ಜೈ ಶ್ರೀರಾಮ ಘೋಷಣೆ ಕೂಗಿದವರ ಮೇಲೆ ಬಿತ್ತು ಕಲ್ಲು

| Published : Jan 24 2024, 02:00 AM IST

ಸಾರಾಂಶ

ಬೆಳಗಾವಿಯ ಪಾಟೀಲ ಗಲ್ಲಿಯಲ್ಲಿ ಸೋಮವಾರ ರಾತ್ರಿ ಜೈ ಶ್ರೀರಾಮ ಎಂದು ಹೋಗುತ್ತಿದ್ದವರ ಮೇಲೆ ಕಲ್ಲು ತೂರಿ ಬಂದಿತು. ನಂತರ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಣ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಯೋಧ್ಯೆಯ ಶ್ರೀರಾಮಚಂದ್ರ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀರಾಮೋತ್ಸವ ಆಚರಿಸಿ, ಜೈ ಶ್ರೀರಾಮ ಘೋಷಣೆ ಕೂಗುತ್ತ ತೆರಳುತ್ತಿದ್ದ ಯುವಕರ ಗುಂಪಿನ ಮೇಲೆ ಕಲ್ಲು ತೂರಿದ ಘಟನೆ ಸೋಮವಾರ ರಾತ್ರಿ ಬೆಳಗಾವಿಯ ಪಾಟೀಲ ಗಲ್ಲಿಯಲ್ಲಿ ನಡೆದಿದೆ.

ಇದರಿಂದ ಆಕ್ರೋಶಗೊಂಡ ಯುವಕರ ಗುಂಪು ಪ್ರತಿಯಾಗಿ ಇನ್ನೊಂದು ಗುಂಪಿನ ಮೇಲೆ ಕಲ್ಲು ತೂರಿದೆ. ಎರಡು ಗುಂಪುಗಳ ನಡುವೆ ಪರಸ್ಪರ ಕಲ್ಲು ತೂರಾಟ ನಡೆದಿದೆ. ಈ ಘಟನೆ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಎರಡು ಉದ್ರಿಕ್ತ ಯುವಕರ ಗುಂಪನ್ನು ಚದುರಿಸಿದರು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶ್ರೀರಾಮೋತ್ಸವ ಸಂಭ್ರಮದಲ್ಲಿ ಮಿಂದೆದ್ದ ಯುವಕರ ಗುಂಪು ತಮ್ಮ ಮನೆಗಳತ್ತ ಹೊರಟಿದ್ದ ವೇಳೆ ಜೈ ಶ್ರೀರಾಮ ಘೋಷಣೆ ಕೂಗುತ್ತಿದ್ದರು. ಈ ವೇಳೆ ಮತ್ತೊಂದು ಯುವಕರ ಗುಂಪು ಹಠಾತ್ತನೇ ಕಲ್ಲು ತೂರಿದರು. ಇದಕ್ಕೆ ಪ್ರತಿಯಾಗಿ ಯುವಕರ ಗುಂಪು ಕಲ್ಲು ತೂರಿದೆ. ಹೀಗೆ ಎರಡು ಗುಂಪುಗಳ ನಡುವೆಯೇ ಪರಸ್ಪರ ಕಲ್ಲು ತೂರಾಟ ನಡೆದಿದೆ. ಸದ್ಯ ಪರಿಸ್ಥಿತಿ ಶಾಂತಿಯುತವಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಈ ಘಟನೆ ಮಾರ್ಕೆಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.