ಎಲ್ಲ ವಿಚಾರಗಳಲ್ಲಿ ಜಾತಿ ವ್ಯವಸ್ಥೆ ದುರ್ದೈವ: ಮಾದಾರ ಶ್ರೀ

| Published : Dec 16 2024, 12:49 AM IST

ಸಾರಾಂಶ

ಮೀಸಲಾತಿಯ ಎಲ್ಲಾ ಸೌಲಭ್ಯ ಪಡೆದು, ಸಮಾಜದ ಮುಖ್ಯವಾಹಿನಿಯಲ್ಲಿ ಸಾಕಷ್ಟು ದೂರ ಹೋದವರು ಸಹ ಮತ್ತೆ ಮೀಸಲಾತಿ ವಿಚಾರವನ್ನೇ ಇಟ್ಟುಕೊಂಡು ಚರ್ಚೆಗೆ ಕುಳಿತಿದ್ದಾರೆ. ಹೀಗಾದರೆ ಮುಖ್ಯ ವಾಹಿನಿಯಿಂದಲೇ ದೂರ ಉಳಿದ ಸಣ್ಣ ಸಮುದಾಯಗಳು ಮುಂದೆ ಬರುವುದು ಯಾವಾಗ ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ದಾವಣಗೆರೆಯಲ್ಲಿ ಪ್ರಶ್ನಿಸಿದ್ದಾರೆ.

- ಶ್ರೀಗುರು ರಾಮದಾಸ, ಶ್ರೀ ಕೊಂಡಯ್ಯ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮ

- - -

- ಪಾಲಿಕೆ ಆವರಣದ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ

- ಸಾಮೂಹಿಕ ವಿವಾಹ ಮಹೋತ್ಸವ - ಜಿಲ್ಲಾ ಮಾದಿಗ-ಛಲವಾದಿ ಸಮಾಜದ ಸಮಾವೇಶ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೀಸಲಾತಿಯ ಎಲ್ಲಾ ಸೌಲಭ್ಯ ಪಡೆದು, ಸಮಾಜದ ಮುಖ್ಯವಾಹಿನಿಯಲ್ಲಿ ಸಾಕಷ್ಟು ದೂರ ಹೋದವರು ಸಹ ಮತ್ತೆ ಮೀಸಲಾತಿ ವಿಚಾರವನ್ನೇ ಇಟ್ಟುಕೊಂಡು ಚರ್ಚೆಗೆ ಕುಳಿತಿದ್ದಾರೆ. ಹೀಗಾದರೆ ಮುಖ್ಯ ವಾಹಿನಿಯಿಂದಲೇ ದೂರ ಉಳಿದ ಸಣ್ಣ ಸಮುದಾಯಗಳು ಮುಂದೆ ಬರುವುದು ಯಾವಾಗ ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಪ್ರಶ್ನಿಸಿದರು.

ನಗರದ ಪಾಲಿಕೆ ಆವರಣದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಬಯಲು ರಂಗಮಂದಿರದಲ್ಲಿ ಭಾನುವಾರ ಶ್ರೀಗುರು ರಾಮದಾಸ ಸ್ವಾಮಿ ಆಧ್ಯಾತ್ಮಿಕ ಟ್ರಸ್ಟ್‌ನಿಂದ ಶ್ರೀ ಗುರು ರಾಮದಾಸರ 66ನೇ, ಶ್ರೀ ಕೊಂಡಯ್ಯ ಸ್ವಾಮಿಗಳ 18ನೇ ಪುಣ್ಯಾರಾಧನೆ ಹಾಗೂ 33ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಜಿಲ್ಲಾ ಮಾದಿಗ-ಛಲವಾದಿ ಸಮಾಜದ ಸಮಾವೇಶದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ನಾಡಿನ ಮುಂದುವರಿದ ಮಠಾಧೀಶರು, ಪ್ರಜ್ಞಾವಂತರು ಈ ಪ್ರಶ್ನೆ ಮಾಡಬೇಕಾಗಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣ-ಶರಣೆಯರು ಸಾಮೂಹಿಕ ಕಲ್ಯಾಣ ವೇದಿಕೆಗಳನ್ನು ಸಿದ್ಧಪಡಿಸಿ, ಪ್ರಗತಿಪರ ಚಿಂತನೆಯ ಹಾದಿ ಹಾಕಿಕೊಟ್ಟಿದ್ದರು. ಅಂದೇ ಜಾತೀಯತೆ ಹೋಗಲಾಡಿಸಲು ಚಿಂತಿಸಿದ್ದರು. ಆದರೆ, ಇಂದಿನ ರಾಜಕಾರಣ, ಸರ್ಕಾರದ ಸೌಲಭ್ಯ ಸೇರಿದಂತೆ ಬೇರೆ ವಿಚಾರಗಳಿಗಾಗಿ ಜಾತಿ ವ್ಯವಸ್ಥೆ ಗಟ್ಟಿಗೊಳಿಸುತ್ತಿರುವುದು ದುರ್ದೈವ. ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಸರ್ಕಾರ ತ್ವರಿತವಾಗಿ ಮುಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ, ಮಾದಿಗ ಸಮುದಾಯದ ಹಿರಿಯ ಮುಖಂಡ ಬಿ.ಎಚ್.ವೀರಭದ್ರಪ್ಪ ಮಾತನಾಡಿ, 33 ವರ್ಷದಿಂದ 900ಕ್ಕೂ ಹೆಚ್ಚು ಜೋಡಿಗಳ ಮದುವೆ ಮಾಡಲಾಗಿದೆ. ಮಾದಿಗ ಮತ್ತು ಛಲವಾದಿ ಸಮುದಾಯ ಬಡ ಕುಟುಂಬಗಳ ಹೆತ್ತವರ ಆರ್ಥಿಕ ಹೊರೆ ಇಳಿಸುವ ಸದುದ್ದೇಶದಿಂದ ಸಾಮೂಹಿಕ ವಿವಾಹ ಮಾಡುತ್ತಿದ್ದೇವೆ ಎಂದರು.

ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಅಲ್ಕೋಡ್ ಹನುಮಂತಪ್ಪ, ಮೇಯರ್ ಕೆ.ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ, ಟ್ರಸ್ಟ್ ಸ್ವಾಗತ ಸಮಿತಿ ಗೌರವಾಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ರವಿನಾರಾಯಣ, ಎನ್.ರುದ್ರಮುನಿ, ಕಾರ್ಯಾಧ್ಯಕ್ಷ ಎಲ್.ಎಂ.ಹನುಮಂತಪ್ಪ, ಮಾಜಿ ಶಾಸಕ ಎಸ್.ರಾಮಪ್ಪ, ಹರಿಹರ ನಗರಸಭೆ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಡಿಎಸ್‌ಎಸ್ ಮುಖಂಡರಾದ ಎಚ್.ಮಲ್ಲೇಶ, ಕುಂದುವಾಡ ಮಂಜುನಾಥ, ಎಸ್.ಮಲ್ಲಿಕಾರ್ಜುನ, ಬಿ.ಆರ್. ಶಿವಮೂರ್ತಿ, ಜಿ.ರಾಕೇಶ, ಬಿ.ಎಂ.ರಾಮಸ್ವಾಮಿ ಇತರರು ಇದ್ದರು.

- - -

ಕೋಟ್‌

ಮೀಸಲಾತಿ ಕೇಳಿದರೆ ಲಾಠಿ ಚಾರ್ಜ್ ಮಾಡುವ ಕೆಲಸವನ್ನು ಈಗಿನ ಸರ್ಕಾರ ಮಾಡುತ್ತಿದೆ. ರಾಜ್ಯದ ಇತಿಹಾಸದಲ್ಲೇ ಸ್ವಾಮೀಜಿಯನ್ನು ಬಡಿದ ಸರ್ಕಾರವೇನಾದರೂ ಇದ್ದರೆ ಅದು ಈಗಿನ ಕಾಂಗ್ರೆಸ್ ಸರ್ಕಾರ ಮಾತ್ರ. ಒಳ ಮೀಸಲಾತಿ ವಿಚಾರದಲ್ಲಾದರೂ ಈಗಿನ ಸರ್ಕಾರ ನುಡಿದಂತೆ ನಡೆಯಲಿ

- ಅಲ್ಕೋಡ್ ಹನುಮಂತಪ್ಪ, ಮಾಜಿ ಸಚಿವ

- - - ಟಾಪ್‌ ಕೋಟ್‌ಸಂಸಾರದಲ್ಲಿ ಸತಿ-ಪತಿಗಳ ದೇಹ ಎರಡಿದ್ದರೂ ಮನಸು ಮಾತ್ರ ಒಂದೇ ಇರಬೇಕು. ಆಗ ಮಾತ್ರ ಅಂತಹ ಸಂಸಾರ ಯಶಸ್ವಿಯಾಗುತ್ತದೆ. ದಾಂಪತ್ಯ ಜೀವನಕ್ಕೆ ಬೇಕಾಗಿರುವುದು ಸಿರಿ, ಸಂಪತ್ತಲ್ಲ. ಬದಲಿಗೆ ಸಿರಿ ಸಂಪತ್ತಿನಿಂಥ ಭಾವಗಳಿಂದ ಕೂಡಿರುವ ಮನಸು ಮುಖ್ಯ. ಶ್ರೀಮಂತಿಕೆ ಅರಮನೆಯಲ್ಲಿಲ್ಲ, ಪ್ರೀತಿಯಲ್ಲಿದೆ. ಎಂಥ ಕಷ್ಟ ಬಂದರೂ ಸಹನೆಯಿಂದ ಎದುರಿಸುವ ಕಲೆ ರೂಢಿಸಿಕೊಳ್ಳಬೇಕು

- ಶ್ರೀ ಬಸವಪ್ರಭು ಸ್ವಾಮೀಜಿ, ವಿರಕ್ತ ಮಠ

- - - -15ಕೆಡಿವಿಜಿ10:

ದಾವಣಗೆರೆಯಲ್ಲಿ ಭಾನುವಾರ ಶ್ರೀ ಗುರು ರಾಮದಾಸರ 66ನೇ, ಶ್ರೀ ಕೊಂಡಯ್ಯ ಸ್ವಾಮಿಗಳ 18ನೇ ಪುಣ್ಯಾರಾಧನೆ ಹಾಗೂ 33ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಜಿಲ್ಲಾ ಮಾದಿಗ-ಛಲವಾದಿ ಸಮಾಜದ ಸಮಾವೇಶ ನಡೆಯಿತು.