ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣಿ ಗುತ್ತಿಗೆ ಹರಾಜು ವಿಷಯದಲ್ಲಿ ಅಧಿಕಾರಿಗಳ ಜಾಣ ನಡೆಗೆ ಕಿವಿಗೊಡದೆ, ಸ್ವತಃ ಪರಿಶೀಲಿಸಿ ಸುಪ್ರೀಂ ಕೋರ್ಟ್ ಆದೇಶಗಳ ಅನ್ವಯವೇ ನಡೆದುಕೊಳ್ಳಬೇಕು ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.
ಹೊಸಪೇಟೆ: ವಿಜಯನಗರ ಜಿಲ್ಲೆಯ ವ್ಯಾಸನಕೆರೆ, ಕಲ್ಲಹಳ್ಳಿ ಮತ್ತು ಬಳ್ಳಾರಿಯ ಸಂಡೂರಿನ ಜೈಸಿಂಗ್‌ಪುರ ಉತ್ತರ ಮತ್ತು ದಕ್ಷಿಣ ವಲಯ, ಸ್ವಾಮಿಮಲೈ ವಲಯಗಳನ್ನು ಹಾಗೂ ಹೊಸ ಅರಣ್ಯ ವಲಯಗಳನ್ನು ಕ್ರೋಡೀಕರಿಸಿ ಹೊಸದಾಗಿ ಗಣಿಗಳನ್ನು ಹರಾಜು ಹಾಕಿರುವುದಕ್ಕೆ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ಮತ್ತು ಕೇಂದ್ರದ ಅರಣ್ಯ ಸಲಹಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿವೆ. ಇದೊಂದು ಮಹತ್ವದ ಬೆಳವಣಿಗೆ ಆಗಿದೆ ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಿಇಸಿ ವಿಂಗಡಿಸಿದ್ದ ಎ, ಬಿ, ಸಿ ಕೆಟಗರಿ ಗಣಿಗಳು ಮತ್ತು ಹೊಸ ಅರಣ್ಯ ವಲಯವನ್ನು ಒಂದೇ ಕಡೆ ಸಮೀಕರಿಸಿ ಗಣಿ ಹರಾಜು ಹಾಕಿದೆ. ಆದರೆ, ಸುಪ್ರೀಂ ಕೋರ್ಟ್ 2013, 2015, 2017ರಲ್ಲಿ ನೀಡಿದ ಆದೇಶಗಳ ಉಲ್ಲಂಘನೆ ಮಾಡಲಾಗಿದೆ. ಈ ಕುರಿತು ಸ್ವತಃ ಸಿಇಸಿ ಫೆಬ್ರವರಿ 10ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಅಲ್ಲದೇ, ಸುಪ್ರೀಂ ಕೋರ್ಟ್‌ಗೆ ಏಪ್ರಿಲ್‌ನಲ್ಲಿ ಸಲ್ಲಿಸಿದ 214 ಪುಟಗಳ ವರದಿಯಲ್ಲೂ ಕೆಲವು ಅಂಶಗಳನ್ನು ಉಲ್ಲೇಖಿಸಿದೆ. ಹಾಗಾಗಿ ಕೇಂದ್ರದ ಅರಣ್ಯ ಸಲಹಾ ಸಮಿತಿ ಕೂಡ ಏಪ್ರಿಲ್‌ನಲ್ಲಿ ನಡೆಸಿದ ಸಭೆಯಲ್ಲಿ ಸಿಇಸಿ ಆಕ್ಷೇಪಗಳಿಗೆ ರಾಜ್ಯ ಸರ್ಕಾರ ಉತ್ತರಿಸಿದ ಬಳಿಕವೇ ಫಾರೆಸ್ಟ್ ಕ್ಲಿಯರೆನ್ಸ್ ಬಗ್ಗೆ ನಿರ್ಧರಿಸಲಾಗುವುದು ಎಂದು ಸಭೆ ಮುಂದೂಡಿದೆ. ಇದರಿಂದ ನ್ಯಾಚ್ಯುರಲ್ ರಿಸೋರ್ಸ್ ಸಂಸ್ಥೆ ಹಾಗೂ ಸಮಾಜ ಪರಿವರ್ತನಾ ಸಮುದಾಯ ಮತ್ತು ಜನಸಂಗ್ರಾಮ ಪರಿಷತ್ ಸಿಇಸಿ ಮತ್ತು ಕೇಂದ್ರದ ಅರಣ್ಯ ಸಲಹಾ ಸಮಿತಿ ನಡೆಯನ್ನು ಸ್ವಾಗತಿಸುತ್ತದೆ. ಈ ಗಣಿಗಳಲ್ಲಿ ಸಿಂಹಪಾಲು ಜಿಂದಾಲ್ ಕಂಪನಿ ಗುತ್ತಿಗೆ ಪಡೆದಿದೆ. ಅಕ್ರಮ ಗಣಿಗಾರಿಕೆ ನಡೆದ ಗಣಿಗಳನ್ನೇ ಕ್ರೋಡೀಕರಿಸಿ ಹರಾಜು ಹಾಕಲಾಗಿದೆ. ಈ ಎಲ್ಲ ಅಂಶಗಳನ್ನು ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಗಮನಿಸುತ್ತಿದ್ದು, ಸಿಇಸಿ ಹಾಗೂ ಸುಪ್ರೀಂ ಕೋರ್ಟ್ ಗಮನ ಕೂಡ ಸೆಳೆಯಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣಿ ಗುತ್ತಿಗೆ ಹರಾಜು ವಿಷಯದಲ್ಲಿ ಅಧಿಕಾರಿಗಳ ಜಾಣ ನಡೆಗೆ ಕಿವಿಗೊಡದೆ, ಸ್ವತಃ ಪರಿಶೀಲಿಸಿ ಸುಪ್ರೀಂ ಕೋರ್ಟ್ ಆದೇಶಗಳ ಅನ್ವಯವೇ ನಡೆದುಕೊಳ್ಳಬೇಕು ಎಂದರು.ಸಮಾಜ ಪರಿವರ್ತನಾ ಸಮುದಾಯದ ಶ್ರೀಶೈಲ ಆಲ್ದಹಳ್ಳಿ ಇದ್ದರು.