ಗಂಗಾರತಿ ಮಾದರಿ ಕಾವೇರಿ ನದಿಗೆ ಆರತಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪಿಗೆ

| Published : Jul 23 2024, 12:33 AM IST / Updated: Jul 23 2024, 07:45 AM IST

Cauvery River
ಗಂಗಾರತಿ ಮಾದರಿ ಕಾವೇರಿ ನದಿಗೆ ಆರತಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಪ್ರದೇಶದ ವಾರಣಾಸಿಯ ಪಕ್ಕ ಕಾಶಿಯ ವಿಶ್ವನಾಥ ದೇವಾಲಯದ ಪಕ್ಕ ಗಂಗಾರತಿ ಮಾಡಲಾಗುತ್ತದೆ. ಅದೇ ಮಾದರಿಯಲ್ಲಿ ನಮ್ಮ ಪವಿತ್ರ ಕಾವೇರಿ ನದಿಗೂ ಆರತಿ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕ ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು.

 ಮಂಡ್ಯ :  ಕಾವೇರಿ ನದಿಗೆ ವಾರಾಣಸಿಯಲ್ಲಿನ ಗಂಗಾ ನದಿಗೆ ಮಾಡಲಾಗುವ ಗಂಗಾ ಆರತಿಯ ಮಾದರಿಯಲ್ಲಿ ಆರತಿ ಕಾರ್ಯಕ್ರಮ ಆಯೋಜಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೇ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಸಕರು, ಅಧಿಕಾರಿಗಳ ಸಮಿತಿಯನ್ನು ರಚಿಸುವುದಾಗಿಯೂ ಘೋಷಿಸಿದ್ದಾರೆ. ಆ ಮೂಲಕ ಶಾಸಕ ದಿನೇಶ್ ಗೂಳಿಗೌಡ ಅವರು ಮಾಡಿದ ಮನವಿಗೆ ಸರ್ಕಾರದಿಂದ ಶೀಘ್ರ ಸ್ಪಂದನೆ ದೊರೆತಂತಾಗಿದೆ.

ಉತ್ತರ ಪ್ರದೇಶದ ವಾರಣಾಸಿಯ ಪಕ್ಕ ಕಾಶಿಯ ವಿಶ್ವನಾಥ ದೇವಾಲಯದ ಪಕ್ಕ ಗಂಗಾರತಿ ಮಾಡಲಾಗುತ್ತದೆ. ಅದೇ ಮಾದರಿಯಲ್ಲಿ ನಮ್ಮ ಪವಿತ್ರ ಕಾವೇರಿ ನದಿಗೂ ಆರತಿ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದರು.

ಕೆಆರ್‌ಎಸ್‌ಗೆ ಸೋಮವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿದ್ದ ಸಮಯದಲ್ಲಿ ಶಾಸಕ ದಿನೇಶ್‌ ಗೂಳಿಗೌಡ ಅವರು ಮಾಡಿದ ಮನವಿಯನ್ನು ಉಲ್ಲೇಖಿಸಿ ಮಾತನಾಡಿ, ಕಾವೇರಿ ಆರತಿ ಮಾಡುವ ನಿಟ್ಟಿನಲ್ಲಿ ಅಧ್ಯಯನ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮೈಸೂರು, ಮಡಿಕೇರಿ, ಮಂಡ್ಯ ಜಿಲ್ಲೆಗಳ ಹಿರಿಯ ಶಾಸಕರು, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ತಂಡವನ್ನು ವಾರಾಣಸಿಗೆ ಕಳಿಸುವುದಾಗಿ ತಿಳಿಸಿದರು. ಈ ತಂಡವು ಅಧ್ಯಯನ ಮಾಡಿ ವರದಿ ಕೊಡಲು ಸೂಚಿಸಿದ್ದಾರೆ. ಜೊತೆಗೆ ಅಲ್ಲಿಂದ ಒಂದು ತಂಡವನ್ನು ಕರೆದುಕೊಂಡು ಬಂದು ಯಾವ ಜಾಗದಲ್ಲಿ ಕಾವೇರಿ ಆರತಿ ನಡೆಸಬಹುದು ಎಂದು ಜಾಗ ಗುರುತಿಸಲಾಗುವುದು. ಒಂದು ತಿಂಗಳ ಒಳಗಾಗಿ ಈ ಕಾರ್ಯಕ್ರಮ ಮಾಡಲಾಗುವುದು ಎಂದು ದಿನೇಶ್ ಗೂಳಿಗೌಡ ಅವರು ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದರು.

ಗಂಗಾರತಿ ಮಾದರಿ ಕಾವೇರಿ ಆರತಿ: ಡಿ.ಕೆ.ಶಿವಕುಮಾರ್

ಕನ್ನಡಪ್ರಭ ವಾರ್ತೆ ಮಂಡ್ಯವಾರಾಣಸಿಯಲ್ಲಿ ಗಂಗಾ ನದಿಗೆ ಗಂಗಾರತಿ ಮಾಡುವ ಮಾದರಿಯಲ್ಲೇ ಕಾವೇರಿ ಮಾತೆಗೆ ಕಾವೇರಿ ಆರತಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.ಸೋಮವಾರ ಭರ್ತಿಯ ಹಂತದಲ್ಲಿರುವ ಕೃಷ್ಣರಾಜಸಾಗರ ಜಲಾಶಯಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ಆರತಿಯನ್ನು ಪ್ರಾರಂಭಿಸಲು ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಸ್ಥಳೀಯ ಶಾಸಕರು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ತಂಡ ರಚಿಸಿ ಕಾವೇರಿ ಆರತಿ ಪ್ರಾರಂಭಿಸಲು ಒಂದು ತಿಂಗಳೊಳಗೆ ವರದಿ ನೀಡುವಂತೆ ತಿಳಿಸಲಾಗುವುದು ಎಂದರು.

ಕೆಆರ್‌ಎಸ್ ಬೃಂದಾವನಕ್ಕೆ ಹೊಸ ರೂಪ ಕೊಡಲು ನೂತನ ತಾಂತ್ರಿಕತೆ ಬಳಕೆ ಮಾಡಲಾಗುವುದು. ಈ ಬಗ್ಗೆ ವರದಿಗಳು ಬಂದಿವೆ. ಶೀಘ್ರದಲ್ಲೇ ಕ್ಯಾಬಿನೆಟ್ ಮುಂದೆ ತರಲಾಗುವುದು ಎಂದು ನುಡಿದರು.