ಜಾತಿ ಗಣತಿ: ಧರ್ಮ- ಹಿಂದೂ, ಜಾತಿ; ಉಪಜಾತಿ- ಲಿಂಗಾಯತ ಪಂಚಮಸಾಲಿ ಬರೆಸಿ

| Published : Sep 18 2025, 01:10 AM IST

ಸಾರಾಂಶ

ಸೆ. 22ರಿಂದ ಅಕ್ಟೋಬರ್‌ 7ರ ವರೆಗೆ ರಾಜ್ಯ ಸರ್ಕಾರ ನಡೆಸಲಿರುವ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿಗಳು ಏನು ಬರೆಯಿಸಬೇಕು ಎಂಬುದನ್ನು ಚರ್ಚಿಸಲು ಸಭೆ ಕರೆಯಲಾಗಿತ್ತು.

ಹುಬ್ಬಳ್ಳಿ: ರಾಜ್ಯದಲ್ಲಿ ಸೆ. 22ರಿಂದ ನಡೆಯಲಿರುವ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ- ಉಪಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದೇ ಬರೆಯಿಸಬೇಕು ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯಲ್ಲಿ ನಿರ್ಣಯಿಸಲಾಗಿದೆ. ಈ ನಡುವೆ ಹಿಂದೂ ಎಂದು ಬರೆಯಿಸಬೇಕು ಎಂಬ ಸಲಹೆಗೆ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ನಡೆಸಿತು. ಇದರಿಂದ ಕೆಲಕಾಲ ಸಭೆಯಲ್ಲಿ ಗೊಂದಲದ ವಾತಾವರಣವೂ ಸೃಷ್ಟಿಯಾಗಿತ್ತು.

ಇಲ್ಲಿನ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕೂಡಲಸಂಗಮದ ಜ. ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸೆ. 22ರಿಂದ ಅಕ್ಟೋಬರ್‌ 7ರ ವರೆಗೆ ರಾಜ್ಯ ಸರ್ಕಾರ ನಡೆಸಲಿರುವ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿಗಳು ಏನು ಬರೆಯಿಸಬೇಕು ಎಂಬುದನ್ನು ಚರ್ಚಿಸಲು ಸಭೆ ಕರೆಯಲಾಗಿತ್ತು. ರಾಜ್ಯದ ಪ್ರತಿ ಜಿಲ್ಲೆಗಳಿಂದಲೂ ಒಂದಿಬ್ಬರು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸರಿಸುಮಾರು 3 ಗಂಟೆಗೂ ಹೆಚ್ಚು ಕಾಲ ಸಭೆ ನಡೆಯಿತು. ಬಹುತೇಕ ಎಲ್ಲ ಜಿಲ್ಲೆಗಳಿಂದ ಬಂದಂತಹ ಪ್ರತಿನಿಧಿಗಳು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಎಲ್ಲರ ಸಲಹೆ, ಸೂಚನೆ ಕೇಳಿದ ಬಳಿಕ ಜ. ಕೂಡಲಸಂಗಮ ಶ್ರೀಗಳು ಮಾತನಾಡಿ, ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಯಿಸಬೇಕು. ಜಾತಿ ಹಾಗೂ ಉಪಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದೇ ನಮೂದಿಸಬೇಕು. ಈ ಬಗ್ಗೆ ಪ್ರತಿಯೊಬ್ಬರು ನಿಮ್ಮ ನಿಮ್ಮ ಊರುಗಳಲ್ಲಿ ಜಾಗೃತಿ ಮೂಡಿಸಬೇಕು. ಅದರಲ್ಲೂ ಸಮೀಕ್ಷೆಗೆ ಬಂದಾಗ ಹೆಣ್ಣು ಮಕ್ಕಳೇ ಮನೆಯಲ್ಲಿರುತ್ತಾರೆ. ಹೀಗಾಗಿ ಬರೀ ಲಿಂಗಾಯತ ಎಂದೇ ಬರೆಸುವ ಸಾಧ್ಯತೆ ಹೆಚ್ಚು. ಆದಕಾರಣ ಪಂಚಮಸಾಲಿ ಎಂಬುದನ್ನು ಸರಿಯಾಗಿ ಬರೆಸಲೇಬೇಕು ಎಂಬುದನ್ನು ತಿಳಿಸಬೇಕು.

ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ಜಾತಿ ಗಣತಿ ನಡೆಸಲಾಗುತ್ತಿದೆ. ಇದು ಅಗತ್ಯವಿರಲಿಲ್ಲ. ಕೇಂದ್ರ ಸರ್ಕಾರವೇ ಗಣತಿ ಮಾಡಬೇಕು. ರಾಜ್ಯ ಸರ್ಕಾರ ಮಾಡುತ್ತಿರುವುದು ಅಗತ್ಯವಿಲ್ಲ ಎಂದರು. ಆದರೂ ಈಗ ಅದು ಮಾಡುತ್ತಿರುವುದರಿಂದ ನಮ್ಮ ಸಮಾಜದವರು ಪಂಚಮಸಾಲಿ ಎಂದು ನಮೂದಿಸಬೇಕು ಎಂದರು.

ಗೊಂದಲಮಯ ವಾತಾವರಣ: ಇದಕ್ಕೂ ಮುನ್ನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಬೇಕು. ಉಳಿದಂತೆ ಲಿಂಗಾಯತ ಪಂಚಮಸಾಲಿ ಎಂದು ಜಾತಿ ಕಾಲಂನಲ್ಲಿ ಬರೆಯಿಸಬೇಕು ಎಂದರು. ಆದರೆ, ಆಗ ಕೆಲವರು ವಿರೋಧಿಸಿದರು. ಅಲ್ಲದೇ, ಹಿಂದೂ ಎಂಬುದು ಧರ್ಮವೇ ಅಲ್ಲ. ಧರ್ಮವನ್ನು ಲಿಂಗಾಯತ ಎಂದೇ ಬರೆಸೋಣ ಎಂದು ವಾದ ಮಂಡಿಸಿದರು. ಆಗ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಬಳಿಕ ಶ್ರೀಗಳು ಸಮಾಧಾನ ಪಡಿಸಿದರು.

ಬಳಿಕ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ದೇಶದಲ್ಲಿ ಅಧಿಕೃತವಾಗಿ ಏಳು ಧರ್ಮಗಳು ಮಾತ್ರ ಇವೆ. ಹಿಂದೂ, ಮುಸ್ಲಿಂ, ಪಾರ್ಸಿ, ಬೌದ್ಧ, ಕ್ರಿಶ್ಚಿಯನ್, ಜೈನ್‌, ಸಿಖ್‌ ಹೀಗೆ ಏಳು ಧರ್ಮಗಳು ಮಾತ್ರ ಇವೆ. 2011ರಲ್ಲಿ ಇತರೆ ಎಂಬುದನ್ನು ಧರ್ಮದ ಕಾಲಂನಲ್ಲಿ ಸೇರಿಸಲಾಗಿದೆ. ಆದರೆ, ನಾವೆಲ್ಲ ಹಿಂದೂಗಳಾಗಿರುವುದರಿಂದ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಬೇಕು. ಲಿಂಗಾಯತ ಎಂದು ಬರೆಯಿಸಲು ಕಾಲಂ ಇಲ್ಲ. ಅದು ಅಧಿಕೃತವಾಗಲ್ಲ. ಮುಂದೆ ಲಿಂಗಾಯತ ಪ್ರತ್ಯೇಕ ಧರ್ಮವಾದಾಗ ಲಿಂಗಾಯತ ಎಂದು ಬರೆಯಿಸಬಹುದು ಎಂದರು.

ಆದರೂ ಸಭೆಯಲ್ಲಿ ಆಗಾಗ ಹಿಂದೂ ಪದ ಬಳಸುವುದಕ್ಕೆ ಆಕ್ಷೇಪದ ಧ್ವನಿಗಳು ಜೋರಾಗಿ ಕೇಳಿ ಬಂದು ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿತ್ತು. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು ಎಂಬ ಸಲಹೆಗಳು ಬಂದವು. ಇದರಿಂದಾಗಿ ಶ್ರೀಗಳು, ಪಾಲ್ಗೊಂಡಿದ್ದ ಜನಪ್ರತಿನಿಧಿಗಳು, ಮುಖಂಡರು ಎಲ್ಲರು ಮುಜುಗರಗೊಳಗಾಗಿದ್ದಂತೂ ಸತ್ಯ. ಈ ಸಮೀಕ್ಷೆಗೆ ತಡೆಯಾಜ್ಞೆ ತರುವ ನಿಟ್ಟಿನಲ್ಲಿ ಸಮಾಜದ ವಕೀಲರ ಪರಿಷತ್‌ ಪ್ರಯತ್ನಿಸಬೇಕು ಎಂಬ ಬೇಡಿಕೆಯೂ ಕೇಳಿ ಬಂತು.

ಸಿಟ್ಟಾದ ಕುನ್ನೂರ; ಗೊಂದಲ ಸೃಷ್ಟಿ: ಈ ನಡುವೆ ಮಾಜಿ ಸಂಸದ ಮಂಜುನಾಥ ಕುನ್ನೂರ, ತಮಗೆ ಮಾತನಾಡಲು ಅವಕಾಶ ಸಿಗದೇ ಇರುವುದಕ್ಕೆ ಸಭೆಯಿಂದಲೇ ಎದ್ದು ಹೋಗಲು ರೆಡಿಯಾದರು. ಸಿಟ್ಟಾಗಿ ಶ್ರೀಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆಗ ಸಮಾಜದ ಮುಖಂಡರು ಅವರನ್ನು ಸಮಾಧಾನ ಪಡಿಸಲು ಮುಂದಾದರು. ಆದರೆ, ಸಭೆಯಲ್ಲಿ ಅಕ್ಷರಶಃ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಕೊನೆಗೆ ಸಮಾಜದ ಮುಖಂಡರು, ಶ್ರೀಗಳು ಸಮಾಧಾನ ಪಡಿಸಿ ಮಾತನಾಡಲು ಅವಕಾಶಕೊಟ್ಟರು. ಆಗ ಸಮಾಧಾನವಾದ ಕುನ್ನೂರ ಮಾತನಾಡಿ, ಈ ಸಮೀಕ್ಷೆ ಮಾಡುತ್ತಿರುವುದೇ ತಪ್ಪು, ನಾನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದರೂ ಸಮೀಕ್ಷೆ ಸರಿಯಲ್ಲ. ಇದರ ವಿರುದ್ಧ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪಿಐಎಲ್‌ ಹಾಕಿ ತಡೆಯಾಜ್ಞೆ ತರಬೇಕು ಎಂದು ವಾದಿಸಿದರು.