ಸಾರಾಂಶ
ಬೆಂಗಳೂರು : ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ನಡೆಸಿ ಇಬ್ಬರು ಅಪ್ರಾಪ್ತ ಬಾಂಗ್ಲಾದೇಶದ ಬಾಲಕಿಯರನ್ನು ರಕ್ಷಿಸಿದ ಸಿಸಿಬಿ ಪೊಲೀಸರು, ಈ ಸಂಬಂಧ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಹೊಂಗಸಂದ್ರದ ಕರಿಷ್ಮಾ ಶೇಖ್ ಅಲಿಯಾಸ್ ಮುಸ್ಕಾನ್, ಶಾಂತಿಪುರದ ಸೂರಜ್ ಶಾಹಜೀ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಸುಬ್ರಹ್ಮಣ್ಯ ಶಾಸ್ತ್ರೀ ಬಂಧಿತನಾಗಿದ್ದು, ಈ ದಾಳಿ ವೇಳೆ 15 ಮತ್ತು 16 ವರ್ಷ ವಯಸ್ಸಿನ ಅಪ್ರಾಪ್ತ ಬಾಂಗ್ಲಾ ದೇಶದ ಬಾಲಕಿಯರನ್ನು ರಕ್ಷಿಸಲಾಗಿದೆ. ಗೋವಿಂದಪುರ ಸಮೀಪ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ಬಗ್ಗೆ ಮಾಹಿತಿ ಪಡೆದು ಶುಕ್ರವಾರ ಸಿಸಿಬಿ ಡಿಸಿಪಿ ಅಬ್ದುಲ್ ಅಹದ್ ಮಾರ್ಗದರ್ಶನದಲ್ಲಿ ಮಹಿಳಾ ಸಂರಕ್ಷಣಾ ದಳದ ಎಸಿಪಿ ಎಚ್.ಎನ್. ಧರ್ಮೇಂದ್ರ ನೇತೃತ್ವದ ತಂಡ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಕ್ರಮ ಬಾಂಗ್ಲಾ ವಲಸಿಗರು:
ಕರಿಷ್ಮಾ ಹಾಗೂ ಸೂರಜ್ ಮೂಲತಃ ಪಶ್ಚಿಮ ಬಂಗಾಳ ರಾಜ್ಯದವರಾಗಿದ್ದು, ಹಲವು ವರ್ಷಗಳ ಹಿಂದೆ ನಗರಕ್ಕೆ ಉದ್ಯೋಗ ನೆಪದಲ್ಲಿ ಬಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಅಂತೆಯೇ ಗೋವಿಂದಪುರದಲ್ಲಿ ಮನೆ ಬಾಡಿಗೆ ಪಡೆದು ಅಲ್ಲಿ ತಮ್ಮ ದಂಧೆಯನ್ನು ಆರೋಪಿಗಳು ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಬಾಂಗ್ಲಾ ದೇಶದ ಇಬ್ಬರನ್ನು ಬಾಲಕಿಯರನ್ನು ಕರೆತಂದಿದು ವೇಶ್ಯಾವಾಟಿಕೆ ಕೂಪಕ್ಕೆ ಕರಿಷ್ಮಾ ಗ್ಯಾಂಗ್ ನೂಕಿತ್ತು ಎಂದು ಸಿಸಿಬಿ ಮೂಲಗಳು ಮಾಹಿತಿ ನೀಡಿವೆ.
ಈ ವೇಶ್ಯಾವಾಟಿಕೆ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು. ಆ ವೇಳೆ ಗ್ರಾಹಕ ಸುಬ್ರಹ್ಮಣ್ಯ ಶಾಸ್ತ್ರೀ ಕೂಡ ಸಿಕ್ಕಿಬಿದ್ದಿದ್ದು, ಆ ಮನೆಗೆ ಎರಡನೇ ಬಾರಿಗೆ ಆತ ಬಂದಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಯಿತು. ಇನ್ನು ಆರಂಭದಲ್ಲಿ ತಾವು ಪಶ್ಚಿಮ ಬಂಗಾಳ ರಾಜ್ಯದವರು ಎಂದು ಸಂತ್ರಸ್ತೆಯರು ಹೇಳಿದ್ದರು. ಇದಕ್ಕೆ ಪೂರಕವಾಗಿ ಆಧಾರ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ಸಂತ್ರಸ್ತೆಯರು ತೋರಿಸಿದರು. ಆದರೆ ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ಆ ಬಾಲಕಿಯರು ಅಕ್ರಮ ಬಾಂಗ್ಲಾ ದೇಶದ ವಲಸಿಗರು ಎಂಬುದು ಖಚಿತವಾಯಿತು. ಹಾಗೆಯೇ ಸಂತ್ರಸ್ತೆರು ಅಪ್ರಾಪ್ತರು ಎಂಬುದು ತಿಳಿಯಿತು. ಈ ಮಾಹಿತಿ ಮೇರೆಗೆ ಪೊಕ್ಸೋ ಕಾಯ್ದೆಯಡಿ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಂಧೆಕೋರಳು ಬಾಂಗ್ಲಾ ಪ್ರಜೆ?
ಬಾಂಗ್ಲಾದೇಶ ಪ್ರಜೆ ಎಂಬ ಶಂಕೆ ಹಿನ್ನೆಲೆಯಲ್ಲಿ ವೇಶ್ಯಾವಾಟಿಕೆ ದಂಧೆಕೋರಳಾಗಿರುವ ಕರಿಷ್ಮಾಳ ಪೂರ್ವಾಪರ ಕುರಿತು ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.