ಸಾರಾಂಶ
2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ
ಕನ್ನಡಪ್ರಭ ವಾರ್ತೆ ಗಂಗಾವತಿ
ನಗರದ ಪ್ರತಿಷ್ಠಿತ ಚೆನ್ನಬಸವಸ್ವಾಮಿ ಸೌಹಾರ್ದ ಸಹಕಾರಿ ಬ್ಯಾಂಕ್ ಪ್ರಸಕ್ತ ಸಾಲಿಗೆ ₹1.63 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಗಿರಿಯಪ್ಪ ಹೊಸಕೇರಿ ಹೇಳಿದರು.ನಗರದ ಶ್ರೀಚೆನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಜರುಗಿದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಬ್ಯಾಂಕು ಒಟ್ಟು ₹ 2.29 ಕೋಟಿ ಲಾಭ ಗಳಿಸಿದೆ. ಇದರಲ್ಲಿ ಆದಾಯ ತೆರಿಗೆ ಮತ್ತು ಎನ್.ಪಿ.ಏ. ಪ್ರಾವಿಜನ್ ₹ 0.66 ಕೋಟಿ ಮೊತ್ತ ತೆಗೆದಿರಿಸಿ, ನಿವ್ವಳ ₹1.63 ಕೋಟಿ ಲಾಭ ಗಳಿಸಿದೆ. ಇದು ಹಿಂದಿನ ಸಾಲಿನಲ್ಲಿ ಗಳಿಸಿದ ನಿವ್ವಳ ಲಾಭ ಮೊತ್ತ ₹1.22 ಹೋಲಿಸಿದಲ್ಲಿ ಬ್ಯಾಂಕು ಪ್ರಸಕ್ತ ಸಾಲಿನಲ್ಲಿ ಲಾಭ ಗಳಿಕೆಯಲ್ಲಿ ಶೇ. 32.8 ರ ಗಮನಾರ್ಹ ಪ್ರಗತಿ ದಾಖಲಿಸಿದೆ ಎಂದು ವಿವರಿಸಿದರು.
ಈಗಾಗಲೇ ಬ್ಯಾಂಕಿನ ಪ್ರಥಮ ಶಾಖೆಯನ್ನು ಕಾರಟಗಿ ಪಟ್ಟಣದಲ್ಲಿ ಪ್ರಾರಂಭಿಸಿದ್ದು, ಇನ್ನೊಂದು ಶಾಖೆಯನ್ನು ಈ ವರ್ಷಾಂತ್ಯಕ್ಕೆ ಪ್ರಾರಂಭಿಸುವುದಾಗಿ ಆಡಳಿತ ಮಂಡಳಿಯು ಹಾಕಿಕೊಂಡ ಯೋಜನೆಯನ್ನು ಮಹಾಸಭೆಗೆ ತಿಳಿಸಿದರು.ಬ್ಯಾಂಕಿನ ಸಿಇಒ ನಾಗೇಶ್ ಗೌಳಿ ಮಾತನಾಡಿ, ಪ್ರಸಕ್ತ ಸಾಲಿನ ಅಂತ್ಯಕ್ಕೆ ಬ್ಯಾಂಕು ಉತ್ತಮ ಪ್ರಗತಿ ಸಾಧಿಸಿದೆ. 31-3-2024 ರ ಅಂತ್ಯಕ್ಕೆ ₹72.58 ಕೋಟಿ ಠೇವಣಿ, ₹49.57 ಕೋಟಿ ಸಾಲ ಮತ್ತು ಮುಂಗಡಗಳು, ₹31.72 ಕೋಟಿ ಹೂಡಿಕೆ ₹91.77 ಕೋಟಿ ದುಡಿಯುವ ಬಂಡವಾಳ ಮತ್ತು 0.30 ನಿವ್ವಳ ಎನ್.ಪಿ.ಏ. ಪ್ರಮಾಣವನ್ನು ದಾಖಲಿಸಿ, ಪ್ರಸಕ್ತ ಸಾಲಿಗೆ ಬ್ಯಾಂಕು ಹಾಕಿಕೊಂಡ ಗುರಿಯನ್ನು ತಲುಪಿದೆ ಎಂದರು.ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕ ಹಾಗೂ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹಿರಿಯ ನಿರ್ದೇಶಕರಾದ ಕೆ.ಚನ್ನಬಸಯ್ಯಸ್ವಾಮಿ, ಕೆ.ಕಾಳಪ್ಪ, ನಾರಾಯಣರಾವ, ನಿರ್ದೇಶಕರಾದ ಬಸವರಾಜ ವೀರಶೆಟ್ಟಿ., ರಮೇಶ ಗೌಳಿ, ರಾಚಪ್ಪ ಸಿದ್ದಾಪುರ, ವಿನಯಕುಮಾರ್ ಕೆ., ಮಹಿಳಾ ನಿರ್ದೇಶಕರಾದ ಮುತ್ತಕ್ಕ ಅರಳಿ, ಲತಾ ಶರಣೇಗೌಡ ಮಾಲಿಪಾಟೀಲ ಉಪಸ್ಥಿತರಿದ್ದರು.
ಇದೇ ಸಂದರ್ಭ ಹಿರಿಯ ನ್ಯಾಯವಾದಿ ಸಿದ್ದನಗೌಡ ಪಾಟೀಲ್, ಬ್ಯಾಂಕ್‌ನ ನಿವೃತ್ತ ನೌಕರ ಅಲ್ಲಮಪ್ರಭು ಪಾಟೀಲ್, ನಳಿನಿ ಅವರನ್ನು ಸನ್ಮಾನಿಸಸಲಾಯಿತು.