ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಾತಿ ಗಣತಿ ಜಾರಿಗೊಳಿಸಲು ಸರ್ಕಾರದ ಬಳಿ ಸರಿಯಾದ ದತ್ತಾಂಶ ಇಲ್ಲದೇ ಇರುವುದರಿಂದ, ಹೊಸದಾಗಿ ಗಣತಿ ಮಾಡಬೇಕಾಗಿದೆ. ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗ ಸಮುದಾಯದ ಎಲ್ಲರೂ ತಪ್ಪದೇ ತಮ್ಮ ಜಾತಿ ಭೋವಿ, ಉಪಜಾತಿ ವಡ್ಡರ್ ಎಂದೇ ಬರೆಸಬೇಕು ಎಂದು ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಮ್ಮ ಸಮುದಾಯವರಿಗೆ ಕರೆ ನೀಡಿದರು.ನಗರದ ಹೂರ ವಲಯದಲ್ಲಿನ ಭೋವಿ ಗುರಪೀಠದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ, ಪರಿಶಿಷ್ಟ ಜಾತಿ ಸಮೀಕ್ಷೆ, ಭೋವಿ ಜನಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಗ್ರಾಮ, ತಾಲೂಕು, ಜಿಲ್ಲೆಗಳಲ್ಲಿ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ತಂದೆ ಇಲ್ಲವೆ ತಾತನ ಮನೆಯಲ್ಲಿ ಆಶ್ರಯ ಪಡೆದಿರುವವರು ತಮಗೆ ಸ್ವಂತ ಮನೆ ಇಲ್ಲವೆಂದೂ, ಬ್ಯಾಂಕಿನ ಸಾಲದಲ್ಲಿ ವಾಹನ ಕೊಂಡಿರುವವರು ತಮಗೆ ಸ್ವಂತ ವಾಹನ ಇಲ್ಲವೆಂದೂ ಬರೆಸಬೇಕು. ವಾಹನದ ಸಾಲ ತೀರುವವರೆಗೆ ಅದು ಬ್ಯಾಂಕಿನ ಸ್ವತ್ತು ಎಂಬುದು ನಿಮ್ಮ ಗಮನದಲ್ಲಿರಲಿ ಎಂದರು.ಇದೇ ರೀತಿ ಬೇರೆ ಯಾವ ಅಸ್ತಿಯನ್ನು ನೀವುಗಳು ಬೇರೆಯವರಿಂದ ಅದರ ಮಾಹಿತಿಯನ್ನು ಗಣತಿದಾರರಿಗೆ ನೀಡಬೇಡಿ, ಸ್ವಂತ ದುಡಿಮೆ ಇದ್ದರೆ ಮಾತ್ರ ಮಾಹಿತಿ ನೀಡಿ ಎಂದ ಶ್ರೀಗಳು, ನೀವುಗಳು ಈಗ ನೀಡುವ ಮಾಹಿತಿಯಿಂದ ನಿಮ್ಮ ಮುಂದಿನ ಪೀಳಿಗೆ ತುಂಬಾ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಗಣತಿದಾರರಿಗೆ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ನೀಡುವಂತೆ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಸಮುದಾಯದ ಮುಖಂಡರಿಗೆ ಕರೆ ನೀಡಿದರು.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಮುಂದಿನ ಮೇನಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಸಭೆಯನ್ನು ಮಾಡಲಾಗುವುದು ಅಲ್ಲಿಗೆ ಬರುವಾಗ ಎಲ್ಲರು ತಮ್ಮ ಗ್ರಾಮದಲ್ಲಿನ ಸಮುದಾಯ ಜನತೆಯ ಮಾಹಿತಿಯನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಕೊಂಡು ಬರಬೇಕಿದೆ ಇದರಿಂದ ನಮಗೆ ಮಂದಿನ ದಿನದಲ್ಲಿ ಉಪಯೋಗವಾಗಲಿದೆ, ಈ ಕಾರ್ಯವನ್ನು ಸಮುದಾಯದವರೆಲ್ಲಾ ಸೇರಿ ಮಾಡಬೇಕಿದೆ ಇದರೊಂದಿಗೆ ಗ್ರಾಮಗಳಲ್ಲಿ ಸಭೆಯನ್ನು ಮಾಡುವುದರ ಮೂಲಕ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವಂತ ಕಾರ್ಯವನ್ನು ಮಾಡುವಂತೆ ತಿಳಿ ಹೇಳಿದರು.ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಸದಾನಂದಗೌಡರವರು ಮುಖ್ಯಮಂತ್ರಿಯಾಗಿದ್ದಾಗ ಈ ಒಳ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಹಲವಾರು ವರ್ಷಗಳಿಂದ ಪ್ರಭಾವಿ ವ್ಯಕ್ತಿಗಳಿಂದ ತಯಾರಿ ನಡೆಯುತ್ತಿತ್ತು, ಇದರ ಬಗ್ಗೆ ಸದನದಲ್ಲಿ ನಮ್ಮ ಭೋವಿ ಜನಾಂಗದ ಶಾಸಕರು, ಮಂತ್ರಿಗಳು ಸೇರಿ ತಡೆ ಹಿಡಿಯುವಂತ ಕಾರ್ಯವನ್ನು ಮಾಡಲಾಗಿತ್ತು ಇದರ ಬಗ್ಗೆ ಯಾರಿಗೂ ಅಷ್ಠಾಗಿ ಗೊತ್ತಿಲ್ಲ, ನಮ್ಮ ಹಂತದಲ್ಲಿ ಈ ಒಳ ಮೀಸಲಾತಿ ಜಾರಿಯಾಗದಂತೆ ತಡೆ ಹಿಡಿಯುವ ಕಾರ್ಯವನ್ನು ಮಾಡಲಾಗಿದೆ. ಈ ಮುಂಚೆ ನಮ್ಮ ಸಮುದಾಯಕ್ಕೆ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಎಸ್.ಸಿ.ಜನಾಂಗಕ್ಕೆ ಸೇರಿಸಿರಲಿಲ್ಲ, ಹರಿಹರದ ಹೊಳೆಯಿಂದ ಆಚೇಗೆ ನಮ್ಮ ಸಮುದಾಯದವರನ್ನು ಸಾಮಾನ್ಯ ವರ್ಗಕ್ಕೆ ಇಡಲಾಗಿತ್ತು ಇದರ ಬಗ್ಗೆ ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರಿಗೆ ಇದರ ಬಗ್ಗೆ ಪೂರ್ಣ ಪ್ರಮಾಣದ ವಿಷಯವನ್ನು ತಿಳಿಸಿ ರಾಜ್ಯ ಪೂರ್ಣ ಭೋವಿ ಸಮುದಾಯವನ್ನು ಎಸ್‌ಸಿ ವರ್ಗಕ್ಕೆ ಮಾಡಿಸಲಾಯಿತು. ನಮ್ಮ ಸಮುದಾಯದವರು ಇನ್ನೂ ಸಹಾ ಕಲ್ಲು ಒಡೆಯುವುದರಲ್ಲಿಯೇ ಇದ್ದಾರೆ ಅರ್ಥಿಕವಾಗಿ ಶೃಕ್ಷಣಿಕವಾಗಿ ಹಿಂದೆ ಉಳಿದಿದ್ದಾರೆ, ಇವರು ಪ್ರಗತಿಯನ್ನು ಹೊಂದಬೇಕಾದರೆ ಗುರುಗಳು ಹೇಳಿದ ರೀತಿಯಲ್ಲಿ ಜಾತಿಗಣತಿಯಲ್ಲಿ ಬರೆಸಬೇಕಿದೆ ಎಂದರು.
ಭೋವಿ ಅಭೀವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್ ಮಾತನಾಡಿ, ನಮ್ಮ ಸಮುದಾಯದವರು ನಮ್ಮ ಜಾತಿಯ ಹೆಸರನ್ನು ಹೇಳಲು ಹಿಂದೆ ಮುಂದೆ ನೋಡುತ್ತಿದ್ದಾರೆ ಅಕ್ಕ-ಪಕ್ಕದವರು ಏನು ಅನ್ನುತ್ತಾರೋ ಎಂಬ ಗೀಳು ಅವರನ್ನು ಕಾಡುತ್ತಿದೆ ಇದರಿಂದ ರಾಜ್ಯದಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಾಗಿ ಇದ್ದರೂ ಸಹಾ ಈ ರೀತಿಯ ಮನೋಭಾವದಿಂದ ಕಡಿಮೆ ಎನ್ನುವಂತಾಗಿದೆ, ಜಾತಿಗಣಿತಿಯವರು ಬಂದಾಗ ಜವಾಬ್ದಾರಿಯಿಂದ ವರ್ತಿಸಿ ನಮ್ಮ ಜಾತಿಯ ಹೆಸರನ್ನು ದೈರ್ಯವಾಗಿ ತಿಳಿಸುವುದ್ದಲ್ಲದೆ ಬರೆಸಬೇಕಿದೆ. ನಮ್ಮ ಸಮುದಾಯದಲ್ಲಿಯೇ ನಮ್ಮಲ್ಲಿ ಒಡಕನ್ನು ಮೂಡಿಸುವ ಕಾರ್ಯವಾಗುತ್ತಿದೆ, ನಮ್ಮ ಹುಟ್ಟು-ಸಾವು ವಡ್ಡರಗೀಯೇ ಇರಬೇಕಿದೆ ನಾವು ವಡ್ಡರು ಎನ್ನುವುದಕ್ಕೆ ಹಿಂಜರಿಯಬಾರದು ಹೆಮ್ಮೆ ಪಡಬೇಕಿದೆ ಎಂದರು.ಎಚ್,ಅನಂದಪ್ಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು, ರವಿ ಪೂಜಾರ್ ಪ್ರಸ್ತಾವಿಕವಾಗಿ ಮಾತನಾಡಿದರು, ಭೋವಿ ಗುರುಪೀಠದ ಸಿಇಒ ಗೋವಿಂದಪ್ಪ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ್, ದೊಡ್ಡರಂಗಣ್ಣ, ಗೋಪಾಲ್, ಲಕ್ಷ್ಮಣ್ ರಾಡಿ ವಡ್ಡರ್, ಬಾಲಕೃಷ್ಣ ಬಸವರಾಜು, ವೆಂಕಟೇಶ್, ರಾಮು, ಸಿದ್ದರಾಮು ಜಯ್ಯಣ್ಣ, ರಾಮಾಂಜನೇಯ, ಪರಶುರಾಮ್, ಉಮಾ ಗಾದ್ದಪ್ಪ ಶಶಿಕಲಾ, ಮುನಿರಾಜು, ತಿಮ್ಮಯ್ಯ, ಮುನಿಯಪ್ಪ ಹನುಮಂತಪ್ಪ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಿಲ್ಲಾ, ತಾಲೂಕು ಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು.