ಸಾರಾಂಶ
ಗದಗ: ಜಿಲ್ಲೆ ಕೋಮು ಸೌಹಾರ್ದತೆ ಹಾಗೂ ಶಾಂತಿ ಸಂಯಮಕ್ಕೆ ಹೆಸರುವಾಸಿಯಾಗಿದ್ದು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸೋಣ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ನಗರದ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗಣೇಶ ಕೂಡಿಸುವ ಸಂಘ ಸಂಸ್ಥೆಗಳು ಹಾಗೂ ಮಂಡಳಿಗಳು ಕಾನೂನು ಸುವ್ಯವಸ್ಥೆ ಪಾಲಿಸಿ,ಗಣಪತಿ ಕೂಡಿಸಲು ಬೇಕಾದ ವಿವಿಧ ಇಲಾಖೆಗಳ ಅನುಮತಿ ಒಂದೇ ಸ್ಥಳದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸರಳೀಕರಣಗೋಳಿಸಲು ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುವುದು. ಗದಗ ನಗರದ ಟೌನ್ ಪೊಲೀಸ್ ಠಾಣೆಯಲ್ಲಿ ಸೆ.1 ರಿಂದ ಗಣೇಶ ಆಚರಣೆ ಕುರಿತಂತೆ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು ಎಂದರು.
ಪ್ರತಿ ವರ್ಷ ಗಣೇಶ ಹಬ್ಬ ವಿಜೃಂಭಣೆಯಿಂದ ಆಚರಿಸಿ, ಅಷ್ಟೇ ಸಂಭ್ರಮದಿಂದ ಗಣೇಶ ವಿಸರ್ಜನೆ ಮಾಡಲಾಗುತ್ತಿದೆ. ಪ್ರತಿ ಬಡಾವಣೆಗಳಲ್ಲಿ ಗಣೇಶ ವಿಸರ್ಜನೆ ಒಂದೊಂದು ದಿನ ಮಾಡುವುದರಿಂದ ಕಾನೂನು ಸುವ್ಯವಸ್ಥಿತ ಹಾಗೂ ಭದ್ರತೆ ಒದಗಿಸುವುದು ಕಷ್ಟ ಸಾಧ್ಯ. ಆದ್ದರಿಂದ ಈ ವರ್ಷ ಗಣೇಶ ವಿಸರ್ಜನೆಯನ್ನು 9ನೇ ದಿನದಂದು ಎಲ್ಲರೂ ಸೇರಿ ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ವಿಸರ್ಜನೆ ಕಾರ್ಯ ಪೂರ್ಣಗೊಳಿಸುವಂತೆ ತಿಳಿಸಿದರು.ಗಣೇಶ ವಿಸರ್ಜನೆಯನ್ನು 9ನೇ ದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯೊಳಗಾಗಿ ಶಾಂತಿಯುವಾಗಿ ಪೂರ್ಣಗೊಳಿಸಬೇಕು, ಅದಕ್ಕೆ ದೊಡ್ಡ ಗಾತ್ರದ ಗಣೇಶ ವಿಸರ್ಜನೆಗೆ ಅಗತ್ಯವಿರುವ ಕ್ರೇನ್ ವ್ಯವಸ್ಥೆ ಒದಗಿಸಲಾಗುವುದು, ವಿಸರ್ಜನೆ ದಿನ ಕೆರೆ ಹಳ್ಳ ನದಿ ಹತ್ತಿರ ಸಾರ್ವಜನಿಕರು ಎಚ್ಚರಿಕೆಯಿಂದ ವಿಸರ್ಜನೆಗೆ ಮುಂದಾಗಬೇಕು. ಗಣೇಶ ವಿಸರ್ಜನೆಯ ಮೆರವಣಿಗೆ ಮಾರ್ಗ ಮೊದಲೇ ನಿಗದಿಪಡಿಸಿ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ಒದಗಿಸಬೇಕು. ಯಾವುದೇ ಕಾರಣಕ್ಕೂ ನಿಗದಿಪಡಿಸಿದ ಮೆರವಣಿಗೆ ಮಾರ್ಗ ಬದಲಾಯಿಸ ಕೂಡದು ಎಂದರು.
ಸಭೆಯಲ್ಲಿ ಜಿಪಂ ಸಿಇಒ ಭರತ್ ಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ಸಂಕದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ: ರಾಸಾಯನಿಕ ಬಣ್ಣಗಳಿಂದ ಕೂಡಿದ ಹಾಗೂ ಪಿಒಪಿಯಿಂದ ತಯಾರಿಸಿದ ಗಣಪತಿಗಳ ಪ್ರತಿಷ್ಠಾಪನೆ ಮಾಡದೇ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾನೆಗೆ ಗಣೇಶೋತ್ಸವ ಸಮಿತಿಗಳು ಮುಂದಾಗಬೇಕು.
ಈ ಮೂಲಕ ನಮ್ಮ ಸುತ್ತಲಿನ ಪರಿಸರದ ಸಂರಕ್ಷಣೆಗೆ ಆದ್ಯತೆ ನೀಡಿದಂತಾಗುತ್ತದೆ. ನೈಸರ್ಗಿಕವಾಗಿ ತಯಾರಿಸಿದ ಮಣ್ಣಿನ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಾರ್ವಜನಿಕರು ಮುಂದಾಗಬೇಕು.ಗಣೇಶ ಹಬ್ಬದ ಪ್ರಯುಕ್ತ ಹಾಗೂ ವಿಸರ್ಜನೆ ದಿನಗಳಂದು ಮದ್ಯ ಮಾರಾಟ ನಿಷೇಧಿಸುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
ಸೌಹಾರ್ದಯುತ ಹಬ್ಬದ ಆಚರಣೆಗೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ.ಸರ್ಕಾರದ ನಿಯಮ ಹಾಗೂ ಮಾರ್ಗಸೂಚಿಗಳನ್ವಯ ಗಣೇಶ ಚತುರ್ಥಿ ಆಚರಣೆಗೆ ಮುಂದಾಗೋಣ. ನಿಗದಿಪಡಿಸಿದ ಧ್ವನಿವರ್ಧಕ ಬಳಕೆ ಮಾಡಿ ಶಬ್ದ ಮಾಲಿನ್ಯ ತಪ್ಪಿಸೋಣ. ಗಣೇಶೊತ್ಸವ ಸಮಿತಿಗಳು ಸ್ವಯಂ ಕಾರ್ಯಕರ್ತರನ್ನು ನೇಮಕ ಮಾಡುವ ಮೂಲಕ ಶಾಂತಿಯುತ ಆಚರಣೆಗೆ ಗದಗ ಜಿಲ್ಲೆ ಮತ್ತೋಮ್ಮೆ ಉದಾಹರಣೆಯಾಗಲಿ ಎಂದು ಎಸ್ಪಿ ಬಿ.ಎಸ್. ನೇಮಗೌಡ ಹೇಳಿದರು.