ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಸೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ೨೫ ವರ್ಷಗಳಿಂದ ಕಾಂಗ್ರೆಸ್ ಪಕ್ಷದೊಳಗೆ ನಿಷ್ಠಾವಂತ ಕಾರ್ಯಕರ್ತರೆಂದು ಗುರುತಿಸಿಕೊಂಡಿರುವ ಗಂಗಾಧರ್‌ಗೆ ನಿರೀಕ್ಷೆಯಂತೆ ಮೈಷುಗರ್ ಅಧ್ಯಕ್ಷ ಸ್ಥಾನ ದೊರಕಿದೆ.ಮೂಲತಃ ಮಂಡ್ಯ ತಾಲೂಕು ಬಸರಾಳು ಹೋಬಳಿ ಚಂದಗಾಲು ಗ್ರಾಮದ ಸಿ.ಡಿ.ಗಂಗಾಧರ್‌೧೯೯೭ರಲ್ಲಿ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ೧೯೯೯ರಲ್ಲಿ ಕೆರಗೋಡು ವಿಧಾನಸಭಾ ಚುನಾವಣೆಯಲ್ಲಿ ಅಂಬರೀಶ್ ನಾಯಕತ್ವದಲ್ಲಿ ಎಚ್.ಬಿ.ರಾಮು ಪರ ಚುನಾವಣಾ ಹೋರಾಟ ನಡೆಸಿದರು. ೨೦೦೦ರಲ್ಲಿ ಹೊಳಲು ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಚುನಾಯಿತಗೊಂಡು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
೨೦೦೬ರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದ ಸಿ.ಡಿ.ಗಂಗಾಧರ್ ಪಕ್ಷೇತರ ಅಭ್ಯರ್ಥಿಯಾಗಿದ್ದ ಮರಿತಿಬ್ಬೇಗೌಡರ ಎದುರು ಪರಾಭವಗೊಂಡಿದ್ದರು. ೨೦೦೮ರಲ್ಲಿ ಕೆಪಿಸಿಸಿ ಸದಸ್ಯರಾಗಿ ಆಯ್ಕೆಯಾಗಿ ೨೦೦೯ರಲ್ಲಿ ಶಿಕ್ಷಕರು ಮತ್ತು ಪದವೀಧರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿದ್ದರು.೨೦೧೭ರ ಡಿಸೆಂಬರ್ ೨೭ರಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಡಿ.ಗಂಗಾಧರ್ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೬ ಸ್ಥಾನಗಳಲ್ಲಿ ಗೆಲ್ಲುವುದಕ್ಕೆ ಶ್ರಮಿಸಿದ್ದರು. ಇವರ ಪಕ್ಷನಿಷ್ಠೆಯನ್ನು ಗುರುತಿಸಿ ಸರ್ಕಾರ ಮೈಷುಗರ್ ಕಾರ್ಖಾನೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.ಇತಿಹಾಸ ಪ್ರಸಿದ್ಧ ಮೈಷುಗರ್ ಕಾರ್ಖಾನೆ ಪ್ರಸ್ತುತ ರೋಗಗ್ರಸ್ಥವಾಗಿದೆ. ನನ್ನ ಮೇಲೆ ವಿಶ್ವಾಸವಿಟ್ಟು ರಾಜ್ಯಸರ್ಕಾರ ಮೈಷುಗರ್ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ನೇಮಕ ಮಾಡಿದೆ. ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕರೆಲ್ಲರ ಮಾರ್ಗದರ್ಶನದಲ್ಲಿ ಕಂಪನಿಗೆ ಗತವೈಭವ ತರುವುದನ್ನು ಗುರಿಯಾಗಿಸಿಕೊಂಡು ಕಾರ್ಖಾನೆಯ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತೇನೆ.
- ಸಿ.ಡಿ.ಗಂಗಾಧರ್, ಅಧ್ಯಕ್ಷರು, ಮೈಷುಗರ ಕಾರ್ಖಾನೆ