ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ನಾನು ಬಸವಣ್ಣನ ಕಟ್ಟಾ ಅನುಯಾಯಿಯಾಗಿದ್ದು, ದಯವೇ ಧರ್ಮದ ಮೂಲ ಎಂದು ಅರಿತು ಬದುಕುತ್ತಿದ್ದೇನೆ. ಜಾತೀಯತೆ ಸಮಾಜದ ಬಹುದೊಡ್ಡ ಕಂಟಕವಾಗಿದ್ದು, ಜಾತೀಯತೆಯ ಕೊಳಕು ನಿವಾರಿಸಲು ಶಿಕ್ಷಣವೇ ಬಹುದೊಡ್ಡ ಅಸ್ತ್ರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಶ್ರೀಬಸವಗೋಪಾಲ ನೀಲಮಾಣಿಕಮಠದ ದಾನೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಸೋಮವಾರ ನಡೆದ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯೆ, ಸ್ವಾಭಿಮಾನ, ಜ್ಞಾನ ಬೆಳೆಸಿಕೊಂಡು ಮೌಢ್ಯಗಳನ್ನು ತಿರಸ್ಕರಿಸಬೇಕು. ರಾಮಾಯಣ, ಮಹಾಭಾರತ ಬರೆದವರೆಲ್ಲರೂ ಶೂದ್ರರಾಗಿದ್ದಾರೆ. ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ಸ್ತ್ರೀಯರಿಗೆ, ದಲಿತರಿಗೆ ಶಿಕ್ಷಣ ಹೊಂದುವ ಅವಕಾಶವಿರಲಿಲ್ಲ. ಬಸವಾದಿ ಶರಣರು ಸಮಾನತೆಯ ತತ್ವ ಜಾರಿಗೊಳಿಸಿ, ಚಲನೆ ನೀಡಿ, ಬಲಶಾಲಿ ಸಮಾಜ ನಿರ್ಮಿಸಲು ಶ್ರಮಿಸಿದರು. ಈಚೆಗೆ ಅಸಹಿಷ್ಣುತೆ ಹೆಚ್ಚುತ್ತಿದೆ. ನ್ಯಾಯಾಧೀಶರ ಮೇಲೆಯೇ ಶೂ ಎಸೆಯಲು ವಕೀಲರೊಬ್ಬರು ಯತ್ನಿಸಿದ್ದು, ನಮ್ಮಲ್ಲಿನ ಅಸಹನೀಯತೆಯ ಪ್ರತೀಕವಾಗಿದೆ. ಶರಣರ ಕಾಯಕ, ದಾಸೋಹ ನಮ್ಮ ಧ್ಯೇಯವಾಗಿ ಎಲ್ಲರೂ ಮಾನವ ಧರ್ಮಕ್ಕೆ ನಿಷ್ಠೆ ತೋರಿ ಬದುಕಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.ಜಾತಿ, ಧರ್ಮಗಳಿಂದ ವಿಘಟಿತ ಮನದ ವ್ಯಕ್ತಿಗಳಿಂದ ದೂರವಾಗಿ ಸರ್ವರನ್ನೂ ಪ್ರೀತಿಸುವ ಗುಣಗ್ರಾಹಿತನ ಬೆಳೆಸಿಕೊಳ್ಳಬೇಕು. ಸಂಕುಚಿತ ಮನೋಭಾವ ಬಿಟ್ಟು ಹೃದಯ ವೈಶಾಲ್ಯತೆಯಿಂದ ನಾವೆಲ್ಲರೂ ಮನುಷ್ಯರು ಎಂದರಿತರೆ ಸುಂದರ ಸಮಾಜ ಸೃಷ್ಟಿಯಾಗುತ್ತದೆ. ನಮ್ಮ ಸರ್ಕಾರ ಯಾವ ತಾರತಮ್ಯವಿಲ್ಲದೆ ಎಲ್ಲ ಜಾತಿಯವರಿಗೂ ಕಾರ್ಯಕ್ರಮ ನೀಡಿದೆ. ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿಸಿದೆ ಎಂದರು.
ದೇಶದಲ್ಲಿ ಹಾಗೂ ಜಗತ್ತಿನಲ್ಲಿ ಅನೇಕ ಧರ್ಮ, ಜಾತಿಗಳಿವೆ. ಜಾತಿ ಧರ್ಮಗಳನ್ನು ನಾವು ಮಾಡಿಲ್ಲ, ಮೊದಲಿನಿಂದ ನಮ್ಮಲ್ಲಿ ಬೆಳೆದುಕೊಂಡು ಬಂದಿದೆ. ನಾವು ಯಾವುದೇ ಧರ್ಮ, ಜಾತಿಗೆ ಸೇರಿದ್ದರೂ ಬೇರೆ ಜಾತಿಯವರನ್ನು ಪ್ರೀತಿಸಬೇಕೇ ಹೊರತು ದ್ವೇಷಿಸಬಾರದು. ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ನಾವು ಮನುಷ್ಯರು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಬಸವಣ್ಣನವರು ವಚನಗಳನ್ನು ರಚಿಸಿದ್ದಾರೆ. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಜಾತಿ ವ್ಯವಸ್ಥೆ ಜಡತ್ವವಿರುವ ವ್ಯವಸ್ಥೆಯಾಗಿರುವುದರಿಂದ ಇಷ್ಟು ವರ್ಷಗಳಾದರೂ ಬದಲಾವಣೆಯಾಗಿಲ್ಲ. ಜಾತ್ಯತೀತ ಸಮಾಜ ನಿರ್ಮಾಣವಾಗಲು ಸಾಧ್ಯವಾಗಿಲ್ಲ. ಸಮಾಜದ ಅಸಮಾನತೆ ತೊಡೆದು ಹಾಕುವವರೆಗೆ ಸ್ವಾತಂತ್ರ್ಯ ಯಶಸ್ವಿಯಾಗುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆಗಳನ್ನು ತೊಡೆದು ಹಾಕದಿದ್ದರೆ ಅಸಮಾನತೆಯಿಂದ ನರಳುವವರು ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎಂಬ ಎಚ್ಚರಿಕೆಯನ್ನೂ ಅವರು ಕೊಟ್ಟಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ದಾಸೋಹರತ್ನ ಚಕ್ರವರ್ತಿ ದಾನೇಶ್ವರರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ, ಬಬಲಾದಿ ಸಿದ್ಧರಾಮೇಶ್ವರ ಶ್ರೀ, ಡಾ.ಡೆರಿಕ್ ಫರ್ನಾಂಡೀಸ್, ಯೋಗಿ ವೇಮನಪೀಠದ ವೇಮನಾನಂದ ಶ್ರೀ, ಹಳೆಹುಬ್ಬಳ್ಳಿ ವೀರಭಿಕ್ಷಾವರ್ತಿಮಠದ ಶಿವಶಂಕರ ಶ್ರೀ, ಬೆಂಗಳೂರಿನ ಹಜರತ್ ಮಹಮ್ಮದ ತನ್ವೀರ್ ಹಾಶ್ಮಿ, ಹೈದರಾಬಾದ್ ಸೂಫಿ ಸಂತ ಸೈಯದ್ ಬಾಷಾ ಸಾಹೇಬ, ತಂಗಡಗಿಯ ಹಡಪದ ಅಪ್ಪಣ್ಣ ಸ್ವಾಮೀಜಿ, ಚಿತ್ರದುರ್ಗದ ಸರ್ದಾ ಸೇವಾಲಾಲರು, ಕೋಡಹಳ್ಳಿಯ ಷಡಕ್ಷರ ಮುನಿಗಳು, ಬೆಳಗಾವಿ ಬ್ರಹ್ಮಾಕುಮಾರೀಸ್‌ನ ರಾಜಯೋಗಿನಿ ಬಿ.ಕೆ.ಅಂಬಿಕಾ, ಬೌದ್ಧ ಗುರು ಮುಂಡಗೋಡದ ಗೆಶೆ ಜಂಪಾ ಲೋಬಾಂಗ್ಸ್, ಮುಂತಾದವರಿದ್ದರು.ಬಾಕ್ಸ್....
ಬಿಜೆಪಿ ಲಿಂಗಾಯತ ನಾಯಕರಿಗೆ ಟಾಂಗ್!ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ಮಾತನಾಡುತ್ತಿರುವಾಗ, ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿಸಿದೆ ಎಂದರು. ಹಾಗೆಯೇ, ಶಾಸಕ ವಿಜಯಾನಂದ ಅವರತ್ತ ತಿರುಗಿ, ‘ಏನಪ್ಪಾ, ವಿಜಯಾನಂದ ಕಾಶಪ್ಪನವರ ನಿವೇನಾದ್ರೂ ಮಾಡಿದ್ರಾ’ ಎಂದು ಪ್ರಶ್ನಿಸಿದರು. ಆಗ ಕಾಶಪ್ಪನವರ ಅವರು, ‘ನಾವು ಮಾಡಿಲ್ಲ’ ಎಂದು ಉತ್ತರಿಸಿದರು. ಮುಂದುವರೆದು, ಸಿಎಂ ಆಗಿದ್ದಾಗ ಯಡಿಯೂರಪ್ಪ, ಬೊಮ್ಮಾಯಿ ಮಾಡಲಿಲ್ಲ. ಆದರೂ ನನ್ನೇಕೆ ಪ್ರಶ್ನೆ ಮಾಡ್ತೀರಿ? ನೀನಂದ್ರೆ ನೀನಲ್ಲಪ್ಪ ಕಾಶಪ್ಪನವರ, ನೀನು ನನ್ನ ಕಟ್ಟಾ ಅಭಿಮಾನಿ, ಆದರೆ, ಕೆಲವರು ಹಾಗೆ ಮಾತಾಡ್ತಾರೆ ಎಂದು ಪರೋಕ್ಷವಾಗಿ ಬಿಜೆಪಿಯ ಲಿಂಗಾಯತ ನಾಯಕರಿಗೆ ಸಿದ್ದರಾಮಯ್ಯ ಟಾಂಗ್ ನೀಡಿದರು.