ಮುಡಾದ ಹಗರಣದ ತನಿಖೆಗೆ ಸಿಬಿಐ ಮುಂದಾಗಲಿದೆ: ಶಾಸಕ ಶ್ರೀವತ್ಸ

| Published : Nov 19 2024, 12:53 AM IST

ಮುಡಾದ ಹಗರಣದ ತನಿಖೆಗೆ ಸಿಬಿಐ ಮುಂದಾಗಲಿದೆ: ಶಾಸಕ ಶ್ರೀವತ್ಸ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಪತ್ನಿ ಪಾರ್ವತಿ ಅವರಿಗೆ ಸಂಬಂಧಿಸಿದ ದಾಖಲೆ ಪತ್ರಕ್ಕೆ ವೈಟ್ನರ್ ಹಾಕಿದ ಪ್ರತಿಯೂ ಸಿಎಂ ಕಚೇರಿಯಲ್ಲಿದೆ. ಈ ಎಲ್ಲಾ ಕಡತಗಳು ಮುಡಾದಲ್ಲಿ ಇರಬೇಕಿತ್ತು. ಆದರೆ, ಸಿಎಂ ಕಚೇರಿಗೆ ತಲುಪಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಮುಡಾದಲ್ಲಿ ನಡೆದಿರುವ ಬಹಕೋಟಿ ಹಗರಣದ ತನಿಖೆಗೆ ಸಿಬಿಐ ಮುಂದಾಗಲಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬರಲಿದೆ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ ಸಂಖ್ಯೆ 1ರ ಕಟ್ಟಡದಲ್ಲಿ ತಮ್ಮ ಕಚೇರಿಯನ್ನು ಸೋಮವಾರ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ನಡೆದಿರುವ ಹಗರಣದ ಅನೇಕ ಕಡತಗಳು ನಾಪತ್ತೆಯಾಗಿವೆ. ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ವೇಳೆ ಬಚ್ಚೇಗೌಡರಿಗೆ ಸಂಬಂಧಿಸಿದ ದಾಖಲೆ ಪ್ರದರ್ಶಿಸಿದರು.

ಸಿಎಂ ಪತ್ನಿ ಪಾರ್ವತಿ ಅವರಿಗೆ ಸಂಬಂಧಿಸಿದ ದಾಖಲೆ ಪತ್ರಕ್ಕೆ ವೈಟ್ನರ್ ಹಾಕಿದ ಪ್ರತಿಯೂ ಸಿಎಂ ಕಚೇರಿಯಲ್ಲಿದೆ. ಈ ಎಲ್ಲಾ ಕಡತಗಳು ಮುಡಾದಲ್ಲಿ ಇರಬೇಕಿತ್ತು. ಆದರೆ, ಸಿಎಂ ಕಚೇರಿಗೆ ತಲುಪಿವೆ ಎಂದು ದೂರಿದರು.

ಮುಡಾ 50:50 ಅನುಪಾತದ ಹಲವು ಫೈಲ್ ಗಳು ನಾಪತ್ತೆಯಾಗಿವೆ. ನ.30ಕ್ಕೆ ನಡೆಯುವ ಮುಡಾ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗುವುದು. ಮುಡಾ ಹಗರಣದ ವಿಚಾರದಲ್ಲಿ ದೂರುದಾರರ ವಿರುದ್ಧವೇ ಪ್ರತಿ ದೂರು ನೀಡಲಾಗುತ್ತಿದೆ. ಈ ಮೂಲಕ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಕರ್ತವ್ಯ ಲೋಪ ಎಸಗಿರುವ ಮುಡಾದ ಈ ಹಿಂದಿನ ಇಬ್ಬರು ಆಯುಕ್ತರು ಹಾಗೂ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಮುಡಾ ಹಗರಣ ಸಂಬಂಧ ಈಗಾಗಲೇ ಇಡಿ ಎಂಟ್ರಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಸಿಬಿಐ ತನಿಖೆಗೆ ಮುಂದಾಗಬಹುದು. ಸಿಬಿಐ ಪ್ರವೇಶಿಸಿದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗಬಹುದು ಎಂದು ಅವರು ಹೇಳಿದರು.

ಬಿಜೆಪಿ ನಿರ್ಲಕ್ಷ್ಯ ಮಾಡಿತು

40% ಕಮಿಷನ್ ಆರೋಪ ನಿರಾಧಾರ ಎಂದು ಲೋಕಾಯುಕ್ತ ವರದಿ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಆಗ ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡಿತ್ತು. ಆದರೆ, ಕಾಂಗ್ರೆಸ್ ಮಾಡಿದ ಆರೋಪಗಳನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿತು. ಕಾಂಗ್ರೆಸ್ ಮಾಡಿದ ಸುಳ್ಳು ಆರೋಪಕ್ಕೆ ನಾವು ಅಂದೇ ಕೌಂಟರ್ ಕೊಡಬೇಕಿತ್ತು. ಆದರೆ, ಆಗ ನಾವು ನಿರ್ಲಕ್ಷ್ಯ ಮಾಡಿದೆವು. ಪರಿಣಾಮ ನಾವು 66 ಸ್ಥಾನಕ್ಕೆ ಕುಸಿದು, ಕಾಂಗ್ರೆಸ್ 135 ಸ್ಥಾನಗಳನ್ನು ಗಳಿಸಿತು. ನಾವು ಕಾಂಗ್ರೆಸ್ ಗೆ ಸಮರ್ಥವಾಗಿ ತಿರುಗೇಟು ನೀಡಿದ್ದರೆ ಫಲಿತಾಂಶ ಬಿಜೆಪಿ ಪರವಾಗಿರುತ್ತಿತ್ತು ಎಂದರು.

ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಬಂಧನವಾಗಿದೆ. ಅಷ್ಟರಮಟ್ಟಿಗೆ ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಅವರು ಆರೋಪಿಸಿದರು.

‘ಸಚಿವ ಜಮೀರ್ ಅಹಮದ್ ಈಗಲೂ ವರ್ಣಭೇದದ ಬಗ್ಗೆ ಮಾತನಾಡಿದ್ದು ಖಂಡನೀಯ. ಬಣ್ಣದ ಬಗ್ಗೆ ಮಾತನಾಡಿದ ಸಚಿವ ಜಮೀರ್ ಅವರನ್ನು ಅಂದೇ ಸಂಪುಟದಿಂದ ಕೈಬಿಡಬೇಕಿತ್ತು. ವರ್ಣಭೇದದ ಬಗ್ಗೆ ಮಾತನಾಡಿರುವ ಸಚಿವ ಜಮೀರ್ ಅಹಮದ್ ಓರ್ವ ಅವಿವೇಕಿ ಮಂತ್ರಿ’

- ಟಿ.ಎಸ್. ಶ್ರೀವತ್ಸ, ಬಿಜೆಪಿ ಶಾಸಕ