ಶ್ರದ್ಧಾ, ಭಕ್ತಿಯಿಂದ ಬಕ್ರೀದ್ ಆಚರಣೆ

| Published : Jun 18 2024, 12:54 AM IST

ಸಾರಾಂಶ

ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಳಿಕ ಆಪ್ತರನ್ನು ಆಲಂಗಿಸಿಕೊಂಡು ಹಬ್ಬದ ಶುಭಾಶಯವನ್ನು ಕೋರಿದರು.

ಕಾರವಾರ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಸೋಮವಾರ ಮುಸಲ್ಮಾನರು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಳಿಕ ಆಪ್ತರನ್ನು ಆಲಂಗಿಸಿಕೊಂಡು ಹಬ್ಬದ ಶುಭಾಶಯವನ್ನು ಕೋರಿದರು. ಹೊಸಬಟ್ಟೆ ತೊಟ್ಟು ಪುಟಾಣಿಗಳು ಸಂಭ್ರಮಿಸಿದರು. ಮಧ್ಯಾಹ್ನ ಮನೆಗಳಲ್ಲಿ ಸ್ನೇಹಿತರೊಂದಿಗೆ, ಸಂಬಂಧಿಕರೊಂದಿಗೆ, ಕುಟುಂಬಸ್ಥರೊಂದಿಗೆ ಹಬ್ಬದ ಊಟವನ್ನು ಸವಿದರು.

ಬಕ್ರೀದ್ ಹಿನ್ನೆಲೆ ಕಳೆದ ಕೆಲವು ದಿನಗಳಿಂದ ಜಿಲ್ಲಾದ್ಯಂತ ಕುರಿ, ಮೇಕೆ ಮಾರಾಟ ಜೋರಾಗಿ ನಡೆದಿತ್ತು. ಮುಸ್ಲಿಂ ಸಮುದಾಯದವರು ಖರೀದಿ ಮಾಡಿದ ಕುರಿ, ಮೇಕೆಯನ್ನು ಹಬ್ಬದ ದಿನ ತ್ಯಾಗದ ನೆನಪಿಗಾಗಿ ಬಲಿದಾನ ನೀಡಿ ಅದರ ಮಾಂಸವನ್ನು ಮೂರು ಭಾಗವನ್ನಾಗಿ ಮಾಡಿ ಒಂದು ಭಾಗವನ್ನು ಬಡವರಿಗೆ, ಇನ್ನೊಂದು ಕುಟುಂಬದವರಿಗೆ ಹಾಗೂ ಮತ್ತೊಂದು ಭಾಗವನ್ನು ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ನೀಡಿದರು.ಬಕ್ರೀದ್‌ ತ್ಯಾಗ, ಬಲಿದಾನದ ಸಂಕೇತ

ಭಟ್ಕಳ: ಪ್ರವಾದಿ ಇಬ್ರಾಹಿಂ ಮತ್ತು ಪ್ರವಾದಿ ಇಸ್ಮಾಯಿಲ್‌ರ ಸ್ಮರಣಾರ್ಥ ಜಗತ್ತಿನಾದ್ಯಂತ ಆಚರಿಸಲ್ಪಡುವ ತ್ಯಾಗ, ಬಲಿದಾನಗಳ ಪ್ರತೀಕವಾದ ಈದುಲ್ ಅದ್ಹಾ(ಬಕ್ರೀದ್ ಹಬ್ಬ) ವಿಶೇಷ ಪ್ರಾರ್ಥನೆಯನ್ನು ಮುಸ್ಲಿಮರು ಸೋಮವಾರ ಮಳೆಯ ಹಿನ್ನೆಲೆ ಈದ್ಗಾ ಮೈದಾನದಲ್ಲಿ ನಡೆಸದೇ ವಿವಿಧ ಮಸೀದಿಗಳಲ್ಲಿ ಶ್ರದ್ಧಾ- ಭಕ್ತಿಯಿಂದ ನೆರವೇರಿಸಿದರು.

ಜಾಮೀಯಾ ಮಸೀದಿಯಲ್ಲಿ (ಚಿನ್ನದ ಪಳ್ಳಿ) ಈದುಲ್ ಅದ್ಹಾ(ಬಕ್ರೀದ್ ಹಬ್ಬ) ಪ್ರಯುಕ್ತ ಮೌಲಾನಾ ಅಬ್ದುಲ್ ಅಲೀಮ್ ಖತೀಬ್ ನದ್ವಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಈದ್ ಸಂದೇಶ ನೀಡಿದ ಅವರು ತ್ಯಾಗ ಮಾಡುವುದು ಹೊಸ ಪದ್ಧತಿಯಲ್ಲ. ಪ್ರತಿಯೊಂದು ಧರ್ಮಕ್ಕೂ ಕೆಲವು ರೀತಿಯ ತ್ಯಾಗವಿದೆ. ಆದರೆ ಅಲ್ಲಾಹನನ್ನು ಒಲಿಸಿಕೊಳ್ಳುವುದು, ವಿಪತ್ತುಗಳನ್ನು ನಿವಾರಿಸುವುದು, ವಿಪತ್ತುಗಳನ್ನು ತಪ್ಪಿಸುವುದು ಇತ್ಯಾದಿ ಹೆಸರಿನಲ್ಲಿ ತ್ಯಾಗದ ಕ್ರಿಯೆ ಕಂಡುಬರುತ್ತದೆ. ಇಸ್ಲಾಂ ನಿಜವಾಗಿಯೂ ತ್ಯಾಗಕ್ಕೆ ಸರಿಯಾದ ನಿರ್ದೇಶನವನ್ನು ನೀಡಿದೆ ಎಂದರು.ಖಲಿಫಾಜಾಮಿಯಾ ಮಸೀದಿಯಲ್ಲಿ (ಗುರುಗಳ ಪಳ್ಳಿ)ಮೌಲಾನಾ ಕ್ವಾಜಾ ಅಕ್ರಮಿ ಮದನಿ, ನವಾಯತ್ ಕಾಲನಿಯ ತಂಝೀಂ ಮಿಲಿಯಾ ಮಸೀದಿಯಲ್ಲಿ ಮೌಲಾನಾ ಅನ್ಸಾರ್ ಕತೀಬ್ ಮದನಿ, ಮದೀನಾ ಜಾಮೀಯಾ ಮಸೀದಿಯಲಿ ಮೌಲಾನಾ ಝಕ್ರಿಯಾ ನದ್ವಿ, ನೂರ್ ಜಾಮೀಯಾ ಮಸೀದಿಯಲ್ಲಿ ಮೌಲಾನಾ ಮೊಹ್ಮದ್ ಅಮೀನ್ ರುಕ್ನುದ್ದೀನ್ ನದ್ವಿ, ಮುಗ್ದಂ ಕಾಲನಿ ಜಾಮೀಯಾ ಮಸೀದಿಯಲ್ಲಿ ಮೌಲಾನಾ ನಹಿಮುಲ್ಲಾ ಆಸ್ಕರಿ ನದ್ವಿ, ನೂರ್ ಮಸ್ಜೀದ್ ನಲ್ಲಿ ಮೌಲಾನಾ ಅಬ್ದುಲ್ ನೂರ್ ಪಕರ್ದೆ ನದ್ವಿ, ಹುರಳಿಸಾಲಿನ ಮಸ್ಜೀದ್ ಅಹ್ಮದ್ ಸಯಿದ್ ಮಸ್ಜೀದನಲ್ಲಿ ಮೌಲಾನಾ ಜಾಫರ್ ಪಕ್ಕಿ ಬಾವ್ ನದ್ವಿ, ಮಸ್ಜೀದ್ ಹಮ್ಝಾದಲ್ಲಿ ಮೌಲಾನಾ ಇಕ್ಬಾಲ್ ನಾಯ್ತೆ ನದ್ವಿ, ಮಸ್ಜೀದ್ ಬಿಲಾಲ್ ನಲ್ಲಿ ಮೌಲಾನಾ ಅಬ್ದುಲ್ ವಾಸಿ ಈದ್ ವಿಶೇಷ ಪ್ರಾರ್ಥನೆ ನೆರವೇರಿಸಿ ಬಕ್ರೀದ್ ಹಬ್ಬದ ಮಹತ್ವ ಮತ್ತು ಸಂದೇಶ ನೀಡಿದರು.

ಪಟ್ಟಣದ ವಿವಿಧ ಮಸೀದಿಗಳು, ಹೆಬಳೆ, ಶಿರಾಲಿ, ಮುರ್ಡೇಶ್ವರದ ಮಸೀದಿಯಲ್ಲೂ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಮರು ಸೋಮವಾರ ಬೆಳಗ್ಗೆ ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಕ್ರೀದ್ ಹಬ್ಬವನ್ನು ಮುಸ್ಲಿಮರು ಮೂರೂವರೆ ದಿನ ಆಚರಿಸಲಿದ್ದಾರೆ. ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದ್ದು, ಹೊರ ತಾಲೂಕಿನಿಂದಲೂ ಪೊಲೀಸರು ಆಗಮಿಸಿ ಬಂದೋಬಸ್ತನಲ್ಲಿದ್ದರು.