ಚೆಲುವನಾರಾಯಣಸ್ವಾಮಿಗೆ ಗಜೇಂದ್ರಮೋಕ್ಷ ಉತ್ಸವದ ಸಂಭ್ರಮ

| Published : Jul 19 2025, 02:00 AM IST

ಸಾರಾಂಶ

ಶ್ರೀಕೃಷ್ಣರಾಜಮುಡಿ ಬ್ರಹ್ಮೋತ್ಸವದ ಪ್ರಯುಕ್ತ ಶನಿವಾರ ಬೆಳಗ್ಗೆ ಮಹಾರಥೋತ್ಸವ ಕೇವಲ ಉತ್ಸವವಾಗಿ ಸಾಂಕೇತಿಕವಾಗಿ ನಡೆಯಲಿದೆ. ಶನಿವಾರ ಯಾತ್ರಾದಾನ, ಪಾರಾಯಣ ನಡೆದು ರಥೋತ್ಸವದ ಎಲ್ಲಾ ಧಾರ್ಮಿಕ ವಿಧಾನಗಳು ನಡೆಯುತ್ತವೆಯಾದರೂ ರಥದ ಬದಲಿಗೆ ಉತ್ಸವ ನೆರವೇರಲಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಕೃಷ್ಣರಾಜಮುಡಿ ಬ್ರಹ್ಮೋತ್ಸವದ 6ನೇ ದಿನವಾದ ಶುಕ್ರವಾರ ಸಂಜೆ ಕೃಷ್ಣರಾಜಮುಡಿ ಕಿರೀಟದ ಅಲಂಕಾರದೊಂದಿಗೆ ಚೆಲುವನಾರಾಯಣಸ್ವಾಮಿಗೆ ಗಜೇಂದ್ರಮೋಕ್ಷ ಉತ್ಸವ ಸಡಗರ, ಸಂಭ್ರಮದಿಂದ ನೆರವೇರಿತು.

ಆನೆಯ ಭಕ್ತಿಕೂಗಿಗೆ ಮಹಾವಿಷ್ಣು ಗರುಡಾರೂಢನಾಗಿ ಧರೆಗಿಳಿದು ಗಜೇಂದ್ರನಿಗೆ ಮೊಸಳೆಯಿಂದ ಮೋಕ್ಷ ಕರುಣಿಸಿದ ಪ್ರತೀಕವಾಗಿ ಗಜೇಂದ್ರಮೋಕ್ಷ ಉತ್ಸವ ತಿರುವೀದಿಗಳಲ್ಲಿ ನಡೆಯಿತು.

ಗರುಡಾರೂಢನಾದ ಚೆಲುವನಾರಾಯಣಸ್ವಾಮಿಯ ದರ್ಶನ ಮಾತ್ರದಿಂದಲೇ ಸಕಲ ಸಂಕಷ್ಟಗಳೂ ದೂರವಾಗುತ್ತವೆ ಎಂಬ ನಂಬಿಕೆಯಿದ್ದು, ವೈರಮುಡಿ ಹಾಗೂ ಕೃಷ್ಣರಾಜಮುಡಿ ಬ್ರಹ್ಮೋತ್ಸವದ 6ನೇ ಉತ್ಸವವಾಗಿ ಗಜೇಂದ್ರಮೋಕ್ಷ ನಡೆಯುತ್ತಾ ಬಂದಿದೆ. ಶುಕ್ರವಾರ ವಿಶೇಷ ಪುಷ್ಪಾಲಂಕಾರ ಮಂಗಳವಾದ್ಯದೊಂದಿಗೆ ಉತ್ಸವ ನೆರವೇರಿತು. ಗಜೇಂದ್ರಮೋಕ್ಷ ಉತ್ಸವಕ್ಕೂ ಮೊದಲು ಭಾಗವತದ ಗಜೇಂದ್ರಮೋಕ್ಷ ಪಾರಾಯಣ ಮಾಡಿ ಮಹಾಮಂಗಳಾರತಿ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಶೀಲಾ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.ರಥೋತ್ಸವದ ಸಾಂಕೇತಿಕ ಉತ್ಸವ:

ಶ್ರೀಕೃಷ್ಣರಾಜಮುಡಿ ಬ್ರಹ್ಮೋತ್ಸವದ ಪ್ರಯುಕ್ತ ಶನಿವಾರ ಬೆಳಗ್ಗೆ ಮಹಾರಥೋತ್ಸವ ಕೇವಲ ಉತ್ಸವವಾಗಿ ಸಾಂಕೇತಿಕವಾಗಿ ನಡೆಯಲಿದೆ. ಶನಿವಾರ ಯಾತ್ರಾದಾನ, ಪಾರಾಯಣ ನಡೆದು ರಥೋತ್ಸವದ ಎಲ್ಲಾ ಧಾರ್ಮಿಕ ವಿಧಾನಗಳು ನಡೆಯುತ್ತವೆಯಾದರೂ ರಥದ ಬದಲಿಗೆ ಉತ್ಸವ ನೆರವೇರಲಿದೆ. ಶನಿವಾರವಾದ್ದರಿಂದ ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಕೃಷ್ಣರಾಜಮುಡಿ ಬ್ರಹ್ಮೋತ್ಸವದ 9ನೇ ತಿರುನಾಳ್ ಅಂಗವಾಗಿ ಸೋಮವಾರ ಬೆಳಗ್ಗೆ 10 ಗಂಟೆಗೆ ಕಲ್ಯಾಣಿಯಲ್ಲಿ ತೀರ್ಥಸ್ನಾನ, ಅವಭೃತವಿದ್ದು, ಸಂಜೆ ಪರಕಾಲಮಠದಲ್ಲಿ ಹೋಮ ನಡೆದು ಪಟ್ಟಾಭಿಷೇಕ ನಡೆಯಲಿದೆ. ಚೆಲುವನಾರಾಯಣಸ್ವಾಮಿಗೆ ಪಟ್ಟಾಭಿರಾಮ ತಿರುಕ್ಕೋಲದಲ್ಲಿ ಉತ್ಸವ ನಡೆದ ನಂತರ ಕೃಷ್ಣರಾಜಮುಡಿ ಕಿರೀಟಧಾರಣೆಯ ಉತ್ಸವಗಳು ಸಂಪನ್ನವಾಗುತ್ತವೆ.