ಸಾರಾಂಶ
ಕಡಬಗಟ್ಟಿ ಬಗರ್ ಹುಕುಂ ಸಾಗುವಳಿದಾರರಿಗೆ ನೋಟಿಸ್ ಗಳು ಬರುತ್ತಿದ್ದು, ರೈತರು ಇದರಿಂದ ಕಂಗಾಲಾಗಿದ್ದಾರೆ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಸ್ಸೆಸ್) ಮತ್ತು ಬಗರ್ ಹುಕ್ಕುಂ ಹೋರಾಟ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಕನ್ನಡಪ್ರಭ ವಾರ್ತೆ ಧಾರವಾಡ
ಬಗರ್ ಹುಕ್ಕುಂ ಸಾಗುವಳಿದಾರರಿಗೆ ಭೂಗಳ್ಳರೆಂದು ಪ್ರಕರಣ ದಾಖಲು ಮಾಡಿರುವುದನ್ನು ವಿರೋಧಿಸಿ ವಿವಿಧ ಹಳ್ಳಿಯ ಬಗರ್ ಹುಕ್ಕುಂ ಸಾಗುವಳಿದಾರರ ಹಾಗೂ ಎಐಕೆಕೆಎಂಎಸ್ ಜಿಲ್ಲಾ ಮುಖಂಡರ ನಿಯೋಗ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ, ಮುಖ್ಯಮಂತ್ರಿಗೆ ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.ಧಾರವಾಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಡು ಬಡವರಾದ ರೈತ ಕೃಷಿ ಕಾರ್ಮಿಕರು ಜೀವನ ಉಪಯೋಗಕ್ಕಾಗಿ ಕೃಷಿ ಯೋಗ್ಯವಲ್ಲದ ಭೂಮಿಯನ್ನು ಕೃಷಿ ಯೋಗ್ಯವನ್ನಾಗಿ ಮಾಡಿ ಕಳೆದ ಹಲವು ದಶಕಗಳಿಂದ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಸರ್ಕಾರ ಇಂತಹ ರೈತರಿಗೆ ಹಕ್ಕು ಪತ್ರ ಕೊಡುವುದಾಗಿ ಹಲವಾರು ಬಾರಿ ಘೋಷಣೆ ಮಾಡಿ ಫಾರ್ಮ್ ನಂಬರ್ 50, 53, 57 ಅರ್ಜಿಗಳನ್ನು ತುಂಬಿಸಿಕೊಂಡಿದೆ. ಆದರೆ ಇಲ್ಲಿ ವರೆಗೆ ಸಾಗುವಳಿದಾರರಿಗೆ ಹಕ್ಕು ಪತ್ರ ಸಿಕ್ಕಿಲ್ಲ.
ಇತ್ತೀಚಿಗೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಬಗರ್ ಹುಕ್ಕುಂ ಸಾಗುವಳಿದಾರರಿಗೆ ಆರು ತಿಂಗಳಲ್ಲಿ ಹಕ್ಕು ಪತ್ರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ, ಇನ್ನೊಂದೆಡೆ ಸರ್ಕಾರ ರೈತರ ಮೇಲೆ ಪ್ರಕರಣಗಳನ್ನು ಹಾಕಿ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದೆ. ಕಡಬಗಟ್ಟಿ ರೈತರಿಗೆ ನೋಟಿಸ್ ಗಳು ಬರುತ್ತಿದ್ದು, ರೈತರು ಇದರಿಂದ ಕಂಗಾಲಾಗಿದ್ದಾರೆ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಸ್ಸೆಸ್) ಮತ್ತು ಬಗರ್ ಹುಕ್ಕುಂ ಹೋರಾಟ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.ನಿಯೋಗದ ನೇತೃತ್ವ ವಹಿಸಿದ್ದ ಸಂಘಟನೆ ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ, ಉಪಾಧ್ಯಕ್ಷರಾದ ಹನುಮೇಶ ಹುಡೇದ, ರೈತರಾದ ಸಜ್ಜನ್ ಈರಪ್ಪ ಚಲವಾದಿ, ಶ್ರೀಧರ ಸಿದ್ದಪ್ಪ, ಸುರೇಶ ತಿಪ್ಪಣ್ಣ ಚಲವಾದಿ, ಗೌರಮ್ಮ ಇದ್ದರು.