ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮತದಾನವನ್ನು ಪಾವಿತ್ರ್ಯತೆಗೆ ಹೋಲಿಸುತ್ತಾರೆ. ಈ ಪವಿತ್ರ ಮತಗಳನ್ನು ಅರ್ಹರಿಗೆ ಚಲಾಯಿಸಿ ಚುನಾಯಿಸಬೇಕು.

ಡಂಬಳ: ಪ್ರತಿಯೊಬ್ಬರ ಮತದಾನ ಬಹಳ ಅಮೂಲ್ಯವಾದುದು. ಅದನ್ನು ಬೇಕಾಬಿಟ್ಟಿಯಾಗಿ ಚಲಾಯಿಸಬಾರದು. ತಪ್ಪು ಮತದಾನ ಅಸಮರ್ಥ ನಾಯಕನ ಆಯ್ಕೆಗೆ ಕಾರಣವಾಗುತ್ತದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಾರ್ವತಿ ಹೊಂಬಳ ತಿಳಿಸಿದರು.

ಗ್ರಾಮದ ಸರ್ಕಾರಿ ಉರ್ದುಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಡಂಬಳ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮತದಾನವನ್ನು ಪಾವಿತ್ರ್ಯತೆಗೆ ಹೋಲಿಸುತ್ತಾರೆ. ಈ ಪವಿತ್ರ ಮತಗಳನ್ನು ಅರ್ಹರಿಗೆ ಚಲಾಯಿಸಿ ಚುನಾಯಿಸಬೇಕು. ಮತದಾನ ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತದೆ ಎಂದರು.

ಗ್ರಾಮ ಪಂಚಾಯಿತಿ ಕರ ವಸೂಲಿಗಾರ ಯಲ್ಲಪ್ಪ ಹಾದಿಮನಿ, ಗ್ರಂಥ ಪಾಲಕರ ಅಧ್ಯಕ್ಷ ಗವಸಿದ್ದಪ್ಪ ಹಳ್ಳಾಕಾರ ಮಾತನಾಡಿ, ಮತದಾನ ಕುರಿತು ಯುವಜನರಲ್ಲಿ ಪ್ರಜ್ಞೆ ಮೂಡಿಸಬೇಕು. ಹೊಸ ಮತದಾರರು ಮತ ಚಲಾಯಿಸುವಂತೆ ಪ್ರೇರೇಪಿಸಬೇಕು. ನಾವು ಒಬ್ಬರು ಮತ ಚಲಾಯಿಸದಿದ್ದರೆ ಏನೂ ಆಗುವದಿಲ್ಲವೆಂಬ ಉದಾಸೀನ ಬೇಡ. ಸಮರ್ಥರು ಚುನಾಯಿತಗೊಳ್ಳಲು ಮತ ಚಲಾಯಿಸಬೇಕು. ಆಸೆ- ಆಮಿಷಗಳಿಗೆ ಬಲಿಯಾಗದೆ ಮತ ಹಾಕಿ ಎಂದರು.

ಮುಖ್ಯೋಪಾಧ್ಯಾಯ ಡಿ.ಕೆ. ಹೊಳೆಮ್ಮನವರ, ಗ್ರಾಪಂ ಕಾರ್ಯದರ್ಶಿ ಚಾಂದಮುನ್ನಿ ನೂರಭಾಷಾ ಮಾತನಾಡಿ, ಪ್ರಜೆಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ದೇಶದ ಮೌಲ್ಯ ನಿರ್ಣಯವಾಗುತ್ತದೆ. ಪ್ರಜಾಪ್ರಭುತ್ವದ ಗೆಲುವು ಆಗಬೇಕಾದರೆ ಸಜ್ಜನರನ್ನು ಚುನಾಯಿಸುವ ಶಕ್ತಿ ಮತದಾನಕ್ಕಿದೆ ಎಂಬುದನ್ನು ದೃಢಪಡಿಸಲು ಮುಂದಾಗಬೇಕು ಎಂದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನದ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎಂ.ಜೆ. ಕಾಸ್ತಾರ, ಶಿಕ್ಷಕಿಯರಾದ ಸುಸನ್ನಾ ಕನವಳ್ಳಿ, ಹಸೀನಾ ಬಸರಿ, ನುಜಹತ್ತ ಶೈಕ್, ತಸ್ಲಿಮಾ ಪಟವಾರಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಫರಾನಾ ಸೋಟಕ್ಕನಾಳ, ಭೀಮನಗೌಡ ತಿಪ್ಪಾಪುರ, ಸರಳಾ ಯಾವಗಲ್ಲ, ಭೀಮವ್ವ ಬಂಡಿ, ಅಂಗನವಾಡಿ ಕಾರ್ಯಕರ್ತೆಯರಾದ ಎನ್.ಎಫ್. ಆನಿ, ಶೋಭಾ ಹಿರೇಮಠ, ವಿ.ಜಿ. ಬಡಿಗೇರ, ಸಾಮಕ್ಕ ನಡವಲಕೇರಿ, ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಇದ್ದರು.