ತಾಲೂಕಿನ ಹರ್ತಿ ಗ್ರಾಮದಲ್ಲಿ ಶುಕ್ರವಾರ ರೈತರೊಂದಿಗೆ ದೀಪಾವಳಿ ವಿಶೇಷ ಕಾರ್ಯಕ್ರಮ ಜರುಗಿತು. ಪುರಿ ಜಗನ್ನಾಥ ಕ್ಷೇತ್ರದ ಅರ್ಚಕರಿಂದ ವಿಶೇಷ ಹೋಮ, ಹವನ ನೆರವೇರಿತು.
ಪುರಿ ಜಗನ್ನಾಥ ಅರ್ಚಕರಿಂದ ಹೋಮ, ಹವನ
ಕನ್ನಡಪ್ರಭ ವಾರ್ತೆ ಗದಗತಾಲೂಕಿನ ಹರ್ತಿ ಗ್ರಾಮದಲ್ಲಿ ಶುಕ್ರವಾರ ರೈತರೊಂದಿಗೆ ದೀಪಾವಳಿ ವಿಶೇಷ ಕಾರ್ಯಕ್ರಮ ಜರುಗಿತು. ಪುರಿ ಜಗನ್ನಾಥ ಕ್ಷೇತ್ರದ ಅರ್ಚಕರಿಂದ ವಿಶೇಷ ಹೋಮ, ಹವನ ನೆರವೇರಿತು. ಸಾವಿರಕ್ಕೂ ಹೆಚ್ಚು ಮಹಿಳೆಯರು ಕುಂಭಗಳನ್ನು ಹೊತ್ತು ಭವ್ಯ ಮೆರವಣಿಗೆ ನಡೆಸಿದರು. ಕಾರ್ಯಕ್ರಮದಲ್ಲಿ ಕರಡಿ ಮಜಲು ಹಾಗೂ ಭಜನೆಗಳ ಸಾಂಪ್ರದಾಯಿಕ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕುಂಭ ಮೆರವಣಿಗೆಯಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿ ವಿಶೇಷ ಮೆರುಗು ತಂದರು. ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ಶ್ರದ್ಧೆ, ಸಂಭ್ರಮ ಮತ್ತು ಉತ್ಸಾಹದಿಂದ ಕುಂಭಗಳನ್ನು ಹೊತ್ತು ಸಾಗಿದರು.ಕಾರ್ಯಕ್ರಮ ಆಯೋಜಿಸಿದ್ದ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಗೋವು ಪೂಜೆ ನೆರವೇರಿಸುವ ಮೂಲಕ ರೈತರೊಂದಿಗೆ ದೀಪಾವಳಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದೆ. ರೈತರ ಬದುಕು ಹಾಗೂ ಕೃಷಿ ಚಟುವಟಿಕೆಗಳೊಂದಿಗೆ ಗೋವಿನ ನಂಟು ಅವಿನಾಭಾವವಾಗಿದೆ ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಗುತ್ತಿದೆ ಎಂದರು.
ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಸಂಭ್ರಮದ ಹಬ್ಬವಾಗಿದೆ. ದೇಶದ ಅನ್ನದಾತರಾದ ರೈತರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಅವರ ಪರಿಶ್ರಮ, ಕೊಡುಗೆ ಮತ್ತು ಕೃಷಿ ಬದುಕಿನ ಮಹತ್ವವನ್ನು ಗೌರವಿಸಲಾಗುತ್ತಿದೆ. ಬರಗಾಲ ದೂರ ಸರಿದು ಉತ್ತಮ ಮಳೆ ಬೆಳೆ ಆಗಲಿ ಎಂಬ ಆಶಯದೊಂದಿಗೆ ಹೋಮ, ಹವನ ಹಾಗೂ ಲಕ್ಷ್ಮಿ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಅವರ ಶ್ರಮದಿಂದಲೇ ಸಮಾಜದ ಪ್ರತಿಯೊಬ್ಬರಿಗೂ ಅನ್ನ ದೊರೆಯುತ್ತಿದೆ. ಆದ್ದರಿಂದ ರೈತರ ಬದುಕಿನಲ್ಲಿ ಸಂತಸ ಮತ್ತು ಸಮೃದ್ಧಿ ಮೂಡಬೇಕು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ನಯಾನಗರದ ಅಭಿನವ ಸಿದ್ಧಲಿಂಗ ಶ್ರೀಗಳು ಆಶೀರ್ವಚನ ನೀಡಿ, ರೈತ ಸಮುದಾಯದ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಹೆಚ್ಚಾಗಬೇಕು. ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಗ್ರಾಮೀಣ ಜೀವನದ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.ಈ ಸಂದರ್ಭ ಮೋಹನ ಮಾಳಶೆಟ್ಟಿ, ರಾಜು ಕುರಡಗಿ, ಸೋಮಣ್ಣ ಸೋಮರಡ್ಡಿ, ವಸಂತ ಪಡಗದ, ರಾಘವೇಂದ್ರ ಯಳವತ್ತಿ, ಮುತ್ತಣ್ಣ ಗದಗಿನ, ವಿನಾಯಕ ಮೊರಬದ, ರವಿಕಾಂತ ಅಂಗಡಿ ಸೇರಿದಂತೆ ಬಿಜೆಪಿ ಮುಖಂಡರು, ಗಣ್ಯರು ಹಾಗೂ ರೈತರು ಉಪಸ್ಥಿತರಿದ್ದರು.ಪ್ರಸಕ್ತ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದೆ. ಇದರಿಂದ ರೈತ ವರ್ಗದಲ್ಲಿ ಹುಮ್ಮಸ್ಸು ಕಳೆಗುಂದಿದೆ. ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂಬ ಉದ್ದೇಶದಿಂದ ವಿಶೇಷ ಹೋಮ, ಹವನ, ಲಕ್ಷ್ಮಿ ಪೂಜೆ ಮತ್ತು ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅನಿಲ ಮೆಣಸಿನಕಾಯಿ, ಬಿಜೆಪಿ ಮುಖಂಡ