ಸಾರಾಂಶ
ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಹುಲಿಗಡ್ಡ ಸರ್ಕಾರಿ ಶಾಲೆಗೆ ಕಾಂಪೌಂಡ ನಿರ್ಮಾಣ ಕಾಮಗಾರಿಗೆ ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಸರ್ಕಾರದಿಂದ ನಾನಾ ಯೋಜನೆಗಳಲ್ಲಿ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಗುತ್ತಿದೆ. ಕಾಮಗಾರಿ ಟೆಂಡರ್ ಪಡೆದ ಏಜೆನ್ಸಿಗಳು ಕಟ್ಟಡಗಳನ್ನು ಗಟ್ಟಿಮುಟ್ಟಾಗಿ ನಿರ್ಮಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಹೇಳಿದರು.ಪುರಸಭೆ ವ್ಯಾಪ್ತಿಯ ಹುಲಿಗುಡ್ಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಖನಿಜ ನಿಧಿಯಡಿ ₹20 ಲಕ್ಷದ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕಾಂಪೌಂಡ್ ಕಾಮಗಾರಿಗಳನ್ನು ರಸ್ತೆಗೆ ಹೊಂದಿಕೊಂಡು ನಿರ್ಮಿಸುವುದು ಬೇಡ, ರಸ್ತೆ ಅಗಲೀಕರಣ ಕೈಗೆತ್ತಿಕೊಂಡಾಗ ಕಾಂಪೌಂಡ್ ಗೋಡೆಯನ್ನು ಮತ್ತೆ ತೆರವು ಮಾಡಬೇಕಾಗುತ್ತದೆ. ಇದರಿಂದ ರಸ್ತೆಗೆ ಹೆಚ್ಚಿನ ಪ್ರಮಾಣದಲ್ಲಿ ಜಾಗ ಬಿಟ್ಟು ಕಾಂಪೌಂಡ್ ಗೋಡೆ ನಿರ್ಮಿಸಬೇಕು ಎಂದು ಸಲಹೆ ಕೊಟ್ಟರು.
ಶಾಲಾ ಮಕ್ಕಳು ಅಧ್ಯಯನ ಮಾಡುವಂತಹ ಜಾಗದಲ್ಲಿ ಕೈಗೊಳ್ಳುವ ಕಟ್ಟಡದ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಕೈಗೊಳ್ಳಬೇಕು. ಇದರಿಂದ ಹೆಚ್ಚಿನ ಬಾಳಿಕೆ ಬರುತ್ತವೆ. ಇಲ್ಲದೇ ಹೋದರೆ ಲಕ್ಷಾಂತರ ಹಣ ವ್ಯಯಿಸಿದರು ಉಪಯೋಗಕ್ಕೆ ಬರುವುದಿಲ್ಲ ಹಾಗೂ ಸಾರ್ವಜನಿಕರ ಹಣ ಫೋಲಾಗುವ ಜೊತೆಗೆ ಯೋಜನೆ ಉದ್ದೇಶ ಸಫಲ ಆಗುವುದಿಲ್ಲ. ಇದರ ಬಗ್ಗೆ ಎಂಜಿನಿಯರ್ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಸಲಹೆ ನೀಡಿದರು.ಈ ವೇಳೆ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಪಾಮಯ್ಯ ಮರಾರಿ, ಗುಂಡಪ್ಪ ನಾಯಕ, ಭೂಪನಗೌಡ ಕರಡಕಲ್, ಬಸವರಾಜಗೌಡ ಗಣೇಕಲ್, ಟಿಎಪಿಎಂಸಿ ಅಧ್ಯಕ್ಷ ಶಶಿಧರ ಪಾಟೀಲ್ ಆಶಿಹಾಳ, ಮಲ್ಲಣ್ಣ ವಾರದ್. ಸಿದ್ದಪ್ಪ, ಅಭೀಷೇಕ ಪಾಟೀಲ್ ಬಯ್ಯಾಪುರ, ಚನ್ನರೆಡ್ಡಿ ಬಿರದಾರ, ಕ್ಯಾಸಿಯೊಟೆಕ್ನ ತಿಪ್ಪಣ್ಣ ಸೇರಿದಂತೆ ಇದ್ದರು.