ಚುನಾವಣಾ ಪ್ರಚಾರದ ವೇಳೆ ಎ.ಎಸ್. ಪೊನ್ನಣ್ಣ ಅವರ ವಿರುದ್ಧ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅಡ್ಡಂಡ ಕಾರ್ಯಪ್ಪ ಅವರನ್ನು ವಿರಾಜಪೇಟೆ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಆರೋಪಗಳಿಂದ ಬಿಡುಗಡೆಗೊಳಿಸಿ ಆದೇಶಿಸಿದೆ.

ಸಿದ್ದಾಪುರ: ಚುನಾವಣಾ ಪ್ರಚಾರದ ವೇಳೆ ಎ.ಎಸ್. ಪೊನ್ನಣ್ಣ ಅವರ ವಿರುದ್ಧ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅಡ್ಡಂಡ ಕಾರ್ಯಪ್ಪ ಅವರನ್ನು ವಿರಾಜಪೇಟೆ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಆರೋಪಗಳಿಂದ ಬಿಡುಗಡೆಗೊಳಿಸಿ ಆದೇಶಿಸಿದೆ.2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಏಪ್ರಿಲ್ 30ರಂದು ಮಾಲ್ದಾರೆ ಗ್ರಾಮದಲ್ಲಿ ನಡೆದ ಪ್ರಚಾರದ ವೇಳೆ, ಸ್ಪರ್ಧಾ ಅಭ್ಯರ್ಥಿಯಾಗಿದ್ದ ಎ.ಎಸ್. ಪೊನ್ನಣ್ಣ ಅವರು ಪಿಎಫ್‌ಐ ಸದಸ್ಯರ ಪರ ವಕಾಲತ್ತು ವಹಿಸುವುದರ ಜೊತೆಗೆ ದೇವಸ್ಥಾನಗಳಿಗೆ ದೇಣಿಗೆ ನೀಡುತ್ತಾರೆ ಎಂದು ಕಾರ್ಯಪ್ಪ ಹೇಳಿಕೆ ನೀಡಿದ್ದರು ಎಂಬುದು ಆರೋಪವಾಗಿತ್ತು. ಈ ಹೇಳಿಕೆಯು ಅಭ್ಯರ್ಥಿಯ ಪ್ರತಿಷ್ಠೆಗೆ ಧಕ್ಕೆ ತರುವುದರೊಂದಿಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ದೂರಲಾಗಿತ್ತು.ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171ಜಿ ಮತ್ತು 505(2) ಅಡಿಯಲ್ಲಿ ಪ್ರಕರಣ ದಾಖಲಿಸಿ, ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪಗಳಿಂದ ಬಿಡುಗಡೆ ಕೋರಿ ವಿರಾಜಪೇಟೆ ವಕೀಲ ಪ್ರಶಾಂತ್ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 239ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಶ್ವನಾಥ್ ಎ. ಅವರು, ಆರೋಪಿತ ಹೇಳಿಕೆ ಉದ್ದೇಶಪೂರ್ವಕವಾಗಿ ಸುಳ್ಳಾಗಿತ್ತು ಅಥವಾ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಉದ್ದೇಶ ಹೊಂದಿತ್ತು ಎಂಬುದಕ್ಕೆ ಸೂಕ್ತ ದಾಖಲೆಗಳಿಲ್ಲ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ವಿವಿಧ ಧರ್ಮ, ಜಾತಿ ಅಥವಾ ಸಮುದಾಯಗಳ ನಡುವೆ ದ್ವೇಷ ಬೆಳೆಸುವ ಉದ್ದೇಶವೂ ದಾಖಲೆಗಳಿಂದ ಸಾಬೀತಾಗಿಲ್ಲ ಎಂದು ತಿಳಿಸಿದರು.ಹೀಗಾಗಿ ಆರೋಪಗಳು ಆಧಾರರಹಿತವಾಗಿವೆ ಎಂದು ಪರಿಗಣಿಸಿ, ಕಾರ್ಯಪ್ಪ ಅವರ ಅರ್ಜಿಯನ್ನು ಅಂಗೀಕರಿಸಿ ಅಕ್ಟೋಬರ್ 31ರಂದು ಬಿಡುಗಡೆ ಆದೇಶ ಹೊರಡಿಸಿದರು. ಕಾರ್ಯಪ್ಪ ಪರ ವಕೀಲ ಎನ್.ಎಸ್. ಪ್ರಶಾಂತ್ ಉಚಿತವಾಗಿ ವಾದ ಮಂಡಿಸಿದ್ದರು.