ಸಾರಾಂಶ
ಕಾರಟಗಿ: ತಾಲೂಕು ಗುಂಡೂರು ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ತಟ್ಟೆಗೆ ಮೊಟ್ಟೆ ಹಾಕಿ, ವಿಡಿಯೋ ಮಾಡಿಕೊಂಡ ಆನಂತರ ಅದನ್ನು ಮತ್ತೆ ವಾಪಸ್ ಪಡೆದ ಘಟನೆಯ ವಿಡಿಯೋ ಭಾರಿ ವೈರಲ್ ಆಗಿದ್ದು, ಈ ಬೆನ್ನಲ್ಲೇ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಅಮಾನತು ಮಾಡಲಾಗಿದೆ.
ಸರ್ಕಾರ ಅಪೌಷ್ಟಿಕತೆ ಹೋಗಲಾಡಿಸಲು ಅಂಗನವಾಡಿ ಮೂಲಕ ಮಕ್ಕಳು ಮತ್ತು ಗರ್ಭಿಣಿಯರಿಗೆ ಮೊಟ್ಟೆ ಸೇರಿ ವಿವಿಧ ಪೌಷ್ಟಿಕ ಆಹಾರ ವಿತರಣೆ ಮಾಡುತ್ತದೆ. ತಾಲೂಕು ಗುಂಡೂರು ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ಶೈನಜಾ ಬೇಗಂ ಮಕ್ಕಳ ತಟ್ಟೆಗೆ ಮೊಟ್ಟೆ ಹಾಕುತ್ತಾರೆ. ಇದನ್ನು ಕಾರ್ಯಕರ್ತೆ ಜೆ. ಲಕ್ಷ್ಮೀ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡಿದ ಆನಂತರ ಮಕ್ಕಳ ತಟ್ಟೆಗೆ ಹಾಕಿದ್ದ ಮೊಟ್ಟೆಯನ್ನು ಸಹಾಯಕಿ ವಾಪಸ್ ಎತ್ತಿಕೊಂಡು ಒಳಗೆ ಇಡುತ್ತಾರೆ. ಈ ಎಲ್ಲ ಪ್ರಹಸನವನ್ನು ಯುವಕನೊಬ್ಬ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಈ ವಿಡಿಯೋ ಶುಕ್ರವಾರ ಸಂಜೆ ಮತ್ತು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.ಕೇವಲ ಫೋಟೋ, ವಿಡಿಯೋ ಶೂಟ್ ಮಾಡುವುದಕ್ಕೆ ಮಾತ್ರ ಮಕ್ಕಳ ತಟ್ಟೆಗೆ ಮೊಟ್ಟೆ ಹಾಕುತ್ತಾರೆ. ವಿಡಿಯೋ ಮಾಡಿಕೊಂಡ ಆನಂತರ ಈ ಮೊಟ್ಟೆಗಳನ್ನು ಮಕ್ಕಳ ಕೈಯಿಂದ ವಾಪಸ್ ಕಿತ್ತುಕೊಂಡು, ಮನೆಗೆ ತೆಗೆದುಕೊಂಡು ಹೋಗುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಅಂಗನವಾಡಿ ಸಿಬ್ಬಂದಿ, ಕೇವಲ ಮೊಟ್ಟೆ ಅಷ್ಟೆ ಅಲ್ಲದೆ ಇತರ ಆಹಾರ ಧಾನ್ಯ ಕದ್ದು ಮಾರಾಟ ಮಾಡುತ್ತಾರೆ. ಮಕ್ಕಳ ಹೊಟ್ಟೆ ಸೇರಬೇಕಾದ ಆಹಾರ ಕಳ್ಳತನವಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಹಿನ್ನೆಲೆ ಶನಿವಾರ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಈ ಪ್ರಹಸನವನ್ನು ವಿಡಿಯೋ ಮಾಡಿರುವ ವೀರನಗೌಡ ಅವರು, ತಮಗೆ ಅಂಗನವಾಡಿ ಕಾರ್ಯಕರ್ತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಘಟನೆ ಬಗ್ಗೆ ಸ್ವತಃ ಸಿಎಂ ಕಚೇರಿ ಪ್ರತಿಕ್ರಿಯೆ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿಗೆ ಸೂಚಿಸಿದ್ದಾಗಿ ಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಸಿಡಿಪಿಒ ವಿರೂಪಾಕ್ಷಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಪ್ಪಳ ಡಿಡಿ ತಿಪ್ಪಣ್ಣ ಅವರಿಗೆ ನೋಟಿಸ್ ನೀಡಿರುವುದಾಗಿ ತಿಳಿಸಿದ್ದಾರೆ. ಘಟನೆ ಹಿನ್ನೆಲೆ ಸರ್ಕಾರ ಮತ್ತು ಸಚಿವರ ನಡೆಯನ್ನು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರರಿಂದಲೇ ಅಂಗನವಾಡಿ ಕೇಂದ್ರಕ್ಕೆ ಆಹಾರ ಧಾನ್ಯ ಮತ್ತು ಮೊಟ್ಟೆ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಆಗುತ್ತವೆ. ಈ ಬಗ್ಗೆ ಮೊದಲು ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಟೀಕಿಸಿದ್ದಾರೆ.
ನಾನು ಮಕ್ಕಳಿಂದ ಮೊಟ್ಟೆ ಕಸಿದುಕೊಂಡಿಲ್ಲ. ಕುದಿಸಿದ ಮೊಟ್ಟೆ ಕಳಪೆಯಾಗಿರುವುದು ಗೊತ್ತಾಗುತ್ತಿದ್ದಂತೆ ವಾಪಸ್ ಪಡೆದಿದ್ದೇನೆ, ಇದನ್ನೇ ವೀಡಿಯೋ ಮಾಡಿದ್ದಾರೆ. ನಮ್ಮ ಮೇಲೆ ದ್ವೇಷ ಇರುವವರು ಈ ರೀತಿ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತೆ ಲಕ್ಷ್ಮಿ ಹೇಳಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆಯನ್ನು ಅಮಾನತು ಮಾಡಲಾಗಿದೆ. ಘಟನೆ ಬಗ್ಗೆ ಸಂಪೂರ್ಣ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡುತ್ತೇನೆ ಎಂದು ಕನಕಗಿರಿ ಸಿಡಿಪಿಒ ವಿರೂಪಾಕ್ಷಿ ಹೇಳಿದ್ದಾರೆ.