ಸರ್ಕಾರ, ಜಿಲ್ಲಾಡಳಿತ ಬರದ ನೆಪವೊಡ್ಡಿ ಇತಿಹಾಸವುಳ್ಳ ಚಾಮರಾಜನಗರ ದಸರಾ ಮಹೋತ್ಸವ ನಿಲ್ಲಿಸದೆ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಕಲಾವಿದರ ಬಳಗ, ಜಿಲ್ಲಾ ಯುವ ಕಲಾವಿದರ ಒಳಗ ಹಾಗೂ ಜಿಲ್ಲಾ ಕಲಾ ತಂಡಗಳು ನಗರದ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸರ್ಕಾರ, ಜಿಲ್ಲಾಡಳಿತ ಬರದ ನೆಪವೊಡ್ಡಿ ಇತಿಹಾಸವುಳ್ಳ ಚಾಮರಾಜನಗರ ದಸರಾ ಮಹೋತ್ಸವ ನಿಲ್ಲಿಸದೆ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಕಲಾವಿದರ ಬಳಗ, ಜಿಲ್ಲಾ ಯುವ ಕಲಾವಿದರ ಒಳಗ ಹಾಗೂ ಜಿಲ್ಲಾ ಕಲಾ ತಂಡಗಳು ನಗರದ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.ಚಾಮರಾಜನಗರ ದಸರಾ ಎಂದರೆ ಅದು ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ. ಅದು 550 ವರ್ಷಗಳ ಒಡೆಯರ್ ಪರಂಪರೆ, ಈ ಜಿಲ್ಲೆಯ ಅಸ್ತಿತ್ವ ಮತ್ತು ಅಸ್ಥಿತೆ. ಆದರೆ ಕಳೆದ ವರ್ಷ ಸರ್ಕಾರ ಯಾವುದೇ ಸ್ಪಷ್ಟ ಕಾರಣ ನೀಡದೆ ದಸರಾವನ್ನು ರದ್ದು ಮಾಡಿತ್ತು. ಈ ಬಾರಿ 2026ರಲ್ಲೂ ಬರದ ಘೋಷಣೆಯ ನೆಪವೊಡ್ಡಿ ದಸರಾ ತಡೆಗೆ ಚಿಂತನೆ ನಡೆಸಿರುವುದು ಸಾವಿರಾರು ಬಡ ಕಲಾವಿದರ ಎದೆಗೆ ಬರ ಸಿಡಿಲು ಬಡಿದಂತಾಗಿದೆ ಎಂದು ಕಲಾವಿದರು ಹೇಳಿದ್ದಾರೆ.
ಗಡಿ ಜಿಲ್ಲೆಯ ದಸರಾ ನಿಲ್ಲಿಸುವುದಾದರೆ, ಮೈಸೂರು ದಸರಾವನ್ನು ಮತ್ತು ಸದರಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆಯುತ್ತಿರುವ ದಸರಾವನ್ನು ಹಾಗೂ ಉತ್ಸವಗಳನ್ನು ಏಕೆ ಸರ್ಕಾರ ನಿಲ್ಲಿಸಬಾರದು? ಕರ್ನಾಟಕದಲ್ಲಿ ಎಲ್ಲಾ ಉತ್ಸವಗಳನ್ನು ಸಾಂಪ್ರದಾಯಿಕವಾಗಿ, ಸರ್ಕಾರ ಮಾಡಲಿ. ಎಲ್ಲಾ ಕಡೆ ನಡೆದರೆ ಚಾಮರಾಜನಗರದಲ್ಲೂ ನಡೆಯಲಿ. ಇಲ್ಲದಿದ್ದರೆ ಎಲ್ಲವೂ ನಿಲ್ಲಲಿ. ಒಂದೇ ಜಿಲ್ಲೆಗೆ ಮಲತಾಯಿ ಧೋರಣೆ ಏಕೆ? ಚಾಮರಾಜನಗರಕ್ಕೂ ದಸರಾಕ್ಕೂ ಇರುವ ನಂಟು ನಿನ್ನೆ ಮೊನ್ನೆಯದಲ್ಲ ಎಂದು ಹೇಳಿದರು.1610ರಲ್ಲಿ ಒಂದನೇ ರಾಜ ಒಡೆಯರ್ ಮೈಸೂರು ಮತ್ತು ಚಾಮರಾಜನಗರದ ಕೆಲವು ಗ್ರಾಮಗಳನ್ನು ಕೇಂದ್ರವನ್ನಾಗಿಸಿಕೊಂಡು ದಸರಾ ಆರಂಭಿಸಿದರು. 1638-1659ರಲ್ಲಿ ರಣಧೀರ ಕಂಠೀರವ ನರಸರಾಜ ಒಡೆಯರ್ ಇದೇ ತೆರಕಣಾಂಬಿಯನ್ನು ಕೇಂದ್ರವಾಗಿಸಿಕೊಂಡಿದ್ದರು. 1766ರಲ್ಲಿ ಚಾಮರಾಜನಗರದಲ್ಲಿ ಜನಿಸಿದ ಖಾಸಾ ಚಾಮರಾಜ ಒಡೆಯರ್ ಅವರ ನೆನಪಿಗಾಗಿಯೇ ಅರಿಕುಠಾರ ಎಂಬ ಊರು ಚಾಮರಾಜನಗರವಾಯಿತು ಎಂದರು.
ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಚಾಮರಾಜೇಶ್ವರ ದೇವಾಲಯಕ್ಕೆ 13 ಹಳ್ಳಿಗಳ ಆದಾಯ ದಾನ, 1936ರಲ್ಲಿ ರಾಜಗೋಪುರ ನಿರ್ಮಾಣ, 1922ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಂಜನಗೂಡು ಚಾಮರಾಜನಗರ ರೈಲು ಮಾರ್ಗ ನಿರ್ಮಾಣವಾಗಿ ಜನರು ಮೈಸೂರು ಅರಮನೆಗೆ ಹೋಗಿ ದಸರಾ ನೋಡುತ್ತಿದ್ದರು. ಮುಂದುವರೆದು ಇನ್ನೂ ಹಲವು ಇತಿಹಾಸಗಳು ಚಾಮರಾಜನಗರ ಮತ್ತು ಮೈಸೂರಿನ ರಾಜ ಮನೆತನದ ಆಳ್ವಿಕೆಯಕಾಲದ ಪರಂಪರೆಯ ಜೊತೆಗಿನ ಅವಿನಭಾವ ಸಂಬಂಧವಿದೆ ಎಂದು ಇತಿಹಾಸ ಮೆಲುಕು ಹಾಕಿದರು.1997ರಲ್ಲಿ ಜಿಲ್ಲೆಯಾದ ಮೇಲೆ 2007ರಲ್ಲಿ ಗ್ರಾಮೀಣ ದಸರಾ ಆರಂಭವಾಗಿ, 2013 ರಲ್ಲಿ ಚಾಮರಾಜನಗರ ದಸರಾ ಎಂದು ಅಧಿಕೃತವಾಗಿ ಮೆರೆಯಿತು. ಈ ಅವಧಿಯಲ್ಲಿ ದಿ. ಹೆಚ್.ಎಸ್. ಮಹದೇವಪ್ರಸಾದ್, ವಿ. ಶ್ರೀನಿವಾಸ್ ಪ್ರಸಾದ್ ಅವರ ಪ್ರಯತ್ನದಿಂದ ಜಿಲ್ಲೆಯ ಕಲಾವಿದರಿಗೆ ದೊಡ್ಡವೇದಿಕೆ ಸಿಕ್ಕಿತು. 2015ರ ಪ್ರವಾಹದ ಒಂದು ವರ್ಷ ಬಿಟ್ಟರೆ ನಿರಂತರವಾಗಿ ನಡೆದಿದೆ. ಆದರೆ 2025 ರಲ್ಲಿ ಸರ್ಕಾರ ಏಕಾಏಕಿ ಅನುದಾನ ನಿಲ್ಲಿಸಿ ದಸರಾ ರದ್ದು ಮಾಡಿತು. ಬರ ನೆಪ ಮಾಡಿಕೊಂಡು ದಸರಾ ನಿಲ್ಲಿಸದೆ ತಕ್ಷಣವೇ ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಕಲಾವಿದರನ್ನು ಪೋತ್ಸಾಹಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಕಲಾವಿದರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶಿವಶಂಕರ ಎನ್.ಚಟ್ಟು, ಶಿವಕುಮಾರ್ ಜನ್ನೂರು, ಕೃಷ್ಣಮೂರ್ತಿ ಚಂಗಚಹಳ್ಳಿ, ಶಿವಣ್ಣ ಹೊಸೂರು, ಗೌರಿಶಂಕರ್, ಕೃಷ್ಣಮೂರ್ತಿ ಚಂಚಹಳ್ಳಿ, ಆದರ್ಶ, ರಮೇಶ್, ಮನು, ಅವತಾರ್ ಪ್ರವೀಣ್, ಕೆಂಪರಾಜು, ಸುಶೀಲ, ಚಿನ್ನಮ್ಮ, ಹೊನ್ನಮ್ಮ, ಭಾಗ್ಯಮ್ಮ, ಸಿದ್ದಮ್ಮ, ದೊರೆರಾಜು, ರಮೇಶ್ ಪಾಪಯ್ಯ ನೂರಾರು ಜಾನಪದ ಕಲಾವಿದರು ಭಾಗವಹಿಸಿದ್ದರು.