ಈ ವೇಳೆ ಗೊರವನಹಳ್ಳಿಗೆ ಆಗಮಿಸಿದ ನಾಯಕರುಗಳಿಗೆ ಬೆಂಬಲ ಸೂಚಿಸಲು ಮುಂದಾಗಿದ್ದಾಗ ಗ್ರಾಪಂ ಪಿಡಿಒ ಗೇಟ್ ಗೆ ಬೀಗ ಜಡಿದು ಮಹಾತ್ಮ ಗಾಂಧಿ ಭಾವಚಿತ್ರವನ್ನು ದಿಗ್ಬಂಧನದಲ್ಲಿರಿಸಿದ್ದರು. ಇದರಿಂದ ರೊಚ್ಚಿಗೆದ್ದ ಧರಣಿ ನಿರತರು ವಿರೋಧ ಪಕ್ಷದ ನಾಯಕರು ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಬೀಗ ಒಡೆದು ನಾಯಕರೊಂದಿಗೆ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ನಗರಸಭಾ ವ್ಯಾಪ್ತಿಗೆ ಗೊರವನಹಳ್ಳಿ ಗ್ರಾಮ ಸೇರ್ಪಡೆ ವಿರೋಧಿಸಿ ಕಳೆದ ಭಾನುವಾರ ಗ್ರಾಪಂ ಬೀಗ ಒಡೆದು ಧರಣಿ ನಡೆಸಿದ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಗ್ರಾಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ಜಿ.ಬಿ.ಉಮೇಶ್. ಶಂಕರೇಗೌಡ ಹಾಗೂ ಜಿ.ಸಿ.ಮಹೇಶ್ ವಿರುದ್ಧ ಪೊಲೀಸರು ಬಿಎಸ್ಎನ್ ಕಾಯ್ದೆ 329, 324 ಹಾಗೂ 132ರ ಅನ್ವಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪಿಡಿಒ ಪೂರ್ಣಿಮಾ ಮತ್ತು ಕಾರ್ಯದರ್ಶಿ ಅಂಜಲದೇವಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ವಿರೋಧಿಸಿ ಕಳೆದ ಭಾನುವಾರ ವಿಪಕ್ಷ ನಾಯಕರಾದ ಆರ್. ಅಶೋಕ್, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಗೊರವನಹಳ್ಳಿಗೆ ಆಗಮಿಸಿದ ನಾಯಕರುಗಳಿಗೆ ಬೆಂಬಲ ಸೂಚಿಸಲು ಮುಂದಾಗಿದ್ದಾಗ ಗ್ರಾಪಂ ಪಿಡಿಒ ಗೇಟ್ ಗೆ ಬೀಗ ಜಡಿದು ಮಹಾತ್ಮ ಗಾಂಧಿ ಭಾವಚಿತ್ರವನ್ನು ದಿಗ್ಬಂಧನದಲ್ಲಿರಿಸಿದ್ದರು. ಇದರಿಂದ ರೊಚ್ಚಿಗೆದ್ದ ಧರಣಿ ನಿರತರು ವಿರೋಧ ಪಕ್ಷದ ನಾಯಕರು ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಬೀಗ ಒಡೆದು ನಾಯಕರೊಂದಿಗೆ ಧರಣಿ ನಡೆಸಿದರು.

ಈ ಹಿನ್ನೆಲೆಯಲ್ಲಿ ಪಿಡಿಒ ಪೂರ್ಣಿಮಾ ಹಾಗೂ ಕಾರ್ಯದರ್ಶಿ ಅಂಜಲದೇವಿ ಬೀಗ ಒಡೆದು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

------------

ಪ್ರಕರಣ ದಾಖಲಿಸಲು ರಾಜಕೀಯ ಪ್ರಭಾವ: ಸುನಂದ ಜಯರಾಂ ಕಿಡಿ

ಕನ್ನಡಪ್ರಭ ವಾರ್ತೆ ಮದ್ದೂರು

ನಗರಸಭೆ ವ್ಯಾಪ್ತಿಗೆ ಗೊರವನಹಳ್ಳಿ ಸೇರ್ಪಡೆ ವಿರೋಧಿಸಿ ಗ್ರಾಪಂ ಕಚೇರಿ ಬೀಗ ಮುರಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರ ಕ್ರಮವನ್ನು ರೈತ ಪರ ಹೋರಾಟಗಾರ್ತಿ ಸುನಂದ ಜಯರಾಂ ಖಂಡಿಸಿದ್ದಾರೆ.

ಗ್ರಾಪಂ ಕಚೇರಿ ಬೀಗ ಒಡೆಯುವಾಗ ನಾನೂ ಸಹ ಸ್ಥಳದಲ್ಲಿದ್ದೆ. ವಿರೋಧ ಪಕ್ಷದ ನಾಯಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು. ಜನಪ್ರತಿನಿಧಿಗಳು ಗ್ರಾಪಂ ಕಚೇರಿ ಬೀಗ ಒಡೆದು ಒಳ ನುಗ್ಗಿ ಧರಣಿ ನಡೆಸಿದ್ದಾರೆ ಹೊರತು ಯಾವುದೇ ಲೂಟಿ ಅಥವಾ ಕೊಳ್ಳೆ ಹೊಡೆದಿಲ್ಲ. ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿಲ್ಲ. ಆದರೆ, ಪೊಲೀಸರು ರಾಜಕೀಯ ಒತ್ತಡಕ್ಕೆ ಒಳಗಾಗಿ ಪಿಡಿಒ ಪೂರ್ಣಿಮಾ ಅವರಿಂದ ಬಲವಂತವಾಗಿ ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ ದೂರು ತೆಗೆದುಕೊಂಡಿದ್ದಾರೆ ಎಂದು ಆರೋಪಿದ್ದಾರೆ.

ಪೊಲೀಸರು ಶಾಸಕರ ಚೇಲಾಗಳಂತೆ ವರ್ತಿಸುವುದನ್ನು ಬಿಟ್ಟು ನಾವು ನ್ಯಾಯ ಸಮ್ಮತವಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಬೇಕು. ಇಲ್ಲವಾದಲ್ಲಿ ಗೆಜ್ಜಲಗೆರೆ ಗ್ರಾಮಸ್ಥರು ಮತ್ತು ರೈತರು ತಮ್ಮನ್ನು ಬೀದಿಯಲ್ಲಿ ನಿಲ್ಲಿಸಿ ಪ್ರಶ್ನಿಸುವ ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ.

------------

ಗೋಡೆ ಬರಹ ರಚಿಸಿ ವಿಭಿನ್ನ ರೀತಿಯ ಚಳವಳಿ

ಮದ್ದೂರು: ನಗರಸಭೆ ವ್ಯಾಪ್ತಿಗೆ ಗೆಜ್ಜಲಗೆರೆ ಗ್ರಾಮ ಸೇರಿ 4 ಗ್ರಾಪಂಗಳ ಸೇರ್ಪಡೆ ವಿರೋಧಿಸಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿರುವ ಜನಪ್ರತಿನಿಧಿಗಳು , ರೈತರು ಹಾಗೂ ಗ್ರಾಮಸ್ಥರು ಶುಕ್ರವಾರ ಪಂಚಾಯಿತಿ ಉಳಿಸಿ ಎಂಬ ಘೋಷಣೆಯೊಂದಿಗೆ ಗೋಡೆ ಬರಹ ರಚಿಸಿ ವಿಭಿನ್ನ ರೀತಿಯ ಚಳವಳಿ ನಡೆಸಿದರು.

ನಮ್ಮ ಪಂಚಾಯಿತಿ ನಮ್ಮ ಹಕ್ಕು, ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಬೇಡ, ಪಂಚಾಯಿತಿ ಉಳಿಸಿ ಎಂಬ ಒಕ್ಕೊರಲಿನ ಘೋಷಣೆಯೊಂದಿಗೆ ನಗರಸಭೆ ಸೇರ್ಪಡೆಗೆ ವಿರೋಧಿಸಿದರು. ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷೆ ರಾಧಾ, ಉಪಾಧ್ಯಕ್ಷೆ ದೀಪಿಕಾ, ರೈತ ಮುಖಂಡರಾದ ಜಿ.ಎ.ಶಂಕರ್, ಜಿ.ಎಚ್.ವೀರಪ್ಪ, ಚಂದ್ರಶೇಖರ್, ಜಿ.ಡಿ.ಚಂದ್ರಶೇಖರ್ ಹಾಗೂ ಮಹಿಳಾ ಸಂಘಟನೆಯ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.