ಮಹಾಪುರುಷರ ಜಯಂತಿ ಎಲ್ಲರೂ ಆಚರಿಸಿ

| Published : May 15 2024, 01:35 AM IST

ಸಾರಾಂಶ

ಮಹಾಪುರುಷರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೇ ಅವರ ಜಯಂತಿ ಕಾರ್ಯಕ್ರಮಗಳಲ್ಲಿ ಎಲ್ಲಾ ಸಮುದಾಯದ ಜನರು ಭಾಗವಹಿಸಿ ಆಚರಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಹಾಪುರುಷರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೇ ಅವರ ಜಯಂತಿ ಕಾರ್ಯಕ್ರಮಗಳಲ್ಲಿ ಎಲ್ಲಾ ಸಮುದಾಯದ ಜನರು ಭಾಗವಹಿಸಿ ಆಚರಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಸಲಹೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತಿ ಆಚರಣೆಯ ಸರಳ ಕಾರ್ಯಕ್ರಮ ಉದ್ಘಾಟಿಸಿ, ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಎಲ್ಲ ಸಮುದಾಯಗಳಲ್ಲೂ ಆದರ್ಶ ಪುರುಷರಿದ್ದು ಅವರ ಜಯಂತಿಗಳನ್ನು ಅದೇ ಸಮುದಾಯದವರು ಆಚರಣೆ ಮಾಡುವರು. ಭಗೀರಥ ಮಹರ್ಷಿ ಕಠಿಣ ತಪಸ್ಸು ಆಚರಿಸಿ ಗಂಗೆಯನ್ನು ಧರೆಗೆ ಇಳಿಸಿದ ವಿಚಾರ ರೋಚಕವಾಗಿದೆ. ಉಪ್ಪಾರ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.

ಎಡಿಸಿ ಗೀತಾ ಹುಡೇದ ಮಾತನಾಡಿ, ರಾಮಾಯಣ, ಮಹಾಭಾರತದಲ್ಲಿ ಮಹರ್ಷಿಗಳ ಉಲ್ಲೇಖವಿದೆ. ಭಗೀರಥ ಮಹರ್ಷಿ ತಮ್ಮ ಪೂರ್ವಜರ ಮುಕ್ತಿಗಾಗಿ ಗಂಗೆಯನ್ನು ಧರೆಗೆ ಇಳಿಸಿದರು. ಇವರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಠಿಣ ಕೆಲಸಗಳಿಗೆ ಹೆಸರುವಾಸಿಯಾಗಿರುವ ಭಗೀರಥರು ಇಂದಿನ ಯುವಜನತೆಗೆ ಮಾದರಿಯಾಗಿದ್ದಾರೆ ಎಂದರು. ಶಿಕ್ಷಕ ಗೋವಿಂದರಾಜು ಮಾತನಾಡಿದರು. ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ಶಿವಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್. ಚಿದಂಬರ, ಸಮುದಾಯದ ಮುಖಂಡರು ಇತರರು ಹಾಜರಿದ್ದರು.