ಗದಗ: ಗದಗ- ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಭಾನುವಾರ ಸಡಗರ, ಸಂಭ್ರಮ, ಶ್ರದ್ಧಾ ಭಕ್ತಿಯಿಂದ ಮಹಾ ಶಿವರಾತ್ರಿ ಆಚರಿಸಲಾಯಿತು.

ಶಿವರಾತ್ರಿ ಅಂಗವಾಗಿ ಭಾನುವಾರ ಬೆಳಗ್ಗೆ ಜಿಲ್ಲೆಯೇ ಎಲ್ಲ ಐತಿಹಾಸಿಕ ಹಾಗೂ ಪ್ರಮುಖ ದೇವಾಲಯಗಳಲ್ಲಿ ಶಿವಲಿಂಗುವಿಗೆ ವಿಶೇಷ ಪೂಜೆ, ಬಿಲ್ವಾರ್ಚನೆ, ಅಭಿಷೇಕ ಜರುಗಿದವು.ಸಾರ್ವಜನಿಕರು ನಗರದ ಐತಿಹಾಸಿಕ ಪ್ರಸಿದ್ಧ ತ್ರಿಕೂಟೇಶ್ವರ ದೇವಸ್ಥಾನ, ವೀರನಾರಾಯಣ ದೇವಸ್ಥಾನ ಸೇರಿದಂತೆ ಅವಳಿ ನಗರದಾದ್ಯಂತ ಇರುವ ಶಿವನ ದೇವಾಲಯಗಳಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಶಿವನ ಕೃಪೆಗೆ ಪಾತ್ರರಾದರು. ಶಿವರಾತ್ರಿ ಹಿನ್ನೆಲೆ ಶನಿವಾರ ರಾತ್ರಿಯಿಂದಲೇ ಎಲ್ಲ ಶಿವ ದೇವಾಲಯಗಳಿಗೆ ವಿಶೇಷ ವಿದ್ಯುತ್, ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದವು.

ಉಪವಾಸ: ಬೆಳಗ್ಗೆಯೇ ದೇವರ ದರ್ಶನ ಪಡೆದ ಭಕ್ತರು ಸಂಜೆಯವರೆಗೂ ಉಪವಾಸ ವ್ರತ ಮಾಡಿ ಸಂಜೆಯಾಗುತ್ತಿದ್ದಂತೆ ಮತ್ತೆ ಶಿವನ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ, ದೇವರಿಗೆ ವಿವಿಧ ಹಣ್ಣು, ವಿಶೇಷ ಸಿಹಿ ತಿನಿಸುಗಳನ್ನು ಎಡೆಮಾಡಿದರು. ನಂತರ ದೇವಸ್ಥಾನಗಳಲ್ಲಿ ನೀಡುವ ಪ್ರಸಾದ ಹಾಗೂ ತಂಪು ಪಾನೀಯಗಳನ್ನು ಸೇವಿಸುವ ಮೂಲಕ ತಮ್ಮ ಉಪವಾಸ ವ್ರತ ಪೂರ್ಣಗೊಳಿಸಿದರು.

ಪ್ರಸಾದ ವ್ಯವಸ್ಥೆ: ಪ್ರತಿಯೊಂದು ದೇವಾಲಯಗಳಲ್ಲಿಯೂ ಆಗಮಿಸುವ ಭಕ್ತರಿಗೆ ವಿವಿಧ ಹಣ್ಣುಗಳಿಂದ ತಯಾರಿಸಿದ ಪ್ರಸಾದ ಮತ್ತು ತಂಪು ಪಾನೀಯ ವಿತರಿಸಲಾಯಿತು. ರಾತ್ರಿಯಲ್ಲಿ ಶಿವ ಜಾಗರಣೆಗಾಗಿ ವಿಶೇಷ ಭಜನಾ ವ್ಯವಸ್ಥೆ ಕೂಡಾ ಕಲ್ಪಿಸಲಾಗಿತ್ತು.ಮಹಾಶಿವರಾತ್ರಿಯ ವಿಶೇಷ ಪೂಜೆ

ಗದಗ: ಇಲ್ಲಿಯ ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಾನುವಾರ ಮಹಾ ಶಿವರಾತ್ರಿಯ ಅಂಗವಾಗಿ ಕಾಶಿ ವಿಶ್ವನಾಥನಿಗೆ ವಿಶೇಷ ಅಲಂಕಾರ, ಪೂಜೆ ನಡೆಯಿತು.


ಬೆಳಗ್ಗೆಯಿಂದ ಸಂಜೆಯವರೆಗೂ ಭಕ್ತಾದಿಗಳು ಶ್ರದ್ಧಾಭಕ್ತಿಯೊಂದಿಗೆ ಸರದಿಯಲ್ಲಿ ಸಾಗಿ ಬಂದು ದೇವರ ದರ್ಶನ, ಪ್ರಸಾದ ಪಡೆದುಕೊಂಡರು.

ದೇವಸ್ಥಾನದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಪದಾಧಿಕಾರಿಗಳು ಹಾಗೂ ಹಿರಿಯರು ಬಂದ ಭಕ್ತರೆಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಸಂಜೆ ದೇವಸ್ಥಾನದ ಪ್ರಾಂಗಣದಲ್ಲಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಜೀವನ ದರ್ಶನ ಮಾಲಿಕೆ 56ನೇ ಮಾಸಿಕ ಕಾರ್ಯಕ್ರಮ ಹಾಗೂ ಮಹಾ ಶಿವರಾತ್ರಿ ಮಹೋತ್ಸವದ ಕಾರ್ಯಕ್ರಮ ಜರುಗಿತು. ಮಕ್ಕಳಿಂದ ಹಾಗೂ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ವೇಳೆ ಸಾನ್ನಿಧ್ಯವನ್ನು ಲಕ್ಕುಂಡಿಯ ಅಲ್ಲಮಪ್ರಭು ದೇವರಮಠದ ಸಿದ್ಧಲಿಂಗ ಸ್ವಾಮಿಗಳು, ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎ.ಟಿ. ನರೇಗಲ್ಲ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಜಿ.ಜಿ. ಕುಲಕರ್ಣಿ, ಉಪಾಧ್ಯಕ್ಷ ಆರ್.ಆರ್. ಕಾಶಪ್ಪನವರ, ಕಾರ್ಯದರ್ಶಿ ಕೆ.ಪಿ. ಗುಳಗೌಡರ ಸೇರಿದಂತೆ ಸಮಿತಿಯ ನಿರ್ದೆಶಕರು, ಗಣ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.