ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಮಹೋತ್ಸವ ಅರ್ಥಪೂರ್ಣವಾಗಿ ಆಚರಿಸಬೇಕು. ಯುವ ದಸರಾ ದೊಂಬಿ ಆಗಬಾರದು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಗರದ ಹಾರ್ಡಿಂಗ್ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿದರು.ಈ ವೇಳೆ ವಾಟಾಳ್ ನಾಗರಾಜ್ ಮಾತನಾಡಿ, ಓರ್ವ ಮಹಿಳೆ ದಸರಾ ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಇತ್ತೀಚಿನ ವಿದ್ಯಮಾನಗಳು ನೋಡಿದರೆ ನನಗೆ ನೋವಾಗುತ್ತದೆ. ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡವುದಕ್ಕೆ ನಾನು ಸ್ವಾಗತಿಸುತ್ತೇನೆ ಎಂದರು.
ದಸರಾ ಉದ್ಘಾಟನೆ ಮಾಡುತ್ತಿರುವುದು ಓರ್ವ ಮಹಿಳೆ ಎಂಬ ಕಾರಣಕ್ಕಾಗಿ ಸುಮಾರು ಒಂದೂವರೆ ತಿಂಗಳಿಂದ ದಾಳಿ ಮಾಡುತ್ತಿದ್ದಾರೆ. ಹಿಂಸೆ ದಬ್ಬಾಳಿಕೆ ನಡೆಯುತ್ತಿದೆ. ಅವರೇ ಉದ್ಘಾಟನೆ ಮಾಡಲಿ ದಸರಾ ಉದ್ಘಾಟನೆ ಇದರಿಂದಾಗಿ ತಪ್ಪೇನಿದೆ ಎಂದು ಪ್ರಶ್ನಿಸಿದರು.ಕನ್ನಡದ ಬಾವುಟದ ಬಗ್ಗೆ ಅವರಿಗೆ ಖಂಡಿತವಾಗಿಯೂ ಗೊತ್ತಿಲ್ಲ. ಗೊತ್ತಿದ್ದರೆ ಮಾತನಾಡುತ್ತಿರಲಿಲ್ಲ. ಕನ್ನಡ ಬಾವುಟಕ್ಕೆ ಅನ್ಯಾಯ ಆಗುತ್ತಿದೆ ಎಂದು ಬಿಜೆಪಿ , ಆರ್ ಎಸ್‌ಎಸ್ ನವರು ಹೇಳುತ್ತಾರೆ. ಬಿಜೆಪಿ, ಆರ್‌ಎಸ್ಎಸ್ ನವರು ಯಾವತ್ತಾದರೂ ಕನ್ನಡಕ್ಕಾಗಿ ಹೋರಾಟ ಮಾಡಿದ್ದಾರಾ? ಜೈಲಿಗೆ ಹೋಗಿದ್ದಾರಾ? ಇಡೀ ರಾಜ್ಯದಲ್ಲಿ ಹಿಂದಿ ಬೇಡವೇ ಬೇಡ ಎಂದು ಮಾತನಾಡಲಿ. ಇವರೇನು ಕನ್ನಡವನ್ನು ಉದ್ದಾರ ಮಾಡುತ್ತಾರಾ ಎಂದು ಕಿಡಿಕಾರಿದರು.
ಮೈಸೂರು ದಸರಾ ಐತಿಹಾಸಿಕ ಶಕ್ತಿ ಇದೆ. ಜನಸಾಮಾನ್ಯರ ದಸರಾ ಆಗಬೇಕು. ಸರ್ಕಾರದ ದರ್ಬಾರ್ ಆಗಬಾರದು. ಪಕ್ಷದ ದಸರಾ ಆಗಬಾರದು, ರೈತರು, ಕನ್ನಡ ಪರ ಹೋರಾಟಗಾರರು ಎಲ್ಲಾ ಪಕ್ಷದ ಸದಸ್ಯರು ಸಮಿತಿಯಲ್ಲಿ ಇರಬೇಕು ಎಂದು ಅವರು ಒತ್ತಾಯಿಸಿದರು.ಯುವ ದಸರಾ ಬಹಳ ಗಂಭೀರವಾಗಿರಬೇಕು. ಕಲಾವಿದರು ನೂರಕ್ಕೆ ನೂರರಷ್ಟು ಕನ್ನಡಿಗರು ಇರಬೇಕು. ಕಾರ್ಯಕ್ರಮದಲ್ಲಿ ಪರಭಾಷೆಯವರ ದರ್ಬಾರ್ ಆಗಿದೆ. ಚಾಮರಾಜನಗರವನ್ನು ದಸರಾದಿಂದ ಕೈ ಬಿಟ್ಟಿದ್ದಾರೆ. ಚಾಮರಾಜನಗರ ಮೈಸೂರು ಒಟ್ಟಿಗೆ ಇತ್ತು. ಅರಮನೆಗೂ ಚಾಮರಾಜನಗರಕ್ಕೂ ಸಂಬಂಧ ಇದೆ. ಅದ್ಬುತವಾದ ಗಡಿ ಜಿಲ್ಲೆ ಅಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು ಎಂದು ಅವರು ಆಗ್ರಹಿಸಿದರು.
ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಪಾರ್ಥಸಾರಥಿ ಮೊದಲಾದವರು ಇದ್ದರು.