ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ಕೇಂದ್ರ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿ ಸುಮೋಟೋ ಕೇಸು ದಾಖಲಿಸಿ ಹಿರಿಯ ವಕೀಲನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಸಾಮಾಜಿಕ ಹೋರಾಟಗಾರ ಹಾಗೂ ಚಲನಚಿತ್ರ ನಟ ಚೇತನ್ ಅಹಿಂಸಾ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.ತಾಲೂಕು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ, ಭೀಮೋತ್ಸವ ಆಚರಣಾ ಸಮಿತಿ, ಛಲವಾದಿ ಮಹಾಸಭಾ, ಅಂಬೇಡ್ಕರ್ ಸೇನೆ, ಅಂಬೇಡ್ಕರ್ ಸೇವಾ ಸಮಾಜ, ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಸಮಾಜದ ಹಲವು ಒಕ್ಕೂಟಗಳ ವತಿಯಿಂದ ನಡೆದ ಸಂವಿಧಾನದ ಉಳಿವಿಗಾಗಿ ಬೃಹತ್ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂವಿಧಾನದ ಅಡಿಯಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿರೋಧ ವ್ಯಕ್ತಡಿಸಲು ಪ್ರತಿಯೊಬ್ಬರಿಗೂ ಅವಕಾಶವಿದೆ. ಆದರೆ ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ದೇಶದ ಜನರಿಗೆ ಸುಪ್ರೀಂ ಕೋರ್ಟ್ ಮೇಲೆ ಅಪಾರ ನಂಬಿಕೆ, ಗೌರವ ಇದೆ. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಗವಾಯಿ ಅವರ ಮೇಲೆ ಹಿರಿಯ ವಕೀಲನೊಬ್ಬ ಶೂ ಎಸೆದಿದ್ದು ಅಕ್ಷಮ್ಯ ಅಪರಾಧ. ಸಂವಿಧಾನಕ್ಕೆ ಮಾಡಿದ ಅಪಮಾನ. ಹಿರಿಯ ವಕೀಲರು ಕಾನೂನು ಕೈಗೆ ಎತ್ತಿಕೊಳ್ಳಲು ಅಧಿಕಾರ ಕೊಟ್ಟವರು ಯಾರು?. ಸಂವಿಧಾನದ ಅಡಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಬಹುದಾಗಿತ್ತು. ಆದರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡ ವಕೀಲರನ್ನು ಕೂಡಲೇ ಬಂಧಿಸಬೇಕು. ಮುಖ್ಯ ನ್ಯಾಯಾಧೀಶರು, ಹಿರಿಯ ವಕೀಲ ಮಾಡಿದ ಕೃತ್ಯವನ್ನು ಉದಾತ್ತ ಮನೋಭಾವದಿಂದ ನೋಡಿ ಅವರನ್ನು ಕ್ಷಮಿಸಿದ್ದಾರೆ. ಆದರೆ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಆತನಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಮುಂದೆ ಇಂತಹ ಹೀನ ಕೃತ್ಯವನ್ನು ಯಾರೂ ಮಾಡಬಾರದು ಎಂದು ಹೇಳಿದರು.ನಾವುಗಳು ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಮಾಡಬೇಕಿದೆ. ನಾವುಗಳು ಹೋರಾಟಕ್ಕೆ ಗಟ್ಟಿಯಾಗಿ ನಿಲ್ಲಬೇಕಿದೆ. ಇಂತಹ ಹೋರಾಟ ಚಳುವಳಿಗೆ ಎಂದೆಂದೂ ತನ್ನ ಬೆಂಬಲವಿದೆ ಎಂದರು.ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದದ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮಾತನಾಡಿದರು.
ಪ್ರತಿಭಟನೆಯಲ್ಲಿ ತಾಲೂಕು ಘಟಕದ ಅಧ್ಯಕ್ಷ ಬಾಣಸಂದ್ರ ಕೃಷ್ಣಸ್ವಾಮಿ ಭೀಮೋತ್ಸವ ಸಮಿತಿ ಅಧ್ಯಕ್ಷ ಸಿ.ಎಸ್.ಮೂರ್ತಿ. ಡಿಎಸ್.ಎಸ್ ಗುಬ್ಬಿ ಸಂಚಾಲಕ ಚೇಳೂರು ಶಿವನಂಜಪ್ಪ, ಚಿಕ್ಕನಾಯಕನಹಳ್ಳಿ ಸಂಚಾಲಕ ರಮೇಶ್, ಡಿಎಸ್.ಎಸ್ ಮುಖಂಡರಾದ ಕುಣಿಕೇನಹಳ್ಳಿ ಜಗದೀಶ್, ಬೀಚನಹಳ್ಳಿ ರಾಮಕೃಷ್ಣ, ಡೊಂಕಿಹಳ್ಳಿ ರಾಮಣ್ಣ, ಬಡಾವಣೆ ಶಿವರಾಜ್, ಬಿಗನೇನಹಳ್ಳಿ ಪುಟ್ಟರಾಜು, ಮಾಯಸಂದ್ರ ಸುಬ್ಬಣ್ಣ, ಲಕ್ಷ್ಮೀದೇವಮ್ಮ, ಬೀಚನಹಳ್ಳಿ ರಾಮಣ್ಣ, ಪುರ ರಾಮಚಂದ್ರಯ್ಯ, ದಬೇಘಟ್ಟ ವೇಣು, ಜಯ ಕರ್ನಾಟಕ ವೇದಿಕೆಯ ವೆಂಕಟೇಶ್, ಬೀಚನಹಳ್ಳಿ ಮಹಾದೇವಯ್ಯ, ಹೆಗ್ಗೆರೆ ನರಸಿಂಹಯ್ಯ, ಬುಗುಡನಹಳ್ಳಿ ರಂಗನಾಥ್, ರವೀಶ್, ಮಾಚೇನಹಳ್ಳಿ ಮಂಜುಳಾ ,ನಂದಿನಿ, ಸಾವಿತ್ರಮ್ಮ, ವಸಂತ್ ಬೊಮ್ಮೇನಹಳ್ಳಿ ಸೇರಿದಂತೆ ಹಲವು ಮುಖಂಡರುಗಳು ಇದ್ದರು.