ಸಾರಾಂಶ
ಬೆಂಗಳೂರು : ಟ್ಯಾಂಕ್ ನೀರಿನ ಮಾಫಿಯಾಕ್ಕೆ ಕಡಿವಾಣ ಹಾಕಲು ಮತ್ತು ಪ್ರತಿ ಮನೆಗೂ ಸರಳವಾಗಿ ನೀರಿನ ಸಂಪರ್ಕ ದೊರಕಿಸುವ ನಿಟ್ಟಿನಲ್ಲಿ ರೂಪಿಸಿರುವ ‘ಸರ್ವರಿಗೂ ಸಂಚಾರಿ ಕಾವೇರಿ ಮತ್ತು ಮನೆ ಮನೆಗೂ ಸರಳ ಕಾವೇರಿ’ ಯೋಜನೆಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ವಿಧಾನಸೌಧ ಮುಂಭಾಗ ಚಾಲನೆ ನೀಡಿದರು.
ಟ್ಯಾಂಕರ್ ನೀರು ಕುಡಿಯುವ ಮೂಲಕ ಯೋಜನೆಗಳಿಗೆ ಚಾಲನೆ ನೀಡಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಟ್ಯಾಂಕರ್ ನೀರು ಪೂರೈಕೆ ದೊಡ್ಡ ಮಾಫಿಯಾವಾಗಿದೆ. ಸುಮಾರು 3000 ಜನ ತಮ್ಮ ಜಾಗದಲ್ಲಿ ಬೋರ್‌ವೆಲ್ ಹಾಕಿಕೊಂಡು ಸಮಯ ನೋಡಿಕೊಂಡು ಪ್ರತಿ ಟ್ಯಾಂಕರ್ ನೀರಿಗೆ 500 ರು.ನಿಂದ 4000 ರು. ವರೆಗೆ ವಸೂಲಿ ಮಾಡುವ ಪದ್ಧತಿ ರೂಢಿಸಿಕೊಂಡಿದ್ದಾರೆ.
ಇದನ್ನು ತಪ್ಪಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ನೀರು ಪೂರೈಸಲು ದೇಶದಲ್ಲೇ ಮೊದಲ ಬಾರಿಗೆ ಸಂಚಾರಿ ಕಾವೇರಿ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆ ಮೂಲಕ ಬೆಂಗಳೂರು ಜಲಮಂಡಳಿಯು ಟ್ಯಾಂಕರ್‌ಗಳ ಮೂಲಕ 660 ರು.ಗೆ 4000 ಲೀಟರ್, 740 ರು.ಗೆ 6000 ಲೀಟರ್ ಶುದ್ಧ ಕುಡಿಯುವ ಕಾವೇರಿ ನೀರನ್ನು ಮನೆಗಳಿಗೆ ಸರಬರಾಜು ಮಾಡಲಿದೆ ಎಂದು ತಿಳಿಸಿದರು.
ಅದೇ ರೀತಿ ಸರಳ ಕಾವೇರಿ ಯೋಜನೆ ಮೂಲಕ ಕೇವಲ 1000 ರು. ಪಾವತಿಸಿ ಸಣ್ಣ ಮನೆಗಳಿಗೆ(600 ಚ.ಅಡಿ ಅಳತೆ) ಕಾವೇರಿ ನೀರಿನ ಸಂಪರ್ಕ ಪಡೆಯಬಹುದು. ಅಪಾರ್ಟ್‌ಮೆಂಟ್ ನಿವಾಸಿಗಳು ಒಂದೇ ಸಲ ಪೂರ್ಣ ದರ ಪಾವತಿಸಿ ಸಂಪರ್ಕ ಪಡೆಯುವುದು ಕಷ್ಟ ಎನ್ನುವ ಕಾರಣಕ್ಕೆ ಆರಂಭದಲ್ಲಿ ಶೇ.20ರಷ್ಟು ಶುಲ್ಕ ಪಾವತಿಸಿ ಉಳಿದ ಮೊತ್ತವನ್ನು ಮುಂದಿನ 1 ವರ್ಷದಲ್ಲಿ ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಿ ಯೋಜನೆ ರೂಪಿಸಿದ್ದೇವೆ ಎಂದು ವಿವರಿಸಿದರು.
ಶೀಘ್ರ ಮನೆ ಬಾಗಿಲಿಗೆ ಆಸ್ತಿ ಖಾತೆ: ಎಲ್ಲರ ಮನೆ ಬಾಗಿಲಿಗೆ ಅವರ ಆಸ್ತಿ ಖಾತೆಗಳನ್ನು ನೀಡುವ ಯೋಜನೆ ತಯಾರಿಸಿದ್ದೇನೆ. ಜೊತೆಗೆ ‘ನಂಬಿಕೆ ನಕ್ಷೆ’ ಎಂಬ ಯೋಜನೆ ತರುತ್ತಿದ್ದು ನಕ್ಷೆ ಮಂಜೂರಾತಿಗೆ ಸಾರ್ವಜನಿಕರು ಬಿಬಿಎಂಪಿಗೆ ಹೋಗದೆ ಸರ್ಟಿಫೈಡ್ ಎಂಜಿನಿಯರಿಂಗ್‌ರಿಂದ ಪ್ಲಾನ್ ಸ್ಯಾಂಕ್ಷನ್ ತೆಗೆದುಕೊಂಡು ಮನೆ ಕಟ್ಟಬಹುದು. ಜನ ಯಾರು ಒಪ್ಪುತ್ತಾರೋ ಬಿಡುತ್ತಾರೋ ಮುಖ್ಯಅಲ್ಲ. ದೇವರು ಕೊಟ್ಟಿರುವ ಅವಕಾಶವನ್ನು ಜನರ ಉಪಯೋಗಕ್ಕೆ ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ಎಸ್.ಟಿ.ಸೋಮಶೇಖರ್, ಶ್ರೀನಿವಾಸ್, ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹತ್ ಇದ್ದರು.