ಸುಂಟಿಕೊಪ್ಪ: ಜಾತಿ ಸಮೀಕ್ಷೆ ಗ್ರಾಮಸ್ಥರಿಗೆ ಆತಂಕದ ಛಾಯೆ

| Published : Oct 06 2025, 01:01 AM IST

ಸಾರಾಂಶ

ಸುಂಟಿಕೊಪ್ಪದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯು ಆಧಾರಿತ ಸಿಬ್ಬಂದಿ ಹಾಗೂ ಗ್ರಾಮಸ್ಥರಿಗೆ ಆತಂಕದ ಛಾಯೆ ಮೂಡಿಸಿದೆ.

ವಿನ್ಸೆಂಟ್‌ ಎಂ ಬಿ

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯು ಆಧಾರಿತ ಸಿಬ್ಬಂದಿ ಹಾಗೂ ಗ್ರಾಮಸ್ಥರಿಗೆ ಆತಂಕದ ಛಾಯೆ ಮೂಡಿಸಿದೆ. ಸರ್ಕಾರದ ನಿರ್ಲಕ್ಷ್ಯ, ಪೂರ್ವ ಸಿದ್ಧತೆಯ ಕೊರತೆ ಬಗ್ಗೆ ಅಸಮಾಧಾನ ಭುಗಿಲೆದ್ದಿದೆ.

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಜಾತಿ ಸಮೀಕ್ಷೆ ಗಣತಿಯು ಸಾಕಷ್ಟು ಲೋಪಗಳು ಮೇಲ್ನೋಟಕ್ಕೆ ಕಂಡು ಬಂದಿದೆ. ಈಗಾಗಲೇ ಮನೆಗಳಿಗೆ ಚೆಸ್ಕಾಂ ಅಳವಡಿಸಲಾಗಿರುವ ಸಂಖ್ಯೆಗಳು ಅಳಿಸಿ ಹೋಗಿದ್ದರೆ ಮತ್ತೊಂದು ಕಡೆಯಲ್ಲಿ ಮನೆಗೆ ಸಂಖ್ಯೆಗಳೇ ಇಲ್ಲದಾಗಿದೆ. ಮತ್ತೆ ಕೆಲವು ವಾಸದ ಮನೆಗಳಿಗೆ ಸಂಖ್ಯೆಯ ಸ್ಟಿಕ್ಕರ್ ಅಳವಡಿಸಿಲ್ಲ. ಕೆಲವು ಮನೆಗಳನ್ನು ಬಾಡಿಗೆಗೆ ನೀಡಿ ಅವುಗಳಲ್ಲಿ ಅಂತಾರಾಜ್ಯಗಳಾದ ಉತ್ತರ ಪ್ರದೇಶ, ಪಶ್ಚಿಮಬಂಗಾಳ, ರಾಜಸ್ಥಾನ ಹಾಗೂ ಅಸ್ಸಾಂ ರಾಜ್ಯಗಳ ಜನತೆ ನೆಲೆಸಿದ್ದಾರೆ. ಇದರಿಂದ ಸಮೀಕ್ಷೆದಾರರು ಸಮೀಕ್ಷೆ ನಡೆಸಲು ಗೊಂದಲ ಇರುವುದರಿಂದ, ನೈಜ ನಿವಾಸಿಗಳು ಬಹುಪಾಲು ಮಂದಿ ಸಮೀಕ್ಷೆಯಲ್ಲಿ ಕಣ್ಮೆರೆಯಾಗುವುದು ಖಚಿತ ಎಂದು ಹಲವಾರು ತಿಳಿಸಿದ್ದಾರೆ. ಸರ್ಕಾರ ವಿಧಿಸಿರುವ ಕಾಲಮಿತಿಯಲ್ಲಿ ಸಂಪೂರ್ಣವಾಗಿ ಈ ಗ್ರಾಮದ ಮೂಲ ನಿವಾಸಿಗಳು ದೊರೆಯುವವರೇ ಅಲ್ಲ ವಂಚಿತರಾಗಬಹುದು ಎಂದು ಸಂಶಯಿಸಲಾಗಿದೆ.

ಪಂಚಾಯಿತಿ ಸದಸ್ಯರೋರ್ವರ ಮನೆಗೆ ಜಾತಿ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಸಂಖ್ಯೆಯ ಫಲಕ (ಸ್ಟಿಕರ್) ಅಳವಡಿಸದೆ ಗೊಂದಲ ಸೃಷ್ಟಿಸಿದೆ. ಮತ್ತೊಂದು ಪ್ರಕರಣದಲ್ಲಿ ಒಂದು ಮನೆಗೆ ಮೀಟರ್ 4 ಕುಟುಂಬಗಳು ಬೇರೆ ಬೇರೆಯಾಗಿ ವಾಸಿಸುತ್ತಿದ್ದು ಅವರು ಇತರೆ ಜಾತಿ ಧರ್ಮಗಳಿಗೆ ಸಂಬಂಧಿಸಿದವರಾಗಿದ್ದಾರೆ. ಅವರು ಮಾಹಿತಿ ಸಂಖ್ಯೆಯ ಫಲಕ ಇಲ್ಲದೆ ಜಾತಿ ಸಮೀಕ್ಷೆಗೆ ಒಳಪಡದೆ ಹೊರಗುಳಿಯುವಂತಾಗಿದೆ. ಸಮೀಕ್ಷೆದಾರರಿಗೆ ಮತ್ತೊಂದು ಸಂಕಷ್ಟ ತಮ್ಮಲ್ಲಿರುವ ಸಾಪ್ಟ್ವೇರ್‌ಗಳು. ಹಳೆಯ ಮೊಬೈಲ್‌ಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆಗೊಳ್ಳದೆ ಇರುವುದರಿಂದ ಸಾಕಷ್ಟು ಸಮೀಕ್ಷೆ ಕರ್ತವ್ಯ ನಿರ್ವಹಿಸುತ್ತಿರುವ ಮಂದಿ ಸಮೀಕ್ಷೆ ಸಂದರ್ಭದಲ್ಲಿ ನೆಗೆಪಾಟಲಿಗೆ ಮತ್ತು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಮೀಕ್ಷೆದಾರರು ತೀವ್ರ ಸಂಕಷ್ಟದಿಂದ ಹೊಸ 5 ಜಿ ಮೊಬೈಲ್‌ಗಳತ್ತ ಮುಖಮಾಡಿಕೊಂಡಿದ್ದು ಸರ್ಕಾರವು ನೀಡಿರುವ ಕರ್ತವ್ಯವನ್ನು ನಿರ್ವಹಿಸಬೇಕಲ್ಲ ಎಂಬ ಜಿದ್ದಿಗೆ ಬಿದ್ದು ಕರ್ತವ್ಯ ನಿರ್ವಹಿಸಿದರೂ ಸಮಗ್ರವಾಗಿ ಮುಗಿಸಲು ಆಗುತ್ತಿಲ್ಲ ಎಂಬ ಆತಂಕ ಸಮೀಕ್ಷದಾರರಲ್ಲಿ ಮೂಡಿದೆ ಎಂದು ಸಮೀಕ್ಷದಾರರು ಅಳಲು ತೋಡಿಕೊಂಡಿದ್ದಾರೆ. ಹೆಚ್ಚಿನ ಮಂದಿ ಸರ್ಕಾರಿ ಶಿಕ್ಷಕರು ನಿವೃತ್ತಿಯ ಅಂಚಿನಲ್ಲಿದ್ದು, ತಂತ್ರಜ್ಞಾನದ ಕೊರತೆ ಎದುರಿಸುತ್ತಿದ್ದಾರೆ. ಮೊಬೈಲ್‌ನಲ್ಲಿ ಮಾಹಿತಿಯನ್ನು ಅಳವಡಿಸಿಕೊಳ್ಳಲು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾಲೇಜು ಮಕ್ಕಳನ್ನು ಇಲ್ಲವೇ ನುರಿತ ಸಹಾಯಕರನ್ನು ಕರೆದುಕೊಂಡು ಮನೆ ಮನೆಗೆ ಹೋಗುತ್ತಿರುವುದನ್ನು ಕಾಣಬಹುದು. ಇದರೊಂದಿಗೆ ಹಳ್ಳಿಗಳಲ್ಲಿ ಕೆಲವು ಕಡೆ ಗುಂಪು ಮನೆಗಳು ಕೆಲವು ಒಂಟಿ ಮನೆಗಳಿದ್ದು ಸಮೀಕ್ಷೆಗೆ ನಿಯೋಜಿತರಾದ ಶಿಕ್ಷಕ ಶಿಕ್ಷಕಿಯರು ಮನೆಗಳಿಗೆ ತೆರಳಿದಾಗ ಅವರಿಗೆ ನೀಡಲಾದ ಮನೆ ಸಂಖ್ಯೆ ಮತ್ತು ಮೊಬೈಲ್‌ನಲ್ಲಿ ದಾಖಲಾಗಿರುವ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಇದರಿಂದಾಗಿ ಸಮೀಕ್ಷೆ ನಡೆಸಲು ಸಾಧ್ಯವಾಗದೆ ವಾಪಸ್ಸು ಹಿಂತೆರಳಿರುವುದು ವರದಿಯಾಗಿದೆ. ಗಣತಿಗೆ ಬಂದ ಸಂದರ್ಭ ಅತ್ಯಂತ ಪ್ರಮುಖ ಮತ್ತು ಅವಶ್ಯಕ ದಾಖಲೆಯಾದ ಪಡಿತರ ಚೀಟಿಯನ್ನು ಪಡೆದು ಪಡಿತರ ಚೀಟಿಯಲ್ಲಿ ಪಡಿತರಿಗೆ ನೀಡಿರುವ ಸಂಖ್ಯೆಯನ್ನು ದಾಖಲಿಸಿದಾಗ ಪಡಿತರ ಚೀಟಿದಾರರ ಪಡಿತರ ಚೀಟಿಯಲ್ಲಿರುವ ಮಾಹಿತಿಗೂ ಸಮೀಕ್ಷೆ ಮಾಡುವವರ ಮೊಬೈಲ್‌ನಲ್ಲಿ ಬರುವ ಅದೇ ಪಡಿತರ ಚೀಟಿದಾರರ ಮಾಹಿತಿಗೂ ಬಹಳ ವ್ಯತ್ಯಾಸ ಕಾಣಬಹುದು. ಇದರಿಂದಾಗಿ ಸಮೀಕ್ಷೆ ಪೂರ್ಣಗೊಂಡು ತಂತ್ರಾಂಶದಲ್ಲಿ ಸೇರ್ಪಡೆಗೊಳಿಸುವ ಸಂದರ್ಭದಲ್ಲಿ ಮಾಹಿತಿ ಸಿಂದುತ್ವ ಹೊಂದಿಲ್ಲವೆಂದು ಮೊಬೈಲ್ ತಂತ್ರಂಶದಲ್ಲಿ ತೋರಿಸುತ್ತದೆ. ಇದರಿಂದಾಗಿ ಸಮೀಕ್ಷೆದಾರರಿಗೆ ಮಾಹಿತಿ ನೀಡುವವರಿಗೆ ಕಿರಿ ಕಿರಿ ಮತ್ತು ಇರಿಸು ಮುರಿಸು ಉಂಟಾಗುವುದಲ್ಲದೆ ಒಂದೇ ಮನೆ 4-5 ಭಾರೀ ಭೇಟಿ ನೀಡುವ ಪ್ರಸಂಗ ಎದುರಾಗುತ್ತಿದೆ. ಇದರಿಂದಾಗಿ ಸಮೀಕ್ಷೆಯ ಉದ್ದೇಶವೇ ವಿಫಲಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮನೆ ಮಂದಿ ಜಾತಿ ಗಣತಿ ಸಮೀಕ್ಷೆದಾರರಿಗೆ ಸಾಕಷ್ಟು ಗೊಂದಲ ಗೂಡಾಗಿದೆ. ಚೆಸ್ಕಾಂ ಹಾಗೂ ಬಿಸಿಎಂ ಇಲಾಖೆಯ ನೇತೃತ್ವದಲ್ಲಿ ಪೂರ್ವ ಸಿದ್ಧತೆ ಕೊರತೆ ಮತ್ತು ಪಟ್ಟಣ ಪ್ರದೇಶದಲ್ಲೇ ತಂತ್ರಾಂಶದಲ್ಲಿ ಗೊಂದಲ ಉಂಟಾಗಿದೆ. ಇದರಿಂದ ಸಮೀಕ್ಷೆಗೆ ನೇಮಕಾತಿಗೊಂಡ ಮಂದಿ ಕೆಲವು ಮನೆಗಳಿಗೆ ಆಗಿಂದಾಗ್ಗೆ ಭೇಟಿ ಮನೆಯವರಿಗೆ ಸಾಕಷ್ಟು ಕಿರಿ ಕಿರಿ ಉಂಟಾಗಿದೆ. ತಂತ್ರಂಶದಲ್ಲಿರುವ ಗಂಭೀರ ಸಮಸ್ಯೆ ಕುಗ್ರಾಮಗಳಿಗೆ ವ್ಯಾಪಿಸಿದೆ.

। ಕೆ.ಐ.ಲತೀಫ್ ಸುಂಟಿಕೊಪ್ಪ, ಗ್ರಾಮಸ್ಥ

ಸುಂಟಿಕೊಪ್ಪದಲ್ಲಿ ಅದೇಷ್ಟೋ ವಯೋವೃದ್ಧರೇ ನೆಲೆಸಿದ್ದಾರೆ. ಜಾತಿ ಗಣತಿ ಸಮೀಕ್ಷೆಯಿಂದ ವಯೋವೃದ್ಧರಿಗೆ ಇದರ ಅರಿವು ಮಾಹಿತಿಯ ಕೊರತೆ ಒಂದೆಡೆಯಾದರೆ, ಒಂದೇ ಒಂದು ಮೀಟರ್‌ನಲ್ಲಿ 4 ಕುಟುಂಬಗಳಿಗೆ ಸೇರಿ ಒಂದು ಮೀಟರ್ ಇದ್ದು ಇದರಲ್ಲಿ ಬೇರೆ ಬೇರೆ ಜನಾಂಗದ ಕುಟುಂಬದವರು ನೆಲೆಸಿದ್ದಾರೆ. ಅವರಿಗೆ ಜಾತಿ ಸಮೀಕ್ಷೆಯಿಂದ ವಂಚಿತಗೊಳ್ಳುವ ಸಾಧ್ಯತೆಯು ಹೆಚ್ಚಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಿ ನಮ್ಮನ್ನು ಸಮೀಕ್ಷೆ ದಾಖಲಾತಿಗೆ ಸೇರಿಸಬೇಕು.

। ಹಿರಿಯ ನಾಗರಿಕ ಸುಂಟಿಕೊಪ್ಪ 2ನೇ ವಿಭಾಗ ಮನೆಗೆ ಬರುವ ಸಮೀಕ್ಷೆದಾರರಿಗೆ ಚೆಸ್ಕಾಂ ಸಿಬ್ಬಂದಿ ಅಂಟಿಸಿದ ಮಾಹಿತಿ ಸಂಖ್ಯೆಯ ಫಲಕ ಇದೆ. ಅದರಲ್ಲಿ ಬರೆದಿರುವ ಸಂಖ್ಯೆ ಕಾಣದಿರುವ, ಅಳಿಸಿ ಹೋಗಿರುವ, ಕೆಲವು ಮಾಹಿತಿ ಸಂಖ್ಯೆ ಬರೆಯಲು ಬಿಟ್ಟು ಹೋಗಿದೆ. ಮತ್ತೆ ಕೆಲವು ಸಂಖ್ಯೆ ಯಾವೊದೋ ಬಡಾವಣೆಗಳಲ್ಲಿ ಕಂಡು ಬಂದಿದೆ. ಇದು ಸಂಬಂಧಿಸಿದವರ ಬೇಜವಾಬ್ಧಾರಿ ಮತ್ತು ಕರ್ತವ್ಯ ನಿರ್ಲಕ್ಷ್ಯತೆಯನ್ನು ತೋರಿಸಿದೆ.

। ಹೆಸರು ಹೇಳಲು ಇಚ್ಛಿಸದ ಹಿರಿಯ ನಾಗರಿಕ ಕೊಡಗರಹಳ್ಳಿ