ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾವೇರಿ ಕಣಿವೆಯಲ್ಲಿ ಭೀಕರ ಮತ್ತು ಎಂದೆಂದೂ ಕಾಣದ ಬರಪರಿಸ್ಥಿತಿ ಇದ್ದಾಗಿಯೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ನಿತ್ಯ 3.50 ಕ್ಯುಸೆಕ್ ನೀರನ್ನು15 ದಿನಗಳ ಕಾಲ ಬಿಡುಗಡೆ ಮಾಡಬೇಕು ಎಂದು ಆದೇಶ ಮಾಡಿರುವುದು ರಾಜ್ಯದ ಪಾಲಿಗೆ ಗದಾಪ್ರಹಾರ ಮಾಡಿದಂತಾಗಿದ್ದು, ಕೂಡಲೇ ತಮ್ಮ ಸರ್ಕಾರ ಈ ಅವೈಜ್ಞಾನಿಕ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಗುರುವಾರ ದೆಹಲಿಯಲ್ಲಿ ಸಿಡಬ್ಲ್ಯೂಎಂಎ ನಡೆಸಿದ ಹೈ ವೋಲ್ವೇಜ್ ಸಭೆಯಲ್ಲಿ ಈ ಹಿಂದೆ ಕಾವೇರಿ ನೀರು ನಿರ್ವಹಣಾ ಸಮಿತಿಯು(ಸಿಡಬ್ಲ್ಯೂಆರ್‌ಸಿ) ನೀಡಿದ್ದ ಆದೇಶವನ್ನೆ ಸಿಡಬ್ಲ್ಯೂಎಂಎ ಸಭೆಯಲ್ಲಿ ಎತ್ತಿ ಹಿಡಿದಿರುವುದು ಕರ್ನಾಟಕ ರಾಜ್ಯಕ್ಕೆ ಮರಣ ಶಾಸನವಾಗಿದೆ ಎಂದು ದೂರಿದರು.

ಈ ಆದೇಶದಿಂದ ನಮ್ಮ ರಾಜ್ಯ 15 ದಿನಗಳಲ್ಲಿ 4.56 ಟಿಎಂಸಿ ನೀರನ್ನ ಬಿಡಬೇಕಾಗಿದ್ದು ನಮಗೆ ಬೆಂಗಳೂರು, ಮಂಡ್ಯ, ಮೈಸೂರು ಮುಂತಾದ ನಗರಗಳಿಗೆ ಕುಡಿಯುವ ನೀರನ್ನು ಸಹ ಪೂರೈಸಲು ಸಾಧ್ಯವಾಗುವುದಿಲ್ಲ. ಸಿಡಬ್ಲ್ಯೂಆರ್‌ಸಿ ಮತ್ತು ಸಿಡಬ್ಲ್ಯೂಎಂಎ ಆದೇಶಗಳು ಕಣ್ಣು ಮುಚ್ಚಿ ಮಾಡಿದ ಅಸಂಬದ್ಧ ಹಾಗೂ ಅವೈಜ್ಞಾನಿಕ ಆದೇಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ರಾಜ್ಯ ಸರ್ಕಾರ ಸಿಡಬ್ಲ್ಯೂಆರ್‌ಸಿ ಮತ್ತು ಸಿಡಬ್ಲ್ಯೂಎಂಎ ಆದೇಶಗಳಿಗೆ ಸೆಡ್ಡು ಹೊಡೆದು ಈ ಆದೇಶವನ್ನು ಪಾಲಿಸದಿರಲು ನಿರ್ಧರಿಸಿ ಸುಗ್ರೀವಾಜ್ಞೆ ಹೊರಡಿಸಬೇಕು. ಜೊತೆಯಲ್ಲಿ ಈ ಅವೈಜ್ಞಾನಿಕ ಹಾಗೂ ಕುರುಡು ಆದೇಶಗಳ ವಿರುದ್ಧ ಕೂಡಲೇ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.


ನಮ್ಮ ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಲ್ಲಿನ ವ್ಯಾಪ್ತಿಯಲ್ಲಿ ಮಳೆಯ ಕೊರತೆಯನ್ನ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕು. ಜೊತೆಯಲ್ಲಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಕೂಡಲೇ ಕೇಂದ್ರದ ಜಲಸಂಪನ್ಮೂಲ ಇಲಾಖೆಯ ತಜ್ಞರ ಸಮಿತಿಯೊಂದನ್ನು ಕಳುಹಿಸಿ, ಕಾವೇರಿ ಪ್ರದೇಶದ ವಾಸ್ತವ ಪರಿಸ್ಥಿತಿಯನ್ನ ಅರಿತು, ನಂತರ ಸಿಡಬ್ಲ್ಯೂಎಂಎಗೆ ಸೂಕ್ತ ಆದೇಶ ನೀಡಲು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ, ಅಲಿಂ ಖಾನ್, ಎಸ್.ಪಿ. ಶಿವಣ್ಣ, ನಂಜುಂಡಪ್ಪ ಎಂ., ಕೂಡ್ಲು ಶ್ರೀಧರ್, ಎಚ್. ರಾಮು, ಶಂಕ್ರಾನಾಯ್ಕ್, ನಾಗರಾಜ್ ನಾಯ್ಕ್, ಆರ್‌.ಕಣ್ಣನ್ ಮತ್ತಿತರರು ಇದ್ದರು.