ಸಾರಾಂಶ
ಯಾದಗಿರಿ : ನಗರ ಠಾಣೆಯ ಪಿಎಸ್‌ಐ ಪರಶುರಾಮ್ ಶಂಕಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳ ತಂಡ, ಗುರುವಾರ ಅವರ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿ ಸಮೀಪದ ಸೋಮನಾಳ ಗ್ರಾಮದಿಂದ ಗುರುವಾರ ಯಾದಗಿರಿಗೆ ಆಗಮಿಸಿದ ಪರಶುರಾಮ್ ಅವರ ತಂದೆ ಜನಕಮುನಿ, ಸಹೋದರ ಹನುಮಂತ, ಮಾವ ವೆಂಕಟಸ್ವಾಮಿ ಹಾಗೂ ಸ್ನೇಹಿತ ಯರ್ರಿಸ್ವಾಮಿ ಮತ್ತಿತರರು ಸಿಐಡಿ ಅಧಿಕಾರಿಗಳ ಎದುರು ತಮಗೆ ತಿಳಿದ ಮಾಹಿತಿ ನೀಡಿದ್ದಾರೆ. ಸಿಐಡಿ ಎಸ್‌ಪಿ ಋತ್ವಿಕ್ ಶಂಕರ್ ಹಾಗೂ ಡಿವೈಎಸ್‌ಪಿ ಪುನೀತ್ ಹಾಗೂ ಇನ್ನಿತರ ಅಧಿಕಾರಿಗಳ ತಂಡ ಮಾಹಿತಿ ಪಡೆದಿದೆ.
ಇಲ್ಲಿನ ಡಿವೈಎಸ್‌ಪಿ ಕಚೇರಿಗೆ ಆಗಮಿಸಿದ ಕುಟುಂಬಸ್ಥರಿಂದ ಮಾಹಿತಿ ಪಡೆದು. ಅಲ್ಲಿಂದ ನೇರವಾಗಿ ಎಸ್‌ಪಿ ನಿವಾಸ ಸಮೀಪದ ಪೊಲೀಸ್ ವಸತಿ ಗೃಹದ ಪರಶುರಾಮ್ ಮನೆಗೆ ತೆರಳಿ ಸ್ಥಳ ಮಹಜರು ನಡೆಸಿದ್ದಾರೆ. ಮನೆಯಲ್ಲಿ ಇಲಾಖಾ ರಿವಾಲ್ವರ್(ಬಂದೂಕು) ವಾಕಿಟಾಕಿ ಕಂಡುಬಂದಿದೆ. ಎರಡು ಮೊಬೈಲ್‌ಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ. ನೆಲದ ಮೇಲೆ ಬಿದ್ದಿದ್ದ ರಕ್ತದ ಕಲೆ ಹಾಗೂ ಮತ್ತಿತರ ಕೆಲವೊಂದು ವಸ್ತುಗಳನ್ನು ಪ್ರಯೋಗಾಲಯ (ಎಫ್ಎಸ್‌ಎಲ್) ಗೆ ಕಳುಹಿಸಲಾಗಿದೆ.
ಮನೆ ಪರಿಶೀಲನೆ ವೇಳೆ ಸುಮಾರು ₹7.33 ಲಕ್ಷ ನಗದು ಹಣ ಹಾಗೂ ಶಾಸಕರ ಹೆಸರಿನ ಖಾಲಿ ಲೆಟರ್ ಹೆಡ್ ಪತ್ತೆಯಾಗಿದ್ದು, ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸ್ವಗ್ರಾಮದಲ್ಲಿ ತಾಯಿ ಹೆಸರಲ್ಲಿದ್ದ ಪ್ಲಾಟ್ ಮಾರಿ ಹಣ ಪಡೆದಿದ್ದರು ಎನ್ನಲಾಗಿದೆ.
ಜೊತೆಗೆ, ಕಾರಟಗಿಯಲ್ಲಿರುವ ತಮ್ಮ ಸ್ನೇಹಿತರ ಜೊತೆ ಮಾತನಾಡಿದ್ದ ಪರಶುರಾಮ್, ₹2 ಲಕ್ಷ ಹಣದ ಸಹಾಯ ಕೇಳಿದ್ದರು. ಒಂದು ವಾರದ ನಂತರ ಹಣ ಕೊಡುವುದಾಗಿ ಸ್ನೇಹಿತ ಹೇಳಿದಾಗ, ಅಷ್ಟರಲ್ಲೇ ನೌಕರಿ ಹೋಗುತ್ತದೆ ಎಂದಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇದೇ ವೇಳೆ, ಪರಶುರಾಮ್ ಅವರ ಹೆಸರಿನ ಬ್ಯಾಂಕ್ ಖಾತೆಯಲ್ಲಿ 6 ಲಕ್ಷ ರು.ವರೆಗೆ ಹಣ ಜಮೆಯಾದ ಬಗ್ಗೆಯೂ ಮಾಹಿತಿ ದೊರಕಿದ್ದು, ಶುಕ್ರವಾರ ಬ್ಯಾಂಕ್‌ಗೆ ಸಿಐಡಿ ಅಧಿಕಾರಿಗಳು ಹೋಗುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು "ಕನ್ನಡಪ್ರಭ "ಕ್ಕೆ ತಿಳಿಸಿವೆ.
-ಹಿನ್ನೆಲೆ:
ಆಗಸ್ಟ್ 2ರಂದು ಶುಕ್ರವಾರ ಪಿಎಸ್‌ಐ ಪರಶುರಾಮ್ ಮೃತಪಟ್ಟಿದ್ದರು. ಕುಟುಂಬಸ್ಥರಿಂದ ಗಂಭೀರ ಆರೋಪ ಹಾಗೂ ತೀವ್ರ ಪ್ರತಿಭಟನೆಗಳಿಗೆ ಮಣಿದಿದ್ದ ಪೊಲೀಸರು, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಪುತ್ರ ಸನ್ನೀಗೌಡ ವಿರುದ್ಧ ಶನಿವಾರ (ಆ.3)ಮಧ್ಯಾಹ್ನ ಪ್ರಕರಣ ದಾಖಲಿಸಿದ್ದರು. ಸಂಜೆ ವೇಳೆಗೆ ಸರ್ಕಾರ ಇದರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿಗೆ ಆದೇಶಿಸಿ 18 ಗಂಟೆಗಳಲ್ಲಿ, ಭಾನುವಾರ ಬೆಳಗ್ಗೆಯೇ ಆಗಮಿಸಿದ್ದ ಸಿಐಡಿ ಅಧಿಕಾರಿಗಳ ತಂಡ, ತನಿಖೆ ತೀವ್ರಗೊಳಿಸಿದೆ.