ಸಾರಾಂಶ
ಹನೂರು ಪೊಲೀಸ್ ಠಾಣಾ ಸರದನ ಬಂಡಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲು ಮುರಿದು ಕಳ್ಳರು ಸಿಸಿಟಿವಿ ಡಿವಿಆರ್ ಹಾಗೂ ಕಂಪ್ಯೂಟರ್ ಪರಿಕರಗಳನ್ನು ಕಳ್ಳತನ ಮಾಡಿರುವ ಬಗ್ಗೆ ವರದಿಯಾಗಿದೆ.
ಕನ್ನಡಪ್ರಭ ವಾರ್ತೆ ಹನೂರು
ಬಂಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಗಿಲು ಮುರಿದು ಸಿಸಿ ಕ್ಯಾಮೆರಾ, ಡಿವಿಆರ್ ಹಾಗೂ ಕಂಪ್ಯೂಟರ್‌ಗೆ ಸಂಬಂಧಿಸಿದ ಪರಿಕರಗಳನ್ನು ಕಳ್ಳತನ ಮಾಡಿರುವ ಬಗ್ಗೆ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹನೂರು ತಾಲೂಕಿನ ಪೊಲೀಸ್ ಠಾಣಾ ಸರಹದ್ದಿನ ಸಮೀಪದ ಬಂಡಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲು ಮುರಿದು ನಿನ್ನೆ ರಾತ್ರಿ ಕಳ್ಳರು ಆಸ್ಪತ್ರೆಯಲ್ಲಿ ನೀಡಲಾಗಿದ್ದ ಸಿಸಿ ಕ್ಯಾಮೆರಾ ಡಿವಿಆರ್ ಹಾಗೂ ಕಂಪ್ಯೂಟರ್ ಮಾನಿಟರ್, ಮೌಸ್, ಕೀಬೋರ್ಡ್ ಕಚೇರಿಯಲ್ಲಿದ್ದ ಇನ್ಬಿಲ್ಟ್ ಸಿಪಿಒ ಕೀಬೋರ್ಡ್ ಸೇರಿದಂತೆ ವಿವಿಧ ಪರಿಕರಗಳನ್ನು ಕಳ್ಳರು ಬಾಗಿಲು ಮುರಿದು ₹80,000 ಬೆಲೆ ಬಾಳುವ ಪರಿಕರಗಳನ್ನು ಕಳ್ಳತನ ಮಾಡಿರುವ ಬಗ್ಗೆ ವರದಿಯಾಗಿದೆ.ಪ್ರಕರಣ ದಾಖಲು: ತಾಲೂಕು ವೈದ್ಯಾಧಿಕಾರಿ ಪ್ರಕಾಶ್ ಅವರ ಸೂಚನೆಯ ಮೇರೆಗೆ ಬಂಡಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಫಾರ್ಮಸಿ ಅಧಿಕಾರಿ ಮುನಿಸ್ವಾಮಿ ಹನೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಈ ಬಗ್ಗೆ ಇನ್ಸ್‌ಪೆಕ್ಟರ್ ಶಶಿಕುಮಾರ್ ಸೂಚನೆಯ ಮೇರೆಗೆ ಅವರ ಮಾರ್ಗದರ್ಶನದಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶಿವನಂಜಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆಚ್ಚಾದ ಕಳ್ಳತನ: ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣದ 11ನೇ ವಾರ್ಡಿನ ಕಂತು ದೊರೆ ಮನೆಯಲ್ಲಿ ಚಿನ್ನಾಭರಣ ಹಾಗೂ ಲಕ್ಷಾಂತರ ರು. ನಗದು ಕಳ್ಳತನವಾಗಿತ್ತು. ಇದುವರೆಗೂ ಕಳ್ಳರ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವುದರಿಂದ ಪ್ರಜ್ಞಾವಂತ ನಾಗರಿಕರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಳ್ಳತನ ಬಗ್ಗೆ ಪೊಲೀಸ್ ಹಿರಿಯ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.