ಸಿಕೆಬಿ-2 ಕಾಂಗ್ರೆಸ್ ಬೂತ್ ಮಟ್ಟದ ಎಜೆಂಟೆರುಗಳ ತರಬೇತಿ ಕಾರ್ಯಾಗಾರ ಮಾಜಿ ಸಂಸದ ವೀರಪ್ಪ ಮೊಯ್ಲಿ ಮಾತನಾಡಿದರು. | Kannada Prabha
Image Credit: KP
ಕೇಸನ್ನು ಹೆದರಿಸುವಂಥಹ ಬುದ್ದಿಶಕ್ತಿ ನಮ್ಮ ಡಿ.ಕೆ. ಶಿವಕುಮಾರ್ ಗೆ ಇದೆ. ಅವರ ಮೇಲೆ ಸಿಬಿಐ ತನಿಖೆ ರಾಜಕೀಯ ಪ್ರೇರಿತವಾಗಿದೆ. ಕೇಂದ್ರ ಸರ್ಕಾರವನ್ನು ವಿರೋಧಿಸೋರ ಮೇಲೆ ಸಿಬಿಐ, ಸಿಐಡಿ ಮತ್ತು ಈಡಿ ತನಿಖೆ ಮಾಮೂಲಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
ಚಿಕ್ಕಬಳ್ಳಾಪುರ: ಕೇಸನ್ನು ಹೆದರಿಸುವಂಥಹ ಬುದ್ದಿಶಕ್ತಿ ನಮ್ಮ ಡಿ.ಕೆ. ಶಿವಕುಮಾರ್ ಗೆ ಇದೆ. ಅವರ ಮೇಲೆ ಸಿಬಿಐ ತನಿಖೆ ರಾಜಕೀಯ ಪ್ರೇರಿತವಾಗಿದೆ. ಕೇಂದ್ರ ಸರ್ಕಾರವನ್ನು ವಿರೋಧಿಸೋರ ಮೇಲೆ ಸಿಬಿಐ, ಸಿಐಡಿ ಮತ್ತು ಈಡಿ ತನಿಖೆ ಮಾಮೂಲಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ತನಿಖೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಬೆಳಗಾವಿ ಕಾಂಗ್ರೆಸ್ ನಲ್ಲಿ ಬಿರುಕು ವಿಚಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಈಗಿರುವಷ್ಟು ಒಗ್ಗಟ್ಟು ರಾಷ್ಟ್ರದಲ್ಲಿ , ರಾಜ್ಯದಲ್ಲಿ, ಜಿಲ್ಲೆಯಲ್ಲಿ ಎಂದಿಗೂ ಇರಲಿಲ್ಲ ಎಂದರು. ಸತೀಶ್ ಜಾರಕಿ ಹೋಳಿ ಡಿಸಿಎಂ ಸ್ಥಾನದ ಕುರಿತು ಮಾತನಾಡಿ,ಯಾರನ್ನು ಡಿಸಿಎಂ ಮಾಡಬೇಕು ಯಾರನ್ನು ಮಂತ್ರಿಗಳನ್ನು ಮಾಡಬೇಕು ಹೈ ಕಮ್ಯಾಂಡ್ ಗೆ ಗೊತ್ತಿದೆ. ನಮ್ಮ ಪಕ್ಷದ ಆಂತರಿಕ ವಿಚಾರ ಹೈ ಕಮ್ಯಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಡಿಕೆಶಿ ಬಗ್ಗೆ ಬಿಜೆಪಿಗೆ ಹೆದರಿಕೆ: ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ ಇದ್ದ ಹಾಗೆ, ಚುನಾವಣೆಗಳ ಹತ್ತಿರ ಬರುತ್ತಿದ್ದಂತೆ ಬಿಜೆಪಿಯವರು ಡಿಕೆ ಸಾಹೇಬರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಇಡಿ, ಸಿಬಿಐಯನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ನೋಡಿದ್ರೆ ಬಿಜೆಪಿಯವರಿಗೆ ಹೆದರಿಕೆ ಇದೆ. ಹೀಗಾಗಿ ಪದೇ ಪದೇ ಅವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಒಕ್ಕಲಿಗ ಸಮುದಾಯದ ಅತಿದೊಡ್ಡ ಲೀಡರ್ ಡಿ.ಕೆ. ಶಿವಕುಮಾರ್ ಸಾಹೇಬರು ಎಂದರು. ಡಿಕೆಶಿಯನ್ನು ಜೈಲಿಗೆ ಹಾಕಿಸಲು ಒಪ್ಪಂದ: ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಹಾಕುವಂತೆ ಕುಮಾರಸ್ವಾಮಿ ಕೇಂದ್ರ ಸರ್ಕಾರ ಜೊತೆ ಒಪ್ಪಂದ ಮಾಡಿಕೊಂಡು ಬಂದಿದ್ದಾರೆ. ನಿಮ್ಮದೇ ಸಮುದಾಯದ ನಾಯಕನನ್ನ ಜೈಲಿಗೆ ಹಾಕುವಂತೆ ಪ್ರಯತ್ನ ಮಾಡೋದು ಎಷ್ಟು ಸರಿ?. ಒಕ್ಕಲಿಗ ಸಮುದಾಯ ಜೆಡಿಎಸ್ ಪಕ್ಷಕ್ಕೆ ಹಲವು ವರ್ಷಗಳಿಂದ ಬೆನ್ನೆಲುಬಾಗಿ ನಿಂತಿದೆ. ಇದಕ್ಕೆಲ್ಲ ನೀವು ದ್ರೋಹ ಬಗೆದಂತಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಪ್ರಶ್ನೆ ಮಾಡಿದರು. ಒಕ್ಕಲಿಗರಲ್ಲಿ ಡಿ.ಕೆ.ಶಿವಕುಮಾರ್ ಅವರು ಪ್ರಬಲವಾಗಿದ್ದಾರೆ ಅಂತ ಎಚ್. ಡಿ ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು. ಬಿಜೆಪಿಯವರ ಷಡ್ಯಂತರದಿಂದ ಈ ರೀತಿ ನಡೆಯುತ್ತಿದೆ. ನಮ್ಮ ಡಿಕೆ ಸಾಹೇಬರಿಗೆ ಏನಾದರೂ ಆದರೆ ನಾವು ಉಗ್ರ ಹೋರಾಟಕ್ಕೆ ಇಳಿಯುತ್ತೇವೆ. ನಮ್ಮ ಪಕ್ಷ ಹಾಗೂ ನಾಯಕರ ಬಗ್ಗೆ ನಾವು ಪ್ರಾಣ ಕೊಡಲು ಸಿದ್ದರಿದ್ದೇವೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.