ಸಾರಾಂಶ
ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಆರ್ಥಿಕ ಸಮೀಕ್ಷೆ (ಜಾತಿಗಣತಿ)ಯ ಅಂತಿಮ ವರದಿ ಕೊನೆಗೂ ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಮಂಡನೆಯಾಗಿದ್ದು, ಬರೋಬ್ಬರಿ 50 ಸಂಪುಟಗಳುಳ್ಳ ವರದಿಯ ಮುಖ್ಯಾಂಶಗಳನ್ನು ಸಚಿವರಿಗೆ ವಿವರಿಸಲಾಗಿದೆ.
ಬೆಂಗಳೂರು : ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಆರ್ಥಿಕ ಸಮೀಕ್ಷೆ (ಜಾತಿಗಣತಿ)ಯ ಅಂತಿಮ ವರದಿ ಕೊನೆಗೂ ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಮಂಡನೆಯಾಗಿದ್ದು, ಬರೋಬ್ಬರಿ 50 ಸಂಪುಟಗಳುಳ್ಳ ವರದಿಯ ಮುಖ್ಯಾಂಶಗಳನ್ನು ಸಚಿವರಿಗೆ ವಿವರಿಸಲಾಗಿದೆ. ಜತೆಗೆ ಏ.17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆದು ಜಾತಿಗಣತಿ ವರದಿ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ತೀರ್ಮಾನಿಸಲಾಗಿದೆ.
ತೀವ್ರ ವಿರೋಧದ ನಡುವೆ ಸಂಪುಟದಲ್ಲಿ ಸಲ್ಲಿಕೆಯಾಗಿರುವ ವರದಿಯ ಪ್ರಮುಖ ಅಂಶಗಳನ್ನು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಚಿವರಿಗೂ ಕಳುಹಿಸಲಿದ್ದಾರೆ. ಮುಖ್ಯಾಂಶಗಳನ್ನು ಆಧರಿಸಿ ಮುಂದಿನ ಗುರುವಾರ ವಿಶೇಷ ಸಚಿವ ಸಂಪುಟ ನಡೆಯಲಿದೆ.
ಈ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವರದಿಯಲ್ಲಿನ ಅಂಶಗಳನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ಸರ್ಕಾರ ತೀರ್ಮಾನ ಮಾಡುತ್ತದೆಯೇ ಅಥವಾ ಹತ್ತು ವರ್ಷಗಳ ಹಿಂದಿನ ಸಮೀಕ್ಷೆ ಎಂಬ ಕಾರಣ ನೀಡಿ ಇಂದೀಕರಣ (ಅಪ್ಡೇಟ್) ಮಾಡಲು ಸಮಿತಿ ರಚನೆ ಮಾಡುತ್ತದೆಯೇ ಎಂಬ ಕುತೂಹಲ ಮೂಡಿದೆ. ಸಂಪುಟ ಸದಸ್ಯರೇ ಈ ಹಿಂದೆ ಜಾತಿಗಣತಿ ವರದಿ ವಿರೋಧಿಸಿದ್ದರಿಂದ ಮುಂದೆ ಏನಾಗಲಿದೆ ಎಂಬ ಕುತೂಹಲ ಮೂಡಿದ್ದು, ಎಲ್ಲರ ದೃಷ್ಟಿ ಇದೀಗ ಮುಂದಿನ ಸಚಿವ ಸಂಪುಟದತ್ತ ನೆಟ್ಟಿದೆ.
ಜಾತಿವಾರು ಜನಗಣತಿ ಉದ್ದೇಶದಿಂದ 2015ರಲ್ಲಿ ಎಚ್.ಕಾಂತರಾಜು ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಮೀಕ್ಷೆ ಹೊಣೆ ನೀಡಲಾಗಿತ್ತು. ಅಂತಿಮ ವರದಿಯನ್ನು 2024ರ ಫೆಬ್ರವರಿಯಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಎರಡು ಮೂಟೆಗಳಲ್ಲಿ ಸಲ್ಲಿಸಿದ್ದರು. ಆಯೋಗ ರಚನೆಯಾದ 10 ವರ್ಷಗಳ ಬಳಿಕ ಹಾಗೂ ಸರ್ಕಾರಕ್ಕೆ ಪೂರ್ಣ ವರದಿ ಸಲ್ಲಿಕೆಯಾದ ವರ್ಷದ ಬಳಿಕ ಕೊನೆಗೂ ವರದಿಯ ಲಕೋಟೆಯನ್ನು ಇದೀಗ ತೆರೆಯಲಾಗಿದೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ತೆರೆದರು. ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಂಜಯ ಶೆಟ್ಟೆಣ್ಣನವರ್ ಸಚಿವ ಸಂಪುಟಕ್ಕೆ ವರದಿಯನ್ನು ವಿವರಿಸಿದರು.
ಜಾತಿವಾರು ವಿವರಗಳ 50 ಸಂಪುಟ ಮಂಡನೆ:
ಎರಡು ಪೆಟ್ಟಿಗೆಗಳಲ್ಲಿ ಬರೋಬ್ಬರಿ 50 ಸಂಪುಟಗಳಲ್ಲಿ ವರದಿ ಇದೆ. ಜಾತಿವಾರು ಜನಸಂಖ್ಯೆಯ ಒಂದು ಸಂಪುಟ, ಜಾತಿ ವರ್ಗಗಳ ಲಕ್ಷಣಗಳ ಕುರಿತ ಎಂಟು ಸಂಪುಟ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಲಕ್ಷಣಗಳ ಕುರಿತ ತಲಾ ಒಂದು ಸಂಪುಟ, ವಿಧಾನಸಭೆಯ ಜಾತಿವಾರು ಜನಸಂಖ್ಯೆ ಕುರಿತ ಎರಡು ಸಂಪುಟ ಸೇರಿ ಒಂದು ಪೆಟ್ಟಿಗೆಯಲ್ಲಿ 13 ಸಂಪುಟಗಳ ವರದಿ ಇದೆ.
ಮತ್ತೊಂದು ಪೆಟ್ಟಿಗೆಯಲ್ಲಿ ಜಾತಿವಾರು ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ, ಆರ್ಥಿಕ ವರದಿ ಕುರಿತು ನಾಲ್ಕು ಸಂಪುಟ, ಜಾತಿವಾರು ವರ್ಗಗಳ ಬಗ್ಗೆ 1, ಜಿಲ್ಲಾವಾರು ಕುಟುಂಬ ಹಾಗೂ ಜನಸಂಖ್ಯೆವಾರು ವಿವರಗಳ 30 ಸಂಪುಟ, ದ್ವಿತೀಯ ಮೂಲಗಳಿಂದ ಶೈಕ್ಷಣಿಕ ಹಾಗೂ ಔದ್ಯೋಗಿಕ ವರದಿ ಸೇರಿ 37 ಸಂಪುಟವನ್ನು ಎರಡನೇ ಪೆಟ್ಟಿಗೆ ಒಳಗೊಂಡಿದೆ. ಹೀಗೆ ಒಟ್ಟು 50 ಸಂಪುಟದ ಬೃಹತ್ ವರದಿಯನ್ನು ಸಂಪುಟದಲ್ಲಿ ಮಂಡಿಸಲಾಗಿದೆ.
ಗಣತಿ ಸರ್ವಾನುಮತದಿಂದ ಒಪ್ಪಿಗೆ-ಎಚ್.ಕೆ:
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ‘ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಗೆ ಎಲ್ಲಾ ಸಚಿವರೂ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ. ಜಾತ್ಯತೀತವಾಗಿ ಯಾವುದೇ ಸಚಿವರೂ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಎಲ್ಲರಿಗೂ ವರದಿಯನ್ನು ನೀಡಲಿದ್ದು, ಮುಂದಿನ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗುವುದು. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಶೇ. 94.17 ಜನಸಂಖ್ಯೆ ಸಮೀಕ್ಷೆ:
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಒಟ್ಟು 50 ಸಂಪುಟಗಳ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಿ ತೆರೆಯಲಾಗಿದೆ. ಈಗಾಗಲೇ ಒಂದಷ್ಟು ವಿಷಯಗಳನ್ನು ಸಂಪುಟದಲ್ಲಿ ಚರ್ಚಿಸಲಾಗಿದೆ. ಏ.17 ರಂದು ಗುರುವಾರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಗುವುದು.
2011ರ ಸಮೀಕ್ಷೆ ಪ್ರಕಾರ ರಾಜ್ಯದ ಜನಸಂಖ್ಯೆ 6.11 ಕೋಟಿ ಇತ್ತು. 2015ರ ವೇಳೆಗೆ ಅಂದಾಜಿನಂತೆ 6.35 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆ ಮಾಡಬೇಕು ಎಂಬ ಅಂದಾಜು ಮಾಡಿದ್ದೆವು. 2015ರಲ್ಲಿ ರಚಿಸಿದ ಆಯೋಗವು 5.98 ಕೋಟಿ ಜನರನ್ನು ಒಳಗೊಂಡ 1.35 ಕೋಟಿ ಕುಟುಂಬಗಳನ್ನು ಸಮೀಕ್ಷೆ ಮಾಡಿದೆ. ಅಂದರೆ ಶೇ.94.17 ರಷ್ಟು ಜನರನ್ನು ಸಮೀಕ್ಷೆ ನಡೆಸಿದ್ದು, ಕೇವಲ ಶೇ.5.83 (37 ಲಕ್ಷ) ಜನ ಮಾತ್ರ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಇದು ಯಶಸ್ವಿ ಸಮೀಕ್ಷೆ ಎಂದು ಹೇಳಿದರು.
165.51 ಕೋಟಿ ರು. ವೆಚ್ಚ:
54 ಮಾನದಂಡಗಳ ಪ್ರಕಾರ ಸಮೀಕ್ಷಾ ವರದಿ ಸಿದ್ಧಪಡಿಸಲು ಜಿಲ್ಲಾಧಿಕಾರಿಗಳು, ಆಯುಕ್ತರು, ಬಿಬಿಎಂಪಿ ಅಧಿಕಾರಿಗಳು ಸೇರಿ 31 ಮಂದಿ ಐಎಎಸ್ ಅಧಿಕಾರಿಗಳು, ಜಿಪಂ ಸಿಇಓಗಳು ಸೇರಿ 79 ಮಂದಿ, ತಹಸೀಲ್ದಾರ್, ನಗರಸಭೆ ಆಯುಕ್ತರು ಸೇರಿ 772 ಅಧಿಕಾರಿಗಳು, ತಹಸೀಲ್ದಾರ್ ಗ್ರೇಡ್-2 ಸೇರಿ 560, ಶಿಕ್ಷಕರು 1.33 ಲಕ್ಷ, ಕೃಷಿ, ತೋಟಗಾರಿಕೆ, ಪಂಚಾಯತ್‌ರಾಜ್ ಇಲಾಖೆಗಳ 22,190 ಮಂದಿ, ಇವರಿಗೆ ತರಬೇತಿ ನೀಡಿದ 2,788 ಮಂದಿ ಸೇರಿ 1.60 ಲಕ್ಷ ಮಂದಿ ಸಮೀಕ್ಷೆ ಕೆಲಸ ಮಾಡಿದ್ದಾರೆ.
ಸಮೀಕ್ಷೆಯನ್ನು ಯಾವ ರೀತಿ ಮಾಡಬೇಕು ಎಂಬ ಕುರಿತು ತಜ್ಞರ ತಂಡ ರಚಿಸಲಾಗಿತ್ತು. ಸಮೀಕ್ಷೆಗಾಗಿ ಕೇಂದ್ರ ಸರ್ಕಾರದಿಂದ 7 ಕೋಟಿ ರು. ಹಾಗೂ ರಾಜ್ಯ ಸರ್ಕಾರದಿಂದ 185.79 ಕೋಟಿ ರು. ಸೇರಿ 192.79 ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 165.51 ಕೋಟಿ ರು. ವೆಚ್ಚ ಮಾಡಲಾಗಿದೆ.
ಸಮೀಕ್ಷೆಯಲ್ಲಿ ಲಭ್ಯ ಅಂಕಿ-ಅಂಶಗಳನ್ನು ಆಯಾ ಜಿಲ್ಲೆಗಳಲ್ಲೇ ಗಣಕೀಕರಣಗೊಳಿಸಲಾಗಿದ್ದು, 43 ಕೋಟಿ ರು. ವೆಚ್ಚದಲ್ಲಿ ಗಣಕೀಕರಣ ಜವಾಬ್ದಾರಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಗೆ (ಬಿಇಎಲ್) ನೀಡಲಾಗಿತ್ತು. ಬಳಿಕ ಐಐಎಂಬಿ ಮೂಲಕ ದತ್ತಾಂಶವನ್ನು ಪುನರ್‌ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.10 ವರ್ಷಗಳ ಇತಿಹಾಸ
ಜಾತಿಗಣತಿ ನಡೆಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ (2014) ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್.ಕಾಂತರಾಜು ಅವರಿಗೆ ನೀಡಿದ್ದರು. ಹತ್ತು ವರ್ಷಗಳ ಬಳಿಕ ಕಳೆದ ವರ್ಷ ಪೂರ್ಣ ಪ್ರಮಾಣದ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಮೂಲಕ ಮುಖ್ಯಮಂತ್ರಿಗಳಿಗೆ ಆಯೋಗವು ವರದಿ ಸಲ್ಲಿಕೆ ಮಾಡಿದೆ.ಇದರ ಬೆನ್ನಲ್ಲೇ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳಿಂದ ವರದಿ ವೈಜ್ಞಾನಿಕವಾಗಿಲ್ಲ. ಮನೆ-ಮನೆಗೆ ಹೋಗಿ ಸಮೀಕ್ಷೆ ನಡೆಸಿಲ್ಲ. ಜತೆಗೆ ಮೂಲ ವರದಿ ನಾಪತ್ತೆಯಾಗಿದ್ದು, ವರದಿಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರ ಸಹಿ ಇಲ್ಲ ಎಂಬೆಲ್ಲ ಆರೋಪಗಳು ಕೇಳಿ ಬಂದಿದ್ದವು. ಸಿದ್ದರಾಮಯ್ಯ ಅವರು ವರದಿ ಜಾರಿಗೆ ಮುಂದಾದಾಗ ಸ್ವಪಕ್ಷೀಯ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದರು.
2024ರ ಫೆಬ್ರವರಿಯಲ್ಲಿ ಅಂತಿಮ ವರದಿ ಸಲ್ಲಿಕೆಯಾದರೂ ಸಂಪುಟದಲ್ಲಿ ಮಂಡನೆ ಮಾಡಲು ಹಲವು ಬಾರಿ ದಿನಾಂಕ ನಿಗದಿ ಮಾಡಿ ಮುಂದೂಡಲಾಗಿತ್ತು. ಇದೀಗ ವರದಿ ಸಲ್ಲಿಕೆಯಾದ ಒಂದು ವರ್ಷದ ಬಳಿಕ ವರದಿ ಸಂಪುಟದಲ್ಲಿ ಮಂಡನೆಯಾಗಿದೆ.
ಮುಂದೇನು?
- ಸಂಪುಟ ಸಭೆಯಲ್ಲಿ ಮಂಡನೆಯಾಗಿರುವ ವರದಿಯ ಪ್ರಮುಖಾಂಶಗಳನ್ನು ಈಗ ಸಿದ್ಧಪಡಿಸಲಾಗುತ್ತದೆ
- ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮುಖ್ಯಾಂಶಗಳನ್ನು ಎಲ್ಲ ಸಚಿವರಿಗೆ ಕಳುಹಿಸುತ್ತಾರೆ
- ಮಂತ್ರಿಗಳು ಆ ಬಗ್ಗೆ ಅಧ್ಯಯನ ಮಾಡಿ ಮುಂದಿನ ಗುರುವಾರ ವಿಶೇಷ ಸಂಪುಟ ಸಭೆಗೆ ಬರಲಿದ್ದಾರೆ- ಈಗ ಮಂಡನೆಯಾಗಿರುವ ಜಾತಿ ಗಣತಿಯನ್ನು ಯಥಾವತ್ತು ಜಾರಿ ಮಾಡಬೇಕಾ ಎಂದು ಚರ್ಚಿಸಲಾಗುತ್ತೆ
- ಹತ್ತು ವರ್ಷ ಹಿಂದಿನ ಸಮೀಕ್ಷೆ ಎಂಬ ಕಾರಣ ಅಪ್‌ಡೇಟ್ ಮಾಡಲು ಸಮಿತಿ ರಚಿಸುವ ಬಗ್ಗೆ ಚರ್ಚೆ ನಡೆಯಬಹುದು- ಹೀಗಾಗಿ ಮುಂದಿನ ಗುರುವಾರ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯ ಬಗ್ಗೆ ಭಾರೀ ಕುತೂಹಲವಿದೆ
ಅಧ್ಯಯನಕ್ಕೆ ಸಚಿವರು ಸಮಯ ಕೇಳಿದ್ದಾರೆವರದಿಯಲ್ಲಿನ ಎಲ್ಲ ಶಿಫಾರಸುಗಳನ್ನು ಸಚಿವರು ನೋಡಿಲ್ಲ. ಹಾಗಾಗಿ ಕೆಲ ಸಚಿವರು ವರದಿಯಲ್ಲಿ ಅಂಶಗಳು, ಶಿಫಾರಸುಗಳನ್ನು ಅವಲೋಕಿಸಲು ಸಮಯ ಕೇಳಿದ್ದಾರೆ. ಅವರಿಗೆ ಅವಕಾಶ ನೀಡಲಾಗಿದೆ. ಬಳಿಕ ಅವರು ಅಭಿಪ್ರಾಯ ತಿಳಿಸುತ್ತಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
37 ಲಕ್ಷ ಜನರ ಬಿಟ್ಟು
ಎಲ್ಲರ ಸರ್ವೇ ಆಗಿದೆ
6.35 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆ ಮಾಡಬೇಕು ಎಂಬ ಅಂದಾಜು ಮಾಡಿದ್ದೆವು. 2015ರಲ್ಲಿ ರಚಿಸಿದ ಆಯೋಗವು 5.98 ಕೋಟಿ ಜನರನ್ನು ಒಳಗೊಂಡ 1.35 ಕೋಟಿ ಕುಟುಂಬಗಳನ್ನು ಸಮೀಕ್ಷೆ ಮಾಡಿದೆ. ಅಂದರೆ ಶೇ.94.17 ರಷ್ಟು ಜನರನ್ನು ಸಮೀಕ್ಷೆ ನಡೆಸಿದ್ದು, ಕೇವಲ ಶೇ.5.83 (37 ಲಕ್ಷ) ಜನ ಮಾತ್ರ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಇದು ಯಶಸ್ವಿ ಸಮೀಕ್ಷೆ.
- ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ
ಸಂಪುಟ ಸಭೆಯಲ್ಲಿ
ಆಕ್ಷೇಪ ಬರಲಿಲ್ಲ
ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಗೆ ಎಲ್ಲಾ ಸಚಿವರೂ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ. ಜಾತ್ಯತೀತವಾಗಿ ಯಾವುದೇ ಸಚಿವರೂ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಎಲ್ಲರಿಗೂ ವರದಿಯನ್ನು ನೀಡಲಿದ್ದು, ಮುಂದಿನ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗುವುದು. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳೂ ಇಲ್ಲ.
- ಎಚ್.ಕೆ. ಪಾಟೀಲ್, ಕಾನೂನು ಸಚಿವ
ಜಾರಿ ಮಾಡಿದರೆತೀವ್ರ ಹೋರಾಟದಶಕದ ಹಿಂದೆ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ ಗಣತಿ ಅವೈಜ್ಞಾನಿಕ. ಸರ್ಕಾರ ಇದರ ಅನುಷ್ಠಾನಕ್ಕೆ ಮುಂದಾದರೆ ತೀವ್ರ ಹೋರಾಟ ನಡೆಸಲಾಗುವುದು. ಈ ಸಂಬಂಧ ಪಕ್ಷಾತೀತವಾಗಿ ಜನಪ್ರತಿನಿಧಿಗಳ ಸಭೆ ಕರೆದು ತೀರ್ಮಾನಿಸುತ್ತೇವೆ.- ಬಿ.ಕೆಂಚಪ್ಪಗೌಡ, ರಾಜ್ಯ ಒಕ್ಕಲಿಗರ ಸಂಘ--ಸಿಎಂ ವರದಿ ಬಿಡುಗಡೆಮಾಡಲಿ ನೋಡೋಣಜಾತಿ ಜನಗಣತಿ ವರದಿಯಲ್ಲಿ ಏನಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಸಿದ್ದರಾಮಯ್ಯ ಅವರು ಜಾತಿಗಣತಿ ವರದಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡು ಅಡ್ಡಾಡುತ್ತಿದ್ದಾರೆ. ಅದು ಬಿಡುಗಡೆಯಾದ ನಂತರ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುತ್ತೇನೆ.- ಡಾ. ಶಾಮನೂರು ಶಿವಶಂಕರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ