡ್‌ ಆಸ್ಪತ್ರೆಯಲ್ಲಿ 15 ಬೆಡ್‌ಗಳನ್ನು ಬಾಣಂತಿಯರು ಹಾಗೂ ಶಿಶುಗಳಿಗಾಗಿ ಮೀಸಲಿಡಲಾಗಿದೆ. ಆದರೆ, ಈ ವಾರ್ಡ್‌ನಲ್ಲಿ ಸಮರ್ಪಕ ಗಾಳಿ ಹಾಗೂ ಬೆಳಕಿನ ವ್ಯವಸ್ಥೆ ಇಲ್ಲದೆ ರೋಗಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ತೆಕ್ಕಲಕೋಟೆ: ಒಂದು ವಾರದಿಂದ ತಿರುಗದ ಪ್ಯಾನ್. ಕಾರ್ಯನಿರ್ವಹಿಸದ ಇನ್ವರ್ಟರ್. ಮೊಬೈಲ್‌ ಟಾರ್ಚ್‌ನಲ್ಲಿ ಬಾಣಂತಿಯರು ಹಾಗೂ ಶಿಶುಗಳ ಆರೈಕೆ.ಇದು ಪಟ್ಟಣದ ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಾಣಂತಿಯರ ಕೊಠಡಿಗೆ ಕಾಲಿಟ್ಟರೆ ಕಾಣಸಿಗುವ ದೃಶ್ಯಗಳು.30 ಬೆಡ್‌ ಆಸ್ಪತ್ರೆಯಲ್ಲಿ 15 ಬೆಡ್‌ಗಳನ್ನು ಬಾಣಂತಿಯರು ಹಾಗೂ ಶಿಶುಗಳಿಗಾಗಿ ಮೀಸಲಿಡಲಾಗಿದೆ. ಆದರೆ, ಈ ವಾರ್ಡ್‌ನಲ್ಲಿ ಸಮರ್ಪಕ ಗಾಳಿ ಹಾಗೂ ಬೆಳಕಿನ ವ್ಯವಸ್ಥೆ ಇಲ್ಲದೆ ರೋಗಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.ವಿದ್ಯುತ್‌ ಕಣ್ಣಾಮುಚ್ಚಾಲೆ: ಮಳೆ ಕೊರತೆಯಿಂದ ವಿದ್ಯುತ್‌ ಉತ್ಪಾದನೆ ಕುಂಠಿತವಾಗುತ್ತಿದ್ದಂತೆ ಪೂರೈಕೆಯಲ್ಲೂ ವ್ಯತ್ಯಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅನುಕೂಲವಾಗಲೆಂದು ಆಸ್ಪತ್ರೆಯಲ್ಲಿ ಅಳವಡಿಸಿರುವ ಇನ್ವರ್ಟರ್ ತನ್ನ ಸಾಮರ್ಥ್ಯ ಕಳೆದುಕೊಂಡಿದ್ದು ವಿದ್ಯುತ್‌ ಕಡಿತವಾಗುತ್ತಿದ್ದಂತೆ ಅದು ಸಹ ನಿಷ್ಕ್ರಿಯವಾಗುತ್ತಿದೆ. ಇದನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರು ಹಾಗೂ ಸಿಬ್ಬಂದಿ ಮೇಲಾಧಿಕಾರಿಗಳಿಗೂ ತಿಳಿಸಿದರೂ ಪ್ರಯೋಜನವಾಗಿಲ್ಲ.

ವಾರದಿಂದ ತಿರುಗದ ಪ್ಯಾನ್‌: ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಏರುಗತಿಯಲ್ಲಿ ಸಾಗುತ್ತಿದ್ದು ಜನರು ಬಿಸಿಲಾಘಾತಕ್ಕೆ ಒಳಗಾಗುತ್ತಿದ್ದಾರೆ. ಆದರೆ, ಬಾಣಂತಿಯರು ಹಾಗೂ ಶಿಶುಗಳು ಇರುವ ವಾರ್ಡ್‌ನಲ್ಲಿ ಒಂದು ವಾರದಿಂದ ಪ್ಯಾನ್‌ ತಿರುಗುತ್ತಿಲ್ಲ. ಹೀಗಾಗಿ ಶೆಕೆಯಿಂದ ಶಿಶುಗಳು ಹಾಗೂ ಬಾಣಂತಿಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸೊಳ್ಳೆ ಕಾಟ: ಪ್ಯಾನ್‌ ತಿರುಗದೆ ಇರುವುದರಿಂದ ಶೆಕೆಯಿಂದ ರಕ್ಷಿಸಿಕೊಳ್ಳಲು ಕಿಟಕಿ ಬಾಗಿಲು ತೆರೆದರೆ ಸೊಳ್ಳೆಗಳು ದಾಂಗುಡಿ ಇಡುತ್ತವೆ. ಕಿಟಿಕಿಗಳಿಗೆ ಕನಿಷ್ಠ ಪಕ್ಷ ಸೊಳ್ಳೆ ಜಾಲರಿ ಸಹ ಅಳವಡಿಸಿಲ್ಲ. ಗಾಳಿ, ಬೆಳಕು ಬೇಕು ಎಂದರೆ ಸೊಳ್ಳೆಗಳ ಕಡಿತ ಸಹಿಸಿಕೊಳ್ಳಬೇಕು. ಇಲ್ಲದಿದ್ದರೆ ಶೆಕೆಯಲ್ಲಿಯೇ ನರಳಬೇಕು. ಹೀಗಾಗಿ ಹಲವರು ಶಿಶುಗಳಿಗೆ ಸೊಳ್ಳೆ ಕಡಿಯಬಾರದೆಂದು ಸಣ್ಣ ಪರದೆ ತೆಗೆದುಕೊಂಡು ಬರುತ್ತಿದ್ದಾರೆ.ಮೂಲಸೌಲಭ್ಯ ಕೊರತೆ: ಆಸ್ಪತ್ರೆಗೆ ಬರುವ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ಇಲ್ಲದೆ ಪರದಾಡುವಂತೆ ಆಗಿದೆ. ಆಸ್ಪತ್ರೆಯಲ್ಲಿ ಶೌಚಾಲಯದ ಸಮಸ್ಯೆ ಇದ್ದು ಹೊರರೋಗಿಗಳು ತಮ್ಮದೇಹಬಾಧೆ ತೀರಿಸಿಕೊಳ್ಳಲು ಬಯಲು ಪ್ರದೇಶವನ್ನು ಆಶ್ರಯಿಸಬೇಕಿದೆ. ತಕ್ಷಣ ಅಧಿಕಾರಿಗಳು ಇತ್ತ ಚಿತ್ತ ಹರಿಸುವ ಮೂಲಕ ಆಸ್ಪತ್ರೆಗೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಂಕಷ್ಟದಿಂದ ಪಾರು ಮಾಡಬೇಕೆಂದು ರೋಗಿಗಳು ಬೇಡಿಕೊಂಡಿದ್ದಾರೆ.ಡಿಸ್‌ಚಾರ್ಜ್‌ ಲೇಟರ್‌ ನೀಡಲು ಲಂಚ: ಹೆರಿಗೆ ಬಳಿಕ ಡಿಸ್‌ಚಾರ್ಜ್‌ ಮಾಡಲು ಹಣ ಕೇಳುತ್ತಾರೆಂಬ ಗಂಭೀರ ಆರೋಪವೂ ಕೇಳಿಬಂದಿದೆ. ನಾವು ಮೊದಲೇ ಬಡವರು. ನಮ್ಮ ಬಳಿ ಹಣವಿಲ್ಲ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆ ಬಿಟ್ಟು ಇಲ್ಲಿಗೆ ಬರುತ್ತೇವೆ. ಆದರೆ, ಇಲ್ಲಿನ ಸಿಬ್ಬಂದಿ ಡಿಸ್‌ಚಾರ್ಜ್‌ ಲೇಟರ್‌ ನೀಡಲು ₹ 1000ರಿಂದ ₹ 5000 ವರೆಗೂ ಲಂಚ ಕೇಳುತ್ತಿದ್ದಾರೆಂದು ದೂರುಗಳು ಸಹ ಕೇಳಿ ಬಂದಿದೆ. ಒಂದು ವೇಳೆ ಹಣ ನೀಡದಿದ್ದರೆ ಸತಾಯಿಸುತ್ತಾರೆಂದು ಮಹಿಳೆಯರು ಕಣ್ಣೀರು ಸಹ ಹಾಕಿದ್ದಾರೆ.

ಲಂಚದಿಂದ ರಕ್ಷಿಸಬೇಕಿದೆ: ಆಸ್ಪತ್ರೆಯಲ್ಲಿ ಮೊದಲೇ ಮೂಲಭೂತ ಸೌಲಭ್ಯಗಳ ಕೊರತೆ ಇವೆ. ಜತೆಗೆ ಸಮಯಕ್ಕೆ ಸರಿಯಾಗಿ ಸಿಬ್ಬಂದಿ ಕರ್ತವ್ಯಕ್ಕೆ ಬರದೆ ಇರುವುದರಿಂದ ರೋಗಿಗಳು ತೀವ್ರ ಸಂಕಷ್ಟ ಎದುರಿಸುವಂತೆ ಆಗಿದೆ. ಕೆಲ ಸಿಬ್ಬಂದಿ ಹೆರಿಗೆ ನಂತರ ಡಿಸ್‌ಚಾರ್ಜ್‌ ಲೇಟರ್‌ ನೀಡಲು ₹ 3000 ರಿಂದ ₹ 4000 ಪಡೆಯುತ್ತಿದ್ದಾರೆ. ಈ ಕುರಿತು ಮೇಲಧಿಕಾರಿಗಳು ಗಮನ ಹರಿಸಿ ಬಡವರಿಗೆ ಉತ್ತಮ ಚಿಕಿತ್ಸೆ ನೀಡುವ ಜತೆಗೆ ಲಂಚದಿಂದ ರಕ್ಷಿಸಬೇಕಿದೆ ಎಂದು ಗ್ರಾಮಸ್ಥರಾದ ಮುಸಿ ಅಮರೇಶ ತಿಳಿಸಿದರು.ಪರಿಹರಿಸಲು ಕ್ರಮ: ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್‌ ಸಮಸ್ಯೆ ಇರುವ ಕುರಿತು ಮಾಹಿತಿ ಬಂದಿದೆ. ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಡಿ. ಬಸವರಾಜ ತಿಳಿಸಿದರು.