ಪರಸ್ಪರ ಪ್ರೀತಿ, ವಿಶ್ವಾಸದಿಂದ ಧರ್ಮಗಳ ಹಬ್ಬ ಆಚರಿಸಿ

| Published : Aug 30 2024, 01:05 AM IST

ಸಾರಾಂಶ

ಹೊನ್ನಾಳಿ ಪಟ್ಟಣದ ಗುರುಭವನದಲ್ಲಿ ಗುರುವಾರ ತಾಲೂಕು ಆಡಳಿತ, ಪುರಸಭೆ, ಪೊಲೀಸ್ ಇಲಾಖೆ ವತಿಯಿಂದ ನಡೆದ ನಾಗರೀಕ ಸೌಹಾರ್ದ ಸಭೆಯಲ್ಲಿ ಪೊಲೀಸ್ ಇನ್ಸೆಪೆಕ್ಟರ್ ಸುನಿಲ್ ಕುಮಾರ್ ಪೊಲೀಸ್ ಮಾರ್ಗಸೂಚಿಗಳನ್ನು ವಿವರಿಸಿದರು.

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಯಾವುದೇ ಧರ್ಮಗಳ ಹಬ್ಬ, ಆಚರಣೆಗಳ ಉದ್ದೇಶ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಹ ಬಾಳ್ವೆ ನಡೆಸುವುದಾಗಿದೆ ಎಂದು ತಹಸೀಲ್ದಾರ್ ಪಟ್ಟರಾಜ ಗೌಡ ಹೇಳಿದರು.

ಗುರುವಾರ ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆವತಿಯಿಂದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನಲೆಯಲ್ಲಿ ನಡೆದ ನಾಗರೀಕ ಸೌಹಾರ್ಧ ಸಭೆ ಉದ್ದೇಶಿಸಿ ಮಾತನಾಡಿದರು.

ಜೀವನದಲ್ಲಿ ನಾವು ಮಾಡುವ ಕೆಲಸಗಳಲ್ಲಿ ವಿಘ್ನಗಳು ಬಾರದಿರಲಿ ಎಂದು ಹಿಂದುಗಳು ಗಣೇಶನನ್ನು ಪೂಜಿಸಿದರೆ ಮಾನವರಾದ ನಾವೆಲ್ಲರೂ ಕೂಡ ಒಂದಾಗಿ ಸೌಹಾರ್ದಯುತವಾಗಿ ಬದುಕಬೇಕು ಎನ್ನುವ ಅರ್ಥದಲ್ಲಿ ಮುಸ್ಲಿಂ ಬಾಂಧವರು ಈದ್- ಮಿಲಾದ್ ಹಬ್ಬ ಆಚರಿಸುತ್ತಾರೆ. ಹೊನ್ನಾಳಿ ಇತಿಹಾಸದಲ್ಲೇ ಇಲ್ಲಿಯವರೆಗೆ ಹಬ್ಬ ಇತರೆ ಆಚರಣೆಗಳು ಅತ್ಯಂತ ಶಾಂತಿಯುತವಾಗಿ ನಡೆಯುವ ಮೂಲಕ ಶಾಂತಿಯ ನೆಲೆಬೀಡು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಎಲ್ಲರೂ ತಾಲೂಕು ಅಡಳಿತ, ಪುರಸಭೆ, ಬೆಸ್ಕಾಂ ಹಾಗೂ ಪೊಲೀಸ್ ಇಲಾಖೆಗಳ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸುರಕ್ಷಿತ ಮತ್ತು ಸಂಭ್ರಮದ ಹಬ್ಬ ಅಚರಿಸೋಣ ಎಂದು ಹೇಳಿದರು.

ಬೆಸ್ಕಾಂ ಎ.ಇ.ಇ. ಜಯಪ್ಪ ಮಾತನಾಡಿ ಗಣೇಶ ಹಬ್ಬ ಆಚರಿಸುವ ಸಮಿತಿಗಳು ಅಧಿಕೃತವಾಗಿ ಪೂರ್ವಾನುಮತಿ ಪಡೆದು ಅಧಿಕೃತ ವಿದ್ಯುತ್ ಕೆಲಸಗಾರರ ಮೂಲಕ ಪೆಂಡಾಲ್ ಗಳ ವಿದ್ಯುತ್ ಆಲಂಕಾರ ಮುಂತಾದ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಉತ್ತಮ ದರ್ಜೆಯ ವಿದ್ಯುತ್ ಪರಿಕರಗಳನ್ನು ಉಪಯೋಗಿಸಿ ಎಂದು ಸಲಹೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ಮಾತನಾಡಿ, ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಲಾಗಿದೆ ಇನ್ನು ಗಣಪತಿ ಮೂರ್ತಿಗಳ ವಿಸರ್ಜೆನೆಯನ್ನು ನೇರವಾಗಿ ನದಿಗೆ ಬಿಡದೇ ಪುರಸಭೆ ವತಿಯಿಂದ ನಿರ್ಮಿಸಲಾದ ಹೊಂಡದಲ್ಲಿಯೇ ಗಣೇಶ ವಿಸರ್ಜನೆ ಮಾಡಬೇಕು ಎಂದು ಹೇಳಿದರು.

ಸರ್ಕಲ್ ಇನ್ಸಪೆಕ್ಟರ್ ಸುನಿಲ್ ಕುಮಾರ್ ಮಾತನಾಡಿ, ಗಣೇಶ ಮೂರ್ತಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ಸಮಿತಿಯವರು ಅನುಮತಿ ಪಡೆಯಬೇಕಾಗಿದ್ದು ಇದಕ್ಕಾಗಿ ಎಕಗವಾಕ್ಷಿ ವ್ಯವಸ್ಥೆ ಮಾಡಲಾಗಿದ್ದು ಈ ಮೂಲಕ ಸಮಿತಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳ ಸಹಿಕ ಅಧಿಕೃತ ಫಾರಂಗಳನ್ನು ಭರ್ತಿ ಮಾಡಿ ಅನುಮತಿ ಪಡೆಯಬೇಕು ಎಂದ ಅವರು ಇತ್ತೀಚೆಗೆ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿದ್ದು ನೆರವಿಗೆ ಸಹಾಯವಾಣಿ 1930ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮುಖಂಡರಾದ ಎಂ.ಆರ್.ಮಹೇಶ್, ರಾಜು ಕಣಗಣ್ಣಾರ, ದಿಡಗೂರು ತಮ್ಮಣ್ಣ, ಸೂರಟೂರು ಹನುಮಂತಪ್ಪ, ಮಕ್ಬುಲ್ ಆಹಮ್ಮದ್ ವಿನಯ್ ವಗ್ಗರ್ ಮುಂತಾದವರು ಮಾತನಾಡಿ, ಹೊನ್ನಾಳಿಯಲ್ಲಿ ಹಿಂದು-ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮೀಯರು ಆತ್ಯಂತ ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ ಎಂದು ಹೇಳಿದರು. ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.