ಕಾವೇರಿ ವಿಚಾರ ಅನ್ಯಾಯ<bha>;</bha> ನಾಯಕರ ಅಣಕು ಶ್ರಾದ್ಧ
KannadaprabhaNewsNetwork | Published : Oct 04 2023, 01:00 PM IST
ಕಾವೇರಿ ವಿಚಾರ ಅನ್ಯಾಯ<bha>;</bha> ನಾಯಕರ ಅಣಕು ಶ್ರಾದ್ಧ
ಸಾರಾಂಶ
ಕರ್ನಾಟಕ ರಕ್ಷಣಾ ವೇದಿಕೆಯಿಂದ ವಿನೂತನ ಪ್ರತಿಭಟನೆ, ಕೈಲಾಸ ಸಮಾರಾಧನೆ, ತಿಥಿಯೂಟ
* ಕರ್ನಾಟಕ ರಕ್ಷಣಾ ವೇದಿಕೆಯಿಂದ ವಿನೂತನ ಪ್ರತಿಭಟನೆ, ಕೈಲಾಸ ಸಮಾರಾಧನೆ, ತಿಥಿಯೂಟ ಕನ್ನಡಪ್ರಭ ವಾರ್ತೆ ದಾವಣಗೆರೆ ಕಾವೇರಿ ವಿಚಾರದಲ್ಲಿ ಪದೇ ಪದೇ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದು ಖಂಡಿಸಿ, ತಮಿಳುನಾಡಿಗೆ ನೀರು ಹರಿಸಲು ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಸಿಎಂ ಸ್ಟಾಲಿನ್, ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ, ಮೂವರ ಅಣಕು ಕೈಲಾಸ ಸಮಾರಾಧನೆ ಮಾಡಿ, ಸ್ಥಳದಲ್ಲಿ ತಿಥಿ ವಡೆ, ಪಾಯಸ, ಪುಳಿಯೊಗರೆ ಸೇವಿಸಿ ಕರವೇ (ಕರ್ನಾಟಕ ರಕ್ಷಣಾ ವೇದಿಕೆ) ನಗರದಲ್ಲಿ ಶುಕ್ರವಾರ ವಿನೂತನವಾಗಿ ಪ್ರತಿಭಟಿಸಿತು. ನಗರದ ಅಕ್ಕಮಹಾದೇವಿ ರಸ್ತೆಯ ಜಿಲ್ಲಾ ಗುರುಭವನದ ಬಳಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ನೇತೃತ್ವದಲ್ಲಿ ಪ್ರಧಾನಿ ಮೋದಿ, ಕರ್ನಾಟಕ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಸಿಎಂ ಸ್ಟಾಲಿನ್ ಅಣಕು ಪ್ರತಿಕೃತಿಗಳನ್ನು ದಹಿಸಿದ ಪ್ರತಿಭಟನಾಕಾರರು ಸ್ಥಳದಲ್ಲೇ ಈ ಮೂವರ ಅಣಕು ಕೈಲಾಸ ಸಮಾರಾಧನೆ ಮಾಡಿ, ತಿಥಿಯೂಟ ಸವಿದರು. ಈ ವೇಳೆ ಮಾತನಾಡಿದ ರಾಮೇಗೌಡ, ಕಾವೇರಿ ತೀರದ ಭಾಗದ ಜನರಿಗೆ ಸಮಸ್ಯೆಯಾಗಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಕಷ್ಟವಾಗುತ್ತಿದೆ. ಮಂಡ್ಯ, ಮೈಸೂರು ಭಾಗದ ರೈತರಿಗೆ ಬೆಳೆಗಳಿಗೆ ನೀರಿಲ್ಲ. ಪ್ರಾಧಿಕಾರದ ಆದೇಶದ ನೆಪವೊಡ್ಡಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ ಎಂದರು. ಅ.10ರಂದು ದೆಹಲಿ ಚಲೋ ಚಳವಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ತಮಿಳುನಾಡಿನ ಸಿಎಂ ಸ್ಟಾಲಿನ್ ಜೊತೆ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಜೊತೆ ಸೌಹಾರ್ದಯುತವಾಗಿ ಮಾತನಾಡಿ, ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ನಾಲ್ಕೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು, ಪ್ರಧಾನಿ ನರೇಂದ್ರ ಮೋದಿ ಶಾಂತಿಯುತವಾಗಿ ರಾಜ್ಯದ ಜಲ ವಿವಾದ ಪರಿಹರಿಸಬೇಕು. ತಕ್ಷಣವೇ ಪ್ರಧಾನಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಅ.10ರಂದು ದೆಹಲಿ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. 10 ಸಾವಿರಕ್ಕೂ ಅಧಿಕ ಹೋರಾಟಗಾರರು ಭಾಗಿ ರಾಜ್ಯದಲ್ಲಿ ಕಾವೇರಿ ನೀರಿನ ವಿಚಾರದಲ್ಲಿ ಹೋರಾಟ ನಡೆಸುತ್ತಿರುವ ಬಿಜೆಪಿಯವರು ದೆಹಲಿಯಲ್ಲಿ ಕಾವೇರು ನೀರು ನಿರ್ವಹಣಾ ಪ್ರಾಧಿಕಾರದ ಕಚೇರಿ ಮುಂದೆ ಯಾಕೆ ಪ್ರತಿಭಟಿಸುತ್ತಿಲ್ಲ? ದೆಹಲಿಯಲ್ಲಿ ಹೋರಾಡಿ, ನಿಮ್ಮ ತಾಕತ್ತು ಪ್ರದರ್ಶಿಸಿ. 10 ಸಾವಿರಕ್ಕೂ ಅಧಿಕ ಹೋರಾಟಗಾರರು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ನೇತೃತ್ವದಲ್ಲಿ ದೆಹಲಿ ಚಲೋ ಹೋರಾಟಕ್ಕಿಳಿಯಲಿದ್ದು, ಕಾವೇರಿ ನೀರಿಗಾಗಿ ಐತಿಹಾಸಿಕ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು. ವೇದಿಕೆ ಮುಖಂಡರಾದ ಬಸಮ್ಮ, ಮಂಜುಳಮ್ಮ, ಶಾಂತಮ್ಮ, ಸಾಕಮ್ಮ, ಗೋಪಾಲ ದೇವರಮನಿ, ಬ್ಯಾಟರಿ ಜಬೀವುಲ್ಲಾ, ಜಿ.ಎಸ್.ಸಂತೋಷ್, ಜಬೀವುಲ್ಲಾ ಖಾನ್, ಬಾಷಾ ದಾದರ್, ನಿಜಾಂ, ಬಿಲಾಲ್, ದಾದಾಪೀರ್ ಪೈಲ್ವಾನ್, ತನ್ವೀರ್, ಗಿರೀಸ, ಕುಮಾರ, ರವಿಕುಮಾರ, ಎನ್.ಬಿ.ಲೋಕೇಶ, ಎ.ಅಭಿಷೇಕ್, ಈಶ್ವರ್, ಆಟೋ ರಫೀಕ್, ಖಾದರ್ ಬಾಷಾ, ಧೀರೇಂದ್ರ ನಾಗರಾಜ, ತುಳಸಿರಾಮ, ಬಸವರಾಜ, ಸಂಜು, ವಿನಯ್, ಸಾಗರ್, ಅಕ್ಷಯ್, ಗುರುಮೂರ್ತಿ, ಅಲ್ಲಾಬಕ್ಷಿ ಇತರರಿದ್ದರು. ............... 29ಕೆಡಿವಿಜಿ1, 2, 3- ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಖಂಡಿಸಿ ದಾವಣಗೆರೆಯಲ್ಲಿ ಶುಕ್ರವಾರ ಸ್ಟಾಲಿನ್, ಮೋದಿ, ಸಿದ್ದರಾಮಯ್ಯ ಅಣಕು ಕೈಲಾಸ ಸಮಾರಾಧನೆ ಮಾಡಿ, ತಿಥಿಯೂಟ ಸೇವಿಸಿ ವಿನೂತನ ಪ್ರತಿಭಟನೆ ನಡೆಸಿದ ಕರವೇ.