ಸಾರಾಂಶ
ಕೃಷ್ಣ ಲಮಾಣಿ
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲೀಗ ಪಾರಂಪರಿಕ ಸ್ಮಾರಕಗಳ ಬಳಿ ದನಗಳ ಉಪಟಳ ವಿಪರೀತ ಹೆಚ್ಚಿದೆ.ಸ್ಮಾರಕಗಳ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒತ್ತಾಸೆಯಾಗಿ ಒಂದು ಕಡೆ ನಿಂತಿದ್ದರೆ, ಇನ್ನೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲವೊಮ್ಮೆ ಬಿಡಾಡಿ ದನಗಳು, ಹಲವೊಮ್ಮೆ ಕುರಿಗಳ ಹಿಂಡು ಮೇಯುತ್ತಿರುತ್ತವೆ!
ಹಂಪಿ ಸ್ಮಾರಕಗಳ ಗುಚ್ಛವನ್ನು 1986ರಲ್ಲೇ ಯುನೆಸ್ಕೊ ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಕೇಂದ್ರ ಸರ್ಕಾರ ಪುರಾತತ್ವ ಇಲಾಖೆಯ ವಿಶೇಷ ವಲಯನ್ನೇ ಹಂಪಿಯಲ್ಲಿ ತೆರೆದಿದೆ. ರಾಜ್ಯ ಸರ್ಕಾರ ಕೂಡ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಕಚೇರಿಗಳನ್ನು ತೆರೆದಿದೆ. ಅಷ್ಟೇ ಅಲ್ಲದೆ, 2002ರಲ್ಲಿ ವಿಧಾನ ಪರಿಷತ್ತಿನಲ್ಲಿ ಹಂಪಿ ಸ್ಮಾರಕಗಳ ಸಂರಕ್ಷಣೆಗಾಗಿ ವಿಶೇಷ ವಿಧೇಯಕ ಪಾಸು ಮಾಡಿ; ಹಂಪಿ ನಿರ್ವಹಣಾ ಪ್ರಾಧಿಕಾರ ಅಸ್ತಿತ್ವಕ್ಕೆ ತಂದಿದೆ.ಈ ಕಾಯ್ದೆ ಈಗ ದೇಶದ ಇತರೆ ರಾಜ್ಯಗಳಿಗೂ ಮಾದರಿ ಆಗಿದೆ. ಹೀಗಿದ್ದರೂ ಹಂಪಿ ಸ್ಮಾರಕಗಳ ಬಳಿ ಬಿಡಾಡಿ ದನಗಳು, ಎತ್ತುಗಳು ಮತ್ತು ಕುರಿ ಹಿಂಡು ಮೇಯುತ್ತಿವೆ.
ಸಂರಕ್ಷಣೆ ಪ್ರಶ್ನೆ: ಹಂಪಿ ಸ್ಮಾರಕಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ ಎಂಬ ಕಾರಣಕ್ಕಾಗಿ ಹಂಪಿಯಲ್ಲಿ ಜಿ-20 ಶೃಂಗಸಭೆ ಆಯೋಜನೆ ಮಾಡಲಾಗಿತ್ತು. ಪ್ರತಿ ವರ್ಷ ಹಂಪಿ ಉತ್ಸವ ಕೂಡ ನಡೆಸಲಾಗುತ್ತಿದೆ. ಹಂಪಿ ಸ್ಮಾರಕಗಳ ಸಂರಕ್ಷಣೆಗಾಗಿ ಕೇಂದ್ರ ಪುರಾತತ್ವ ಇಲಾಖೆ ಪ್ರತ್ಯೇಕ ಕಾವಲುಗಾರರನ್ನು ನಿಯೋಜಿಸಿದೆ. ಇನ್ನೊಂದೆಡೆ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಮಿತ್ರರನ್ನು ನಿಯೋಜಿಸಿದೆ. ಹಂಪಿಯಲ್ಲಿ ಪ್ರವಾಸಿ ಪೊಲೀಸ್ ಠಾಣೆ ಕೂಡ ತೆರೆಯಲಾಗಿದೆ. ಹೀಗಿದ್ದರೂ ಹಂಪಿ ಸ್ಮಾರಕಗಳ ಬಳಿ ಆಗಾಗ ಬಿಡಾಡಿ ದನಗಳು, ಎತ್ತುಗಳು, ಕುರಿ ಮಂದೆ ಹುಲ್ಲು ಮೇಯುವುದು ಸಾಮಾನ್ಯವಾಗಿ ಬಿಟ್ಟಿದೆ. ಹಂಪಿ ಸ್ಮಾರಕಗಳ ಸಂರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ವಿಜಯನಗರ ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆಗಳು ಬಿಂಬಿಸುತ್ತಿದ್ದರೂ ದನಗಳು ಮೇಯುವ ಚಿತ್ರಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇವೆ.ಹಂಪಿಯಲ್ಲಿ ನಿಧಿ ಚೋರರ ಹಾವಳಿ ಜಾಸ್ತಿ ಇದೆ ಎಂದು ಕಾವಲುಗಾರರ ನಿಯೋಜನೆಗೆ ಕೇಂದ್ರ ಪುರಾತತ್ವ ಇಲಾಖೆಗೆ ಅನುಮತಿ ನೀಡಲಾಗಿದೆ. ಅಲ್ಲದೇ ಸ್ವಚ್ಛತೆಗೂ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲಾಗಿದೆ. ಹೀಗಿದ್ದರೂ ಸ್ಮಾರಕಗಳ ಬಳಿ ಸರಿಯಾಗಿ ಸ್ವಚ್ಛತೆ ಮಾಡಲಾಗುತ್ತಿಲ್ಲ. ಇನ್ನೊಂದೆಡೆ ದನಗಳು ಹಾಗೂ ಎತ್ತುಗಳು ಮತ್ತು ಕುರಿ ಮಂದೆ ಮೇಯಲು ಬಿಡಲಾಗುತ್ತಿದೆ. ಸಚ್ಚ್ಛತೆಗಾಗಿ ಈ ಟ್ರಿಕ್‌ಅನ್ನು ಉಪಯೋಗಿಸಲಾಗುತ್ತಿದೆಯೇ? ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.
ಹಂಪಿ ಸ್ಮಾರಕಗಳು ಜಗತ್ತಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿವೆ. ಹೀಗಿದ್ದರೂ ಸ್ಮಾರಕಗಳ ಬಳಿಯೇ ಬಿಡಾಡಿ ದನಗಳು, ಎತ್ತುಗಳು, ಕುರಿ ಮಂದೆ ಮೇಯಲು ಹೇಗೆ ಅವಕಾಶ ನೀಡಲಾಗುತ್ತಿದೆ ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ಪುರಾತತ್ವ ಇಲಾಖೆಗಳ ಅಧಿಕಾರಿಗಳು ಕೂಡ ಬಾಯಿ ಬಿಡುತ್ತಿಲ್ಲ. ಹಂಪಿಯಲ್ಲಿ ದನಗಳನ್ನು ಮೇಯಲು ಬಿಡಲಾಗುತ್ತಿಲ್ಲ ಎಂದು ಸ್ಪಷ್ಟೀಕರಣ ನೀಡುತ್ತಿದ್ದಾರೆ.ಹಂಪಿ ಸ್ಮಾರಕಗಳ ನೋಡಲು ನಾವು ದೂರದಿಂದ ಬಂದಿರುತ್ತೇವೆ. ಆದರೆ, ಇಲ್ಲಿ ದನಗಳು ಮೇಯುತ್ತಿರುವುದನ್ನು ನೋಡಿ ದಿಗ್ಭ್ರಮೆ ಆಗುತ್ತಿದೆ. ಈ ಸ್ಮಾರಕಗಳನ್ನು ಸಂಬಂಧಿಸಿದ ಇಲಾಖೆಗಳು ಹಾಗೂ ಜಿಲ್ಲಾಡಳಿತ ಸಂರಕ್ಷಿಸಬೇಕು ಎನ್ನುತ್ತಾರೆ ಪ್ರವಾಸಿಗ ರಾಧಾ ಮೋಹನ್.