ಜನಪರ ಹೋರಾಟಗಾರ ಎಡೆಹಳ್ಳಿ ಮಂಜುನಾಥ್ ಸೇರಿದಂತೆ 18 ಜನರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಲೆನಾಡು ರಕ್ಷಣಾ ಸೇನೆಯ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಗೌರವಾಧ್ಯಕ್ಷರಾದ ಎಡೆಹಳ್ಳಿ ಆರ್‌. ಮಂಜುನಾಥ್, ಕಾಡಾನೆ ಸಂರಕ್ಷಣಾ ಸಮಿತಿ ಅಧ್ಯಕ್ಷ ಹುರುಡಿ ವಿಕ್ರಂ ಹಾಗೂ ಕಾಫಿ ಬೆಳೆಗಾರರ ಸಂಘಟನೆಯ ಬೆಕ್ಕನಹಳ್ಳಿ ನಾಗರಾಜ್ ಅವರನ್ನು ಒಳಗೊಂಡಂತೆ ಇನ್ನಿತರ 16 ಜನರ ಮೇಲೆ ಪ್ರಕರಣ ದಾಖಲಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಜನಪರ ಹೋರಾಟಗಾರ ಎಡೆಹಳ್ಳಿ ಮಂಜುನಾಥ್ ಸೇರಿದಂತೆ 18 ಜನರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಲೆನಾಡು ರಕ್ಷಣಾ ಸೇನೆಯ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಜಾನಕಿರೆ ಸಾಗರ್, ಸಂಘಟನೆಯ ರಾಜ್ಯ ಗೌರವಾಧ್ಯಕ್ಷರು ಸೇರಿದಂತೆ ಒಟ್ಟು 18 ಜನರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಗೌರವಾಧ್ಯಕ್ಷರಾದ ಎಡೆಹಳ್ಳಿ ಆರ್‌. ಮಂಜುನಾಥ್, ಕಾಡಾನೆ ಸಂರಕ್ಷಣಾ ಸಮಿತಿ ಅಧ್ಯಕ್ಷ ಹುರುಡಿ ವಿಕ್ರಂ ಹಾಗೂ ಕಾಫಿ ಬೆಳೆಗಾರರ ಸಂಘಟನೆಯ ಬೆಕ್ಕನಹಳ್ಳಿ ನಾಗರಾಜ್ ಅವರನ್ನು ಒಳಗೊಂಡಂತೆ ಇನ್ನಿತರ 16 ಜನರ ಮೇಲೆ ಪ್ರಕರಣ ದಾಖಲಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ಹೇಳಿದರು.

ರಕ್ಷಣಾ ಸೇನೆಯ ಗೌರವಾಧ್ಯಕ್ಷರಾದ ಎಡೆಹಳ್ಳಿ ಆರ್. ಮಂಜುನಾಥ್ ಅವರು ಕಳೆದ 15 ವರ್ಷಗಳಿಂದ ನಿರಂತರವಾಗಿ ಕಾಡಾನೆ–ಮಾನವ ಸಂಘರ್ಷದ ವಿರುದ್ಧ ಹೋರಾಟ ನಡೆಸುತ್ತಾ, ಅಧ್ಯಯನ ಮಾಡಿ ವರದಿಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿರುವ ಹೋರಾಟಗಾರರಾಗಿದ್ದಾರೆ. ತಮ್ಮ ರಾಜಕೀಯ, ಶೈಕ್ಷಣಿಕ ಹಾಗೂ ಧಾರ್ಮಿಕ ಜೀವನದಲ್ಲಿ ಸತ್ಯ, ನ್ಯಾಯ, ಧರ್ಮನಿಷ್ಠೆಯಿಂದ ನಡೆದುಕೊಂಡಿರುವ ಸಜ್ಜನ ವ್ಯಕ್ತಿಯವರಾಗಿದ್ದಾರೆ. ಅವರ ಪೂರ್ವಾಪರ ಹೋರಾಟಗಳನ್ನು ಪರಿಗಣಿಸದೆ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ಎರಡು ವರ್ಷಗಳ ಹಿಂದೆ ನಡೆದ ಅರ್ಜುನನ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಕ್ಕಾಗಿ ಈ ಪ್ರಕರಣ ದಾಖಲಿಸಲಾಗಿದೆ. ಇದು ಸಾಂಸ್ಕೃತಿಕ ರಾಯಭಾರಿ ಸಾಕಾನೆ ಅರ್ಜುನನಿಗೆ ಮಾಡಿದ ದ್ರೋಹವಾಗಿಯೂ ಪರಿಗಣಿಸಬೇಕಾಗಿದೆ ಎಂದು ಹೇಳಿದರು.

ಸರ್ಕಾರ ಗಂಭೀರ ಚಿಂತನೆ ನಡೆಸಿ ತಕ್ಷಣವೇ ದಾಖಲಿಸಿರುವ ಪ್ರಕರಣವನ್ನು ಹಿಂಪಡೆದು ಹೋರಾಟಗಾರರಿಗೆ ಗೌರವ ಸೂಚಿಸಬೇಕೆಂದು ಮನವಿ ಸಲ್ಲಿಸಲಾಯಿತು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.