ಪುತ್ತೂರು: ಗೇರು ಸಂಸ್ಕರಣೆಗೆ ಮಹತ್ವ ನೀಡಬೇಕಾಗಿರುವ ಬೆಳೆಯಾಗಿದ್ದು, ನಮ್ಮ ಆರೋಗ್ಯಕ್ಕೆ ಪೂರಕವಾಗಿರುವ ಸಮತೋಲಿತ ಪೋಷಕಗಳು ಇರುವ ಗೇರುಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆಯ ಕಡೆಗೆ ಸರಕಾರಗಳ ಪ್ರೋತ್ಸಾಹಕರ ಬೆಂಬಲದ ಅವಶ್ಯಕತೆ ಇದೆ ಎಂದು ತಮಿಳುನಾಡು ತಿರುಚಿರಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಆರ್. ಸೆಲ್ವರಾಜನ್ ಅಭಿಪ್ರಾಯಪಟ್ಟರು.ಪುತ್ತೂರಿನ ಮೊಟ್ಟೆತ್ತಡ್ಕದಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಬುಧವಾರ ನಡೆದ ಗೇರು ದಿನಾಚರಣೆ ಮತ್ತು ಗೇರು ಹಣ್ಣಿನ ಮೌಲ್ಯವರ್ಧನೆ ಕುರಿತಂತೆ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಕೊಚಿನ್ ನ ಗೇರು ಮತ್ತು ಕೊಕ್ಕೋ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕಿ ಡಾ. ಫೆಮಿನಾ ಮಾತನಾಡಿ, ದೇಶದಲ್ಲಿ ಕೆಲವಾರು ನಿರ್ದಿಷ್ಟ ಕಾರಣಗಳ ದೆಸೆಯಿಂದ ಗೇರು ಹಣ್ಣಿನ ಮೌಲ್ಯವರ್ದಿತ ಉತ್ಪನ್ನಗಳ ಅಭಿವೃದ್ಧಿ ನಿರ್ದಿಷ್ಟ ಮಟ್ಟವನ್ನು ತಲುಪದೆ ತೀರಾ ಸಣ್ಣ ಮಟ್ಟದಲ್ಲಷ್ಟೇ ಬಳಕೆಯಾಗುತ್ತಿದೆ. ಇದನ್ನು ಮೀರಿ ಗೇರು ಹಣ್ಣಿನ ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯ ಗುರಿಯನ್ನು ನಾವು ಸಾಧಿಸಿದ್ದೇ ಆದಲ್ಲಿ ಖಂಡಿತವಾಗಿಯೂ ಇದು ಗ್ರಾಮೀಣ ಔದ್ಯೋಗಿಕ ಪ್ರಗತಿಗೆ ಸಹಾಯಕವಾಗುವುದರಲ್ಲಿ ಸಂಶಯವಿಲ್ಲ ಎಂದರು.

ಗೇರು ಹಣ್ಣಿನ ಮೌಲ್ಯ ವರ್ಧನೆ ಕುರಿತು ಮಾತನಾಡಿದ ಅಡಿಕೆ ಪತ್ರಿಕೆ ಮುಖ್ಯಸ್ಥ ಶ್ರೀ ಪಡ್ರೆ, ಗೇರು ಹಣ್ಣಿನ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲವೆನ್ನುವ ಅಭಿಪ್ರಾಯ ಕೇವಲ ಏಕ ಪಕ್ಷೀಯವೇ ಹೊರತು ಇದು ಸಾರ್ವತ್ರಿಕವಾದುದು ಎನ್ನಲು ಯಾವುದೇ ಆಧಾರವಿಲ್ಲ. ಕೇವಲ ಹಣ್ಣಿನ ಅಲ್ಪಕಾಲೀನ ಬಾಳಿಕೆ ಮತ್ತು ಒಗರುತನದ ಕಾರಣಕ್ಕೆ ಮೇಲ್ನೋಟಕ್ಕೆ ಬೆಳೆದು ಬಂದಿರುವ ನಂಬಿಕೆ ಇದಾಗಿದೆ. ಹೊರತು ಯಾರೂ ಕೂಡ ಬೆಳೆಗಾರ ಅಥವಾ ರೈತನನ್ನು ಕೇಳಿ ಪಡೆದಂತಹ ಅಭಿಪ್ರಾಯವಲ್ಲ ಎಂದರು.ಕ್ರಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಡಾ. ದಿನಕರ ಅಡಿಗ ಮಾತನಾಡಿ, ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ಕುರಿತಂತೆ ಅದರ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಉತ್ತೇಜಿಸುವತ್ತ ಹೆಚ್ಚು ಗಮನ ಹರಿಸಬೇಕಿದೆ ಎಂದು ಈ ಕುರಿತಂತೆ ಅಮುಲ್ ಹಾಗೂ ನಂದಿನಿ ಉತ್ಪನ್ನಗಳ ರೀತಿಯಲ್ಲಿ ಸಹಕಾರಿ ತತ್ವಗಳ ನೆಲೆಯಲ್ಲಿ ಚಿಂತಿಸುವ ಅಗತ್ಯವಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಸ್ಥೆ ವತಿಯಿಂದ ಅಭಿವೃದ್ಧಿಪಡಿಸಿದ ‘ನೇತ್ರ ಸಮೃದ್ಧಿ’ ಹೆಸರಿನ ಹೊಸ ಗೇರು ತಳಿಯನ್ನು ಬಿಡುಗಡೆಗೊಳಿಸಲಾಯಿತು. ಸಂಸ್ಥೆಯಿಂದ ಅಭಿವೃದ್ಧಿಪಡಿಸಿದ ಗೇರು ಹಣ್ಣಿನ ಬೆಲ್ಲ, ಮೊಳಕೆಯ ಚಿಕ್ಕಿ, ಹರ್ಬಲ್ ಟೀ ಯಂತಹ ಉತ್ಪನ್ನಗಳನ್ನು ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ವಿಜ್ಞಾನಿ ಡಾ.ಜಿ.ಎಸ್. ಮೋಹನ್ ಅವರ ತಂಡ ಅಭಿವೃದ್ಧಿ ಪಡಿಸಿದ ಸಂಸ್ಥೆಯ ನವೀಕೃತ ಜಾಲತಾಣವನ್ನು ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಚಿತ್ರದುರ್ಗ ಚಳ್ಳಕೆರೆಯ ಪ್ರಗತಿಪರ ಕೃಷಿಕ ಶ್ರೀಯುತ ನಾಗರಾಜ ಎನ್. ಅವರನ್ನು ಮತ್ತು ಗೇರುಹಣ್ಣಿನ ಹಲವು ಉತ್ಪನ್ನಗಳ ಲೈಸೆನ್ಸ್ ತೆಗೆದುಕೊಂಡು ಉತ್ಪಾದನೆ ಮಾಡಿ ಮಾರುಕಟ್ಟೆ ಮಾಡುತ್ತಿರುವ ಉದ್ಯಮಿ ರಾಧಾಕೃಷ್ಣ ಇಟ್ಟಿಗುಂಡಿ, ಚೊಕ್ಕಾಡಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.