ಸಾರಾಂಶ
ಒಳಮೀಸಲಾತಿ ಹೋರಾಟದ ಸಮಾನ ಮನಸ್ಕರ ಸಮಾಲೋಚನಾ ಸಭೆಯಲ್ಲಿ ಬಿ.ಪಿ.ಪ್ರಕಾಶ್ ಮೂರ್ತಿ ಸೂಚನೆಕನ್ನಡಪ್ರಭ ವಾರ್ತೆ ಸಿರಿಗೆರೆ
ನಿರಂತರ 35 ವರ್ಷಗಳ ಒಳ ಮೀಸಲಾತಿ ಹೋರಾಟವು ಈಗ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಸಮುದಾಯದ ಬಂಧುಗಳು ತುಂಬಾ ಜಾಗೃತಿಯಿಂದ ಮಾಹಿತಿ ದಾಖಲಿಸಬೇಕಿದೆ ಎಂದು ಮಾಜಿ ಜಿಪಂ ಸದಸ್ಯರಾದ ಬಿ.ಪಿ.ಪ್ರಕಾಶ್ ಮೂರ್ತಿ ತಿಳಿಸಿದರು.ಭರಮಸಾಗರದ ಪ್ರವಾಸಿ ಮಂದಿರದಲ್ಲಿ ನಡೆದ ಒಳಮೀಸಲಾತಿ ಹೋರಾಟದ ಸಮಾನ ಮನಸ್ಕರ ಸಮಾಲೋಚನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಆ.1ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ನಮಗೆಲ್ಲ ಜೀವ ಬಂದಂತಾಗಿದೆ. ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿ ಮಾಡಲು ಬದ್ಧವಾಗಿದ್ದು, ನಿಖರ ಅಂಕಿ ಅಂಶಗಳಿಗಾಗಿ ದತ್ತಾಂಶ ಸಂಗ್ರಹಿಸಲು ಜಾತಿ ಸಮೀಕ್ಷೆ ನಡೆಸುತ್ತಿದೆ. ನಮ್ಮ ಹಟ್ಟಿ, ಕೇರಿ, ಮನೆಗಳಿಗೆ ಜಾತಿ ಸಮೀಕ್ಷೆ ಮಾಡಲು ಬಂದಾಗ ನಾವು ಯಾವುದೇ ಅಂಜಿಕೆ ಇಲ್ಲದೆ "ಮಾದಿಗ " ಎಂದು ಬರೆಸುವ ಮೂಲಕ ಎಕೆ, ಎಡಿ, ಹರಿಜನ ಮುಂತಾದ ಗೊಂದಲಗಳಿಗೆ ಇತಿಶ್ರೀ ಹಾಡೋಣ ಎಂದು ತಿಳಿಸಿದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದುರ್ಗೇಶ್ ಪೂಜಾರ್, ಸರ್ಕಾರ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ಜಾತಿ ಗಣತಿ ನಡೆಸುತ್ತಿದ್ದು ಈ ಗಣತಿಯಲ್ಲಿ ಮಾದಿಗ ಎಂಬುದಾಗಿ ಬರೆಸಲು ಪ್ರತಿ ಹಳ್ಳಿಗಳಲ್ಲಿ ಇರುವಂತಹ ವಿದ್ಯಾವಂತರು, ಪ್ರಜ್ಞಾವಂತ ಬಂಧುಗಳು ಹಟ್ಟಿ ಮತ್ತು ಕೇರಿಗಳಲ್ಲಿ ಸಂಚರಿಸಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.ಈ ವೇಳೆ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಕುಮಾರಸ್ವಾಮಿ, ಕರಿಯಪ್ಪ ನಿವೃತ್ತ ಶಿಕ್ಷಕರು, ನಿಂಗಹನುಮಂತಪ್ಪ ನಿವೃತ್ತ ಪಶು ಅಧಿಕಾರಿ, ಕೃಷ್ಣಮೂರ್ತಿ ರಕ್ಷಣಾ ವೇದಿಕೆ, ಶಿವಣ್ಣ ಗೊಲ್ಲರಹಳ್ಳಿ, ರುದ್ರೇಶ್ ಕೆ, ವೀರಬಸಪ್ಪ , ರಾಜು ಸೀಗೇಹಳ್ಳಿ , ಕೋಟೆಪ್ಪ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.