ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಹಿರಿಯ ನಾಗರಿಕ ದಿನವಾಗಿ ಜುಲೈ 1 ಅನ್ನು ಆಚರಿಸುವಂತೆ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿಶ್ಚಲಾನಂದ ಸ್ವಾಮೀಜಿ ಹೇಳಿದರು.ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಡಾಮಡಹಳ್ಳಿ ಡಿ.ಎನ್.ಸ್ವಾಮಿಗೌಡರ ಹಿತೈಷಿ ಬಳಗದಿಂದ ನಡೆದ ಹಿರಿಯ ನಾಗರೀಕರ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಹಿರಿಯರನ್ನು ಗೌರವದಿಂದ ಕಾಣಬೇಕು. ಯಾರ ಮನೆಯಲ್ಲಿ ಹಿರಿಯರು ಇರುತ್ತಾರೆಯೋ ಅವರ ಮನೆ ಮತ್ತು ಮನಸ್ಸು ಸಂತಸದಿಂದಿರುತ್ತದೆ. ಜುಲೈ 1ರ ದಿನ ಹಿರಿಯರ ದಿನವಾಗಿ ಇಂದಿನಿಂದಲೇ ಮುಂದುವರೆಯಲಿ ಎಂದರು.
ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಸ್ವಾಮಿಗೌಡರು ರೆಡ್ ಕ್ರಾಸ್, ಲಯನ್ಸ್ ಸಂಸ್ಥೆ ಇತರೆ ಸಂಘ-ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ಸರಳ ವ್ಯಕ್ತಿತ್ವ ಹೊಂದಿದ್ದಾರೆ ಎಂದರು.ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್ ಗೌಡ ಮಾತನಾಡಿ, ಸೇವೆಗಳನ್ನು ಯಾವ ರೂಪದಲ್ಲೂ ಬೇಕಾದರೂ ಮಾಡಬಹುದು. ಸ್ವಾಮಿಗೌಡರ ಸಾಮಾಜಿಕ ಸೇವೆ ಶ್ಲಾಘನೀಯ ಎಂದರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಮಾತನಾಡಿ, ನಾನು ಎಂಎಲ್ ಸಿ ಚುನಾವಣೆಗೆ ಸ್ಪರ್ಧಿಸಿದಾಗ ಸ್ವಾಮಿಗೌಡರು ಸೈಕಲ್ ತುಳಿದುಕೊಂಡು ನನ್ನ ಪರ ಪ್ರಚಾರ ಮಾಡಿದ್ದರು. 1994ರಲ್ಲಿ ಆಡಳಿತ ಸರ್ಕಾರದ ಶಾಸಕನಾಗಿದ್ದರೂ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರೊಡಗೂಡಿ ಹಲವು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದೆ ಎಂದು ಸ್ಮರಿಸಿಕೊಂಡರು.ಕಸಾಪ ಭವನದ ಮೇಲಂತ್ತಸ್ಥಿನ ಕಟ್ಟಡ ನಿರ್ಮಾಣಕ್ಕೆ ಮನವಿ ಮಾಡಿದಾಗ ಕಟ್ಟಡ ನಿರ್ಮಾಣಕ್ಕೆ ಸ್ವತಃ 55 ಸಾವಿರಗಳನ್ನು ನೀಡುತ್ತೇನೆ ಎಂದು ಜಿಬಿಎಸ್ ತಿಳಿಸಿದರು. ಇವರೊಂದಿಗೆ ಎಲ್ಲರೂ ಭಾಗಿ 500, ಸಾವಿರ, 5, 10 ಸಾವಿರ ರು.ಗಳಂತೆ ದಾನದ ರೂಪದಲ್ಲಿ 1.60ಲಕ್ಷ ರುಗಳನ್ನು ಸ್ವಾಮೀಜಿಗಳ ಸಮ್ಮುಖದಲ್ಲೇ ದಾನ ನೀಡಿದರು. ಡಾ.ಜೆಪಿ 25 ಸಾವಿರ ಬೆಲೆಬಾಳುವ ಸಿಮೆಂಟ್ ಕೊಡಿಸುತ್ತೇನೆ ಎಂದರು. ಶ್ರೀಪುರುಷೋತ್ತಮನಂದನಾಥ ಸ್ವಾಮೀಜಿ 50ಸಾವಿರ ರು. ಸಹಾಯ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ ತತ್ವಪದ ಹಾಡುವ ಮೂಲಕ ಹಳೇಬೀಡಿನ ಶಂಕರಪ್ಪ ಸ್ವಾಮೀಜಿಯವರು ಸ್ವಾಮಿಗೌಡರನ್ನು ಅಭಿನಂದಿಸಿದರು. ಶತಾಯುಷಿ ಹಿರಿಯ ನಾಗರಿಕರನ್ನು ಅಭಿನಂದಿಸಲಾಯಿತು. ಡಾಮಡಹಳ್ಳಿ ಸ್ವಾಮಿಗೌಡ ಮತ್ತು ದಂಪತಿ ಶ್ರೀಗಳ ಆಶೀರ್ವಾದ ಪಡೆದರು. ಕಲೆ, ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳ ವೇದಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಜನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್, ಹಿರಿಯ ವೈದ್ಯ ಡಾ.ಎಂ.ಮಾಯಿಗೌಡ, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ, ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಬಿ.ನಾರಾಯಣಗೌಡ, ಎಸ್.ನಾಗರಾಜು, ಕಸಾಪ ಅಧ್ಯಕ್ಷ ಮೇಣಾಗ್ರ ಪ್ರಕಾಶ್, ಮಾಜಿ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಡೇರಿ ಹುಚ್ಚೇಗೌಡ, ಎಸ್.ಲಕ್ಷ್ಮೇಗೌಡ, ಯುವ ಸಾಹಿತಿ ಎಚ್.ಸಿ.ಧನಂಜಯ ಇತರರಿದ್ದರು.