ರಾಜ್ಯಪಾಲರಿಂದ ಪ್ರಜಾಪ್ರಭುತ್ವದ ಕಗ್ಗೊಲೆ-ಆರೋಪ

| Published : Aug 23 2024, 01:07 AM IST

ರಾಜ್ಯಪಾಲರಿಂದ ಪ್ರಜಾಪ್ರಭುತ್ವದ ಕಗ್ಗೊಲೆ-ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ನಡೆದಿರುವ ಬೆಳವಣಿಗೆ ಗಮನಿಸಿದರೆ ಒಕ್ಕೂಟ ವ್ಯವಸ್ಥೆಗೆ ಮತ್ತು ಸಂವಿಧಾನದ ಆಶಯಗಳಿಗೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗೆ ಮಾರಕ

ಶಿರಹಟ್ಟಿ: ಸಾಂವಿಧಾನಿಕ ಗೌರವಾನ್ವಿತ ಹುದ್ದೆಯಲ್ಲಿದ್ದುಕೊಂಡು ಪಕ್ಷಪಾತ ಮೂಲಕ ಪ್ರಜಾಪ್ರಭುತ್ವ ಕಗ್ಗೊಲೆಯಲ್ಲಿ ತೊಡಗಿರುವ ರಾಜ್ಯದ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ, ತಾಲೂಕು ಅಹಿಂದ ವರ್ಗ, ತಾಲೂಕು ಕುರುಬರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಗುರುವಾರ ಪಟ್ಟಣದ ಮಾರುತಿ ದೇವಸ್ಥಾನದಿಂದ ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ನೆಹರು ವೃತ್ತದ ಮಾರ್ಗವಾಗಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತ ದೊಡ್ಡಮನಿ, ಗುರುನಾಥ ದಾನಪ್ಪನವರ ಮಾತನಾಡಿ, ರಾಜ್ಯಪಾಲರ ಹುದ್ದೆ ಪಕ್ಷಾತೀತವಾದದ್ದು, ಅತ್ಯಂತ ಗೌರವದ ಹುದ್ದೆ. ಅಲ್ಲಿರುವವರು ಯಾವುದೇ ವ್ಯಕ್ತಿ ಮತ್ತು ಪಕ್ಷವನ್ನು ಗಣನೆಗೆ ತೆಗೆದುಕೊಳ್ಳದೇ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು. ಆದರೆ, ಕರ್ನಾಟಕದ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ, ಎಲ್ಲವನ್ನೂ ಅವರ ಅಣತಿಯಂತೆ ಕೆಲಸ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಬಗೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ೪೦ ವರ್ಷಗಳ ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲದಂತಹ ಸ್ವಚ್ಛ ರಾಜಕಾರಣಿ. ಅವರನ್ನು ಅಧಿಕಾರದಿಂದ ಇಳಿಸಲು ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರ ಷಡ್ಯಂತ್ರ ಮಾಡುತ್ತಿರುವುದು ಸರಿಯಲ್ಲ ಎಂದು ದೂರಿದರು.ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಮುಖಂಡ ಡಿ.ಕೆ. ಹೊನ್ನಪ್ಪನವರ, ಕುರುಬ ಸಮಾಜದ ಮುಖಂಡ ಮಂಜುನಾಥ ಘಂಟಿ ಮಾತನಾಡಿ, ಜನಾದೇಶದ ಆಶೀರ್ವಾದದ ಮೇರೆಗೆ ಯಶಸ್ವಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರವನ್ನು ಸಹಿಸದೆ ವಿರೋಧ ಪಕ್ಷಗಳು ಕುತಂತ್ರ ರಾಜಕಾರಣದಲ್ಲಿ ತೊಡಗಿವೆ ಎಂದು ಟೀಕಿಸಿದರು. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲದಿದ್ದರೂ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತ ಪಿತೂರಿ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ನಡೆದಿರುವ ಬೆಳವಣಿಗೆ ಗಮನಿಸಿದರೆ ಒಕ್ಕೂಟ ವ್ಯವಸ್ಥೆಗೆ ಮತ್ತು ಸಂವಿಧಾನದ ಆಶಯಗಳಿಗೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗೆ ಮಾರಕವಾಗಿದೆ. ರಾಜ್ಯಪಾಲರ ಕ್ರಮ ರಾಜಕೀಯ ಪ್ರೇರಿತ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ದ್ವೇಷ ರಾಜಕಾರಣದಿಂದಾಗಿ ರಾಜಭವನ ದುರುಪಯೋಗಪಡಿಸಿಕೊಂಡು ಮುಖ್ಯಮಂತ್ರಿ ವಿರುದ್ಧ ಷಡ್ಯಂತ್ರ ನಡೆಸುತ್ತಿರುವುದು ಸರಿಯಲ್ಲ. ಹಿಂದುಳಿದ, ಶೋಷಿತ ವರ್ಗದವರು, ಬಡವರು, ನಿರ್ಗತಿಕರು ಹಾಗೂ ಸಾಮಾಜಿಕ ನ್ಯಾಯದ ತತ್ವ-ಸಿದ್ಧಾಂತದ ಮೇಲೆ ರಾಜ್ಯದ ಎಲ್ಲ ಸಮುದಾಯಗಳ ಏಳಿಗೆಗಾಗಿ ಹಗಲಿರುಳು ಶ್ರಮವಹಿಸುತ್ತಿರುವ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹಣಿಯಲು ಆಗದೇ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರದ ಷಡ್ಯಂತ್ರವನ್ನು ಜನ ಗಮನಿಸುತ್ತಿದ್ದಾರೆ ಎಂದರು.

ಸಿಪಿಐ ನಾಗರಾಜ ಮಾಡಳ್ಳಿ ಬಂದೋಬಸ್ತ್ ಕೈಗೊಂಡಿದ್ದರು. ಮಾಜಿ ಶಾಸಕರಾದ ಜಿ.ಎಸ್. ಗಡ್ಡದ್ದೇವರಮಠ, ರಾಮಣ್ಣ ಲಮಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಡಿ. ಮಾಗಡಿ, ಫಕ್ಕೀರೇಶ ಮ್ಯಾಟಣ್ಣವರ, ತಿಪ್ಪಣ್ಣ ಸಂಶಿ, ವಿರೂಪಾಕ್ಷ ಪಡಗೇರಿ, ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಅಜ್ಜು ಪಾಟೀಲ, ಎಲ್.ಡಿ. ಪಾಟೀಲ, ಬುಡನಶ್ಯಾ ಮಕಾನದಾರ, ಸಂತೋಷ ಕುರಿ, ಸಿ.ಕೆ. ಮುಳಗುಂದ, ನಜೀರ ಡಂಬಳ, ಹಸರತ್‌ ಢಾಲಾಯತ, ಸೋಮನಗೌಡ ಮರಿಗೌಡ್ರ, ಮುತ್ತು ಭಾವಿಮನಿ, ಹಮೀದ ಸನದಿ, ಮಾಬೂಷಿ ಲಕ್ಷ್ಮೇಶ್ವರ ಇದ್ದರು. ತಹಸೀಲ್ದಾರ್ ಅನಿಲ ಬಡಿಗೇರ ಮನವಿ ಸ್ವೀಕರಿಸಿದರು.