ಸಾರಾಂಶ
ಬೆಂಗಳೂರು : ಮ್ಯೂಸಿಕ್ ಕಂಪನಿಯ ಅನುಮತಿ ಪಡೆಯದೆ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಎರಡು ಹಾಡುಗಳನ್ನು ಬಳಸಿ ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘಿಸಿದ ಆರೋಪದಡಿ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಹಾಗೂ ಅವರ ಮಾಲೀಕತ್ವದ ಚಿತ್ರ ನಿರ್ಮಾಣ ಕಂಪನಿ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಂಆರ್‌ಟಿ ಮ್ಯೂಸಿಕ್ ಕಂಪನಿ ಪಾಲುದಾರ ನವೀನ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಪರಂವ್ಹ ಸ್ಟುಡಿಯೋಸ್ ಪ್ರೈವೇಟ್ ಲಿಮಿಟೆಡ್ ಮತ್ತು ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ರಕ್ಷಿತ್ ಶೆಟ್ಟಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ದೂರು: ‘ಪರಂವ್ಹ ಸ್ಟುಡಿಯೋಸ್ ಕಂಪನಿ ಹಾಗೂ ನಟ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ಬ್ಯಾಚುಲರ್ ಪಾರ್ಟಿ ಸಿನಿಮಾಕ್ಕೆ ಎಂಆರ್‌ಟಿ ಮ್ಯೂಸಿಕ್ ಕಂಪನಿ ಹಕ್ಕುಸ್ವಾಮ್ಯ ಹೊಂದಿರುವ ‘ನ್ಯಾಯ ಎಲ್ಲಿದೆ’ ಹಾಗೂ ‘ಗಾಳಿ ಮಾತು’ ಸಿನಿಮಾಗಳ ಎರಡು ಹಾಡು ಬಳಕೆ ಮಾಡುವ ಸಂಬಂಧ ರಾಜೇಶ್ ಎಂಬುವರು 2024ರ ಜನವರಿಯಲ್ಲಿ ಎಂಆರ್‌ಟಿ ಮ್ಯೂಸಿಕ್ ಕಂಪನಿ ಜತೆಗೆ ಮಾತುಕತೆ ನಡೆಸಿದ್ದರು. ಆದರೆ, ಮಾತುಕತೆ ಫಲಪ್ರದವಾಗಿರಲಿಲ್ಲ’ . ಈ ನಡುವೆ ಕಳೆದ ಮಾರ್ಚ್‌ನಲ್ಲಿ ಅಮೇಜಾನ್ ಪ್ರೈಮ್ ಒಟಿಟಿಯಲ್ಲಿ ಬ್ಯಾಚುಲರ್ ಪಾರ್ಟಿ ಸಿನಿಮಾ ಬಿಡುಗಡೆಗೊಳಿಸಿದ್ದು ಅದರಲ್ಲಿ ಈ ಎರಡೂ ಹಾಡುಗಳು ಇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಿನಿಮಾದಲ್ಲಿ ಎಂಆರ್‌ಟಿ ಮ್ಯೂಸಿಕ್ ಹಕ್ಕುಸ್ವಾಮ್ಯ ಹೊಂದಿರುವ ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಎಂಬ ಹಾಡುಗಳನ್ನು ಬಳಸಲಾಗಿದೆ. ಯಾವುದೇ ಹಕ್ಕುಸ್ವಾಮ್ಯ ಹಾಗೂ ಖರೀದಿ ಹಕ್ಕು ಪಡೆಯದೇ ಕಾನೂನು ಬಾಹಿರವಾಗಿ ಪರಂವ್ಹ ಸ್ಟುಡಿಯೋಸ್ ಕಂಪನಿ ಹಾಗೂ ನಟ ರಕ್ಷಿತ್ ಶೆಟ್ಟಿ ಅವರು ನಮ್ಮ ಕಂಪನಿಯ ಎರಡು ಹಾಡುಗಳನ್ನು ಬಳಸಿಕೊಂಡಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ನವೀನ್ ಕುಮಾರ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.