ಸಾರಾಂಶ
ಮಹಿಳಾ ಸಬಲೀಕರಣ ಉಪನ್ಯಾಸ
ಕನ್ನಡಪ್ರಭ ವಾರ್ತೆ ಬೇಲೂರುಮಹಿಳೆಯರ ಮೇಲಿನ ದೌರ್ಜನ್ಯವು ಇತ್ತೀಚಿನ ದಿನಗಳಲ್ಲಿ ಏರಿಕೆಯಾಗುತ್ತಿದೆ. ಕೌಟಂಬಿಕ ಹಿಂಸಾಚಾರ, ಮಹಿಳೆಯರ ವಿರುದ್ಧದ ತಾರತಮ್ಯ ಹಾಗೂ ಪಕ್ಷಪಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಉಪನ್ಯಾಸಕಿ ಹಾಗೂ ವಾಗ್ಮಿ ನಾಗಶ್ರೀ ತ್ಯಾಗರಾಜ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಚನ್ನಕೇಶವ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ಹಾಗೂ ಸರಸ್ವತಿ ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಸಬಲೀಕರಣ ನಿರ್ಣಾಯಕವಾಗಿದೆ. ಶಿಕ್ಷಣ ಹಾಗೂ ಆರೋಗ್ಯದಂತಹ ಕೆಲವು ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯ ಹೊರತಾಗಿಯೂ ದೇಶದ ಮಹಿಳೆಯರು ಇನ್ನೂ ಪೂರ್ಣ ಸಬಲೀಕರಣಕ್ಕೆ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ ಎಂದು ವಿಷಾದಿಸಿದರು.ತಾಳ್ಮೆ, ದೈವಿಕ ಗುಣವಿರುವ ಶಿಕ್ಷಕರ ಶಿಸ್ತು ಇತರರಿಗೆ ಮಾದರಿಯಾಗಿರುತ್ತದೆ. ಒಂದು ಕಾಲಘಟ್ಟದಲ್ಲಿ ಗುರುಗಳಿಗೆ ಕೈ ಮುಗಿದು ಕರೆತರುವ ದಿನಗಳಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಗುರುಗಳೇ ವಿದ್ಯಾರ್ಥಿಗಳಿಗೆ ಕೈ ಮುಗಿದು ಕರೆತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಂಸ್ಕಾರಯುತ ಶಿಕ್ಷಣ ದೂರವಾಗುತ್ತಿರುವುದೇ ಕಾರಣವಾಗಿದೆ. ಸಾಹಿತ್ಯದ ಹಾಗೂ ಶಿಸ್ತಿನ ಶಿಕ್ಷಣ ದೊರಕಿದರೆ ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಾಲಾಕ್ಷ ಮಾತನಾಡಿ, ಮಾತೃರೂಪಿಯಾದ ಹೆಣ್ಣನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಸಮಾಜದ ಅಭಿವೃದ್ಧಿಯಲ್ಲಿ ಅವರ ಪಾತ್ರ ಬಹುಮುಖ್ಯವಾಗಿದೆ. ಅದರಲ್ಲೂ ಶಿಕ್ಷಣ ಸೇವೆ, ವಿಜ್ಞಾನ ಹಾಗೂ ತಂತ್ರಜ್ಞಾನದಂತಹ ಹಲವು ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.ಜಗತ್ತಿನಲ್ಲಿ ಪುರುಷರಿಗಿಂತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಸಮಾಜವನ್ನು ಮುಂದೆ ಕೊಂಡೊಯ್ಯುವ ಮಹಿಳೆಯರನ್ನು ಗೌರವಿಸುವುದು ಇದರ ಉದ್ದೇಶವಾಗಿದೆ. ಸಮಾಜದಲ್ಲಿ ಮಹಿಳೆಯರ ಬಗ್ಗೆ ಜಾಗೃತಿ ಮೂಡಿಸಲು, ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಅವರನ್ನು ಪ್ರೋತ್ಸಾಹಿಸಲು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅತ್ಯಂತ ಮಹತ್ವದ್ದಾಗಿದೆ ಎಂದರು.
ಜಿಲ್ಲಾ ಕೆಎಸ್‌ಪಿಎಸ್‌ಟಿಎ ಜಿಲ್ಲಾಧ್ಯಕ್ಷ ಅಣ್ಣಪ್ಪ, ಸಮಾಜದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಶ್ರೇಷ್ಠವಾಗಿದೆ. ಅವರು ಎಲ್ಲಾ ರಂಗದಲ್ಲೂ ಸಾಧನೆ ಮಾಡುತ್ತಿದ್ದು ಅಂತಹ ಸಾಧಕಿಯರನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಪುರುಷ ಪ್ರಧಾನವಾದ ಕ್ಷೇತ್ರದಲ್ಲೂ ಅವರ ಸಾಧನೆ ಬಹುದೊಡ್ಡದಾಗಿದ್ದು ಅಂತಹವರಿಗೆ ಶಿಕ್ಷಕರ ಸಂಘದ ವತಿಯಿಂದ ಗೌರವಿಸುವ ಕೆಲಸವನ್ನು ಪ್ರತಿವರ್ಷ ಮಾಡಿಕೊಂಡು ಬರಲಾಗುತ್ತಿದೆ ಎಂದರು.ಇದೇ ವೇಳೆ ಸುಮಾರು ೧೫೦ಕ್ಕೂ ಹೆಚ್ಚು ಶಿಕ್ಷಕಿಯರನ್ನು ಗೌರವಿಸಲಾಯಿತು.
ಹಾಸನ ಜಿಲ್ಲಾ ಗೌರವಧ್ಯಕ್ಷ ರಾಜಶೇಖರ್, ಕಾಳೇಗೌಡ, ಚಂದ್ರಮತಿ, ಮಂಜುಳ, ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಕಸಾಪ ಅಧ್ಯಕ್ಷ ರಾಜೇಗೌಡ, ರಘುಕುಮಾರ್, ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ರಾಘವೇಂದ್ರ, ಲತಾ, ಜಿಲ್ಲಾ ಕಾರ್ಯದರ್ಶಿ ರೂಪ ಹಾಜರಿದ್ದರು.ಬೇಲೂರು ಪಟ್ಟಣದ ಶ್ರೀ ಚನ್ನಕೇಶವ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ಸಬಲೀಕರಣ ಉಪನ್ಯಾಸ ಹಾಗೂ ಸರಸ್ವತಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.