ಸಾರಾಂಶ
ರಾಣಿಬೆನ್ನೂರು: ವೈಯಕ್ತಿಕ ಪ್ರತಿಷ್ಠೆಗಿಂತ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಗಣೇಶ ಹಬ್ಬ ಆಚರಿಸಿ ಎಂದು ಎಸ್‌ಪಿ ಯಶೋದಾ ವಂಟಗೋಡಿ ತಿಳಿಸಿದರು.ನಗರದ ರೈಲ್ವೆ ಸ್ಟೇಷನ್ ವರ್ತಕರ ಸಂಘ ಕಲ್ಯಾಣಮಂಟಪದಲ್ಲಿ ಮಂಗಳವಾರ ಸಂಜೆ ಪೊಲೀಸ್ ಉಪವಿಭಾಗದ ವ್ಯಾಪ್ತಿಯ ವತಿಯಿಂದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಪ್ರಿಂಕೋರ್ಟ್ ನಿರ್ದೇಶನ ಮೇರೆಗೆ ಡಿಜೆಗೆ ನಿಯಮಗಳನ್ನು ರೂಪಿಸಿಲಾಗಿದೆ. ಡಿಜೆಯಿಂದ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಲಿದೆ.ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗದಲ್ಲಿ ಈಗಾಗಲೇ ಡಿಜೆ ಬ್ಯಾನ್ ಆಗಿದೆ. ಮೈಸೂರು ದಸರಾದಲ್ಲಿ ಡಿಜೆ ಇರುವುದಿಲ್ಲ. ಆದರೂ ಅಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಮೆರವಣಿಗೆಗೆ ಸ್ಟೀಕರ್ ಹಚ್ಚಿಕೊಳ್ಳಿ, ಕಲಾವಿದರನ್ನು ಕರೆಯಿಸಿ. ನಮ್ಮ ಪರಂಪರೆ ಉಳಿಸಿ ಬೆಳೆಸಿ, ಪಾಶ್ಚಿಮಾತ್ಯ ಆಡಂಬರ ಬೇಡ. ಈ ಬಾರಿ ಮಳೆಗಾಲ ಇರುವುದರಿಂದ ಸುರಕ್ಷಿತವಾಗಿ ಗಣೇಶ ವಿಸರ್ಜನೆ ಮಾಡಬೇಕು. ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆಗಳನ್ನು ಗಣೇಶ ಸಮಿತಿ ಮಾಡಬೇಕು. ಒಟ್ಟಾರೆ ಸರ್ಕಾರದ ನಿಯಮಾವಳಿಯಂತೆ ಹಬ್ಬ ಆಚರಿಸಬೇಕು ಎಂದರು. ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ರಾಜ್ಯದಲ್ಲಿ ಸುರಕ್ಷತೆ ದೃಷ್ಟಿಯಿಂದ ಕೆಲವೊಂದು ನಿಯಮಗಳು ಅನಿವಾರ್ಯವಾಗಿವೆ. ಯುವಕರು ಜವಾಬ್ದಾರಿ ನಾಗರಿಕರಾಗಿ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಸಹಕರಿಸಬೇಕು ಎಂದರು.ನಗರಸಭೆ ಸದಸ್ಯ ಪ್ರಕಾಶ ಪೂಜಾರ ಮಾತನಾಡಿ, 15- 20 ದಿನ ಎನ್ನದೆ ಎಲ್ಲ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಚಿತ್ರದುರ್ಗ, ಅರಸೀಕೆರೆ ರೀತಿಯಲ್ಲಿ ಎಲ್ಲರೂ ಒಂದೇ ದಿನ ವಿಸರ್ಜನೆ ಮಾಡಿದರೆ ಒಳ್ಳೆಯದು ಎಂದರು. ಜಿಲ್ಲಾ ಪರಿಸರ ಸಂರಕ್ಷಣಾಧಿಕಾರಿ ಲೋಹಿತಕುಮಾರ ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿ ಲೋಕೇಶ, ಸಿಪಿಐ ಶಂಕರ್, ಪ್ರವೀಣ, ಪಿಎಸ್‌ಐ ಗಡ್ಡೆಪ್ಪ ಗುಂಜಟಗಿ, ನಗರಸಭೆ ಉಪಾಧ್ಯಕ್ಷ ನಾಗರಾಜ ಪವಾರ, ಪರಿಸರ ಅಭಿಯಂತರ ಮಹೇಶ ಕೋಡಬಾಳ ವೇದಿಕೆಯಲ್ಲಿದ್ದರು. ಪ್ರಭುಸ್ವಾಮಿ ಕರ್ಜಗಿಮಠ, ರಾಮಣ್ಣ ನಾಯಕ, ರಾಮಣ್ಣ ನಾಯಕ, ಪ್ರಭುಸ್ವಾಮಿ ಕರ್ಜಗಿಮಠ, ನಾಗರಾಜ ಸಾಲಗೇರಿ, ವೀರೇಶ ಹೆದ್ದೇರಿ, ರಾಯಣ್ಣ ಮಾಕನೂರ, ಶೇರುಖಾನ್ ಕಾಬೂಲಿ, ಲಿಂಗರಾಜ ಬೂದನೂರ, ಜಗದೀಶ ಎಲಿಗಾರ, ಅಜಯ್ ಮಠದ ಮತ್ತಿತರರಿದ್ದರು.