ರಾಮನಗುಡ್ಡೆ ಜಲಾಶಯಕ್ಕೆ ತಿಂಗಳೊಳಗೆ ಕಾವೇರಿ ನೀರು: ಶಾಸಕ ಎಂ.ಆರ್. ಮಂಜುನಾಥ್

| Published : Sep 02 2025, 01:00 AM IST

ರಾಮನಗುಡ್ಡೆ ಜಲಾಶಯಕ್ಕೆ ತಿಂಗಳೊಳಗೆ ಕಾವೇರಿ ನೀರು: ಶಾಸಕ ಎಂ.ಆರ್. ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಮುಖ ಮೂರು ಜಲಾಶಯಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು, ಗುಂಡಾಲ್ ಜಲಾಶಯಕ್ಕೆ ಈಗಾಗಲೇ ನೀರು ಹರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹನೂರು

ಇಲ್ಲಿನ ರಾಮನಗುಡ್ಡೆ ಜಲಾಶಯಕ್ಕೆ ಒಂದು ತಿಂಗಳೊಳಗೆ ಕಾವೇರಿ ನದಿಯಿಂದ ನೀರು ತುಂಬಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ಭರವಸೆ ನೀಡಿದರು.

ಹನೂರು ತಾಲೂಕಿನ ರಾಮನಗುಡ್ಡೆ ಜಲಾಶಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಮುಖ ಮೂರು ಜಲಾಶಯಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು, ಗುಂಡಾಲ್ ಜಲಾಶಯಕ್ಕೆ ಈಗಾಗಲೇ ನೀರು ಹರಿಸಲಾಗುತ್ತಿದೆ. ರಾಮನಗುಡ್ಡ ಜಲಾಶಯಕ್ಕೆ 1.4 ಕಿಲೋ ಮೀಟರ್ ಪೈಪ್‌ಲೈನ್ ಕಾಮಗಾರಿ ಬಾಕಿ ಇರುವುದರಿಂದ ನೀರು ತುಂಬಿಸಲು ಸಾಧ್ಯವಾಗಿರಲಿಲ್ಲ. ಕಳೆದ ಒಂದು ತಿಂಗಳ ಹಿಂದೆ ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಗಿತ್ತು.

ಒಂದು ತಿಂಗಳಿನಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಭೇಟಿ ಮಾಡಿ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ಅವರು ಸಹ ನಮ್ಮ ಮನವಿಗೆ ಸ್ಪಂದಿಸಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2.5 ಕೋಟಿ ಅನುದಾನ ನೀಡಿ, ಟೆಂಡರ್ ಪ್ರಕ್ರಿಯೆ ಮುಗಿಸಿ ತುರ್ತು ಟೆಂಡರ್ ಕರೆದಿದ್ದಾರೆ. ಇನ್ನು ಒಂದು ತಿಂಗಳೊಳಗೆ ಟೆಂಡರ್ ಮುಗಿದು ಕಾಮಗಾರಿ ಪ್ರಾರಂಭವಾಗಿ ನೀರು ಹರಿಸಲು ಪಣತೊಟ್ಟಿದ್ದೇವೆ ಎಂದರು. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೀರಾವರಿ ಯೋಜನೆಗಳಿಗೆ 52 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ಆದರೆ ಹಣಕಾಸು ಇಲಾಖೆಯಿಂದ ಇನ್ನು ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದರಿಂದ ಅನುದಾನ ಬರಲು ಇನ್ನು ಸಮಯ ಅವಕಾಶ ಬೇಕಾಗುತ್ತದೆ. 14.5 ಕೋಟಿ ಹಣವನ್ನು ವಿವಿಧ ಜಲಾಶಯಗಳ ಹೂಳು ತೆಗೆಯಲು ಮೀಸಲಿಟ್ಟಿದೆ. ಅಲ್ಲಿಯವರೆಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಿದರೆ ಹೆಚ್ಚಿನ ನೀರು ಶೇಖರಣೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ರಾಮನ ಗುಡ್ಡ ಜಲಾಶಯದ ಹೂಳು ತೆಗೆಯಲು ರೈತರು ಮುಂದೆ ಬಂದರೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

ರಾಮನಗುಡ್ಡೆ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ರೈತರ ಜಮೀನು ಸ್ವಾಧೀನಪಡೆದುಕೊಳ್ಳಲಾಗಿತ್ತು. ಈಗಾಗಲೇ ರೈತರಿಗೆ ಸರ್ಕಾರದಿಂದ ಪರಿಹಾರವನ್ನು ನೀಡಲಾಗಿದೆ. ಈಗಾಗಲೇ ಸಣ್ಣ ನೀರಾವರಿ ಇಲಾಖೆ ಹಾಗೂ ಭೂಮಾಪನ ಇಲಾಖೆ ವತಿಯಿಂದ ಸರ್ವೆ ನಡೆಸಿ ಒತ್ತುವರಿಯನ್ನು ತೆರವು ಮಾಡಲಾಗುತ್ತಿದೆ. ಇದಲ್ಲದೆ ರಾಮನ ಗುಡ್ಡ ಜಲಾಶಯದಲ್ಲಿ ಬೆಳೆದಿದ್ದ ಗಿಡಗಂಟಿಗಳು ಮುಳ್ಳು ಪೊದೆಗಳನ್ನು ಇಟಾಚಿ ಯಂತ್ರಗಳ ಮೂಲಕ ಸ್ವಚ್ಛ ಮಾಡಲಾಗಿದೆ. ಒಟ್ಟಾರೆ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹಣೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಲು ಎಲ್ಲಾ ರೀತಿಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೆರೆಗಳಿಗೂ ನೀರು ತುಂಬಿಸಲಾಗುವುದು:

ರಾಮನಗುಡ್ಡೆ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ಒಂದು ತಿಂಗಳೊಳಗೆ ನೀರು ತುಂಬಿಸಲಾಗುವುದು. ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡಲು ಮುಂದಿನ ದಿನಗಳಲ್ಲಿ ಮಣಗಳ್ಳಿ, ಬಂಡಳ್ಳಿ ಹಲಗಾಪುರ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದು ಎಂದರು.

ರಸ್ತೆಗಳ ಅಭಿವೃದ್ಧಿ: ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ಅಭಿವೃದ್ಧಿಯಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮಲೆ ಮಹದೇಶ್ವರಬೆಟ್ಟ ಹಾಗೂ ಕೊಳ್ಳೇಗಾಲ ಉಪ ವಿಭಾಗ ವ್ಯಾಪ್ತಿಯ ಹಳ್ಳಿ ರಸ್ತೆಗಳನ್ನು ಬಿಟ್ಟು ಮುಖ್ಯ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಸುಮಾರು 400 ಕೋಟಿ ಅನುದಾನ ಬೇಕಿದೆ. ಸರ್ಕಾರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿ ಅನುದಾನ ಬಿಡುಗಡೆಯಾದ ನಂತರ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಚಾಮೂಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ರಾಮಪುರ ರಾಜೇಂದ್ರ, ರೈತ ಮುಖಂಡರಾದ ಮಾದಪ್ಪ ಮಣೆಗಾರ ಪ್ರಸಾದ್, ಮುಖಂಡರಾದ ವಿಜಯಕುಮಾರ್, ನಿರಂಜನ್, ಧನರಾಜ್, ಪುಟ್ಟಸ್ವಾಮಿ, ಮಲ್ಲು, ಶಿವಪ್ಪ ಮಣಿ ಸೇರಿದಂತೆ ಇನ್ನಿತರರು ಹಾಜರಿದ್ದರು.

------------

1ಸಿಎಚ್‌ಎನ್‌52

ಹನೂರು ತಾಲೂಕಿನ ರಾಮನಗುಡ್ಡ ಜಲಾಶಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ಮುಖಂಡರುಗಳ ಸಭೆಯಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಅ‍ವರು ಮಾತನಾಡಿದರು.

----------

1ಸಿಎಚ್‌ಎನ್‌53

ಹನೂರು ತಾಲೂಕಿನ ರಾಮನಗುಡ್ಡ ಜಲಾಶಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತರ ಸಭೆಯಲ್ಲಿ ಭಾಗವಹಿಸಿದ್ದ ರೈತರು.