ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶುಕ್ರವಾರ ಶಿವರಾತ್ರಿ ಹಬ್ಬವನ್ನು ಜನರು ಶಿವ ನಾಮಸ್ಮರಣೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನ, ಶಿವ ದೇಗುಲ, ಗೌರಿ-ಶಂಕರ ದೇವಸ್ಥಾನ, ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿತು.ಬೆಳಗ್ಗೆ ಕುಟುಂಬ ಸದಸ್ಯರೊಂದಿಗೆ ಜನರು ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ಉಪವಾಸ ಆರಂಭಿಸಿದರು. ಇನ್ನೂ ಕೆಲವರು ಮನೆಯಲ್ಲಿಯೇ ದೇವರಿಗೆ ಪೂಜೆ ಸಲ್ಲಿಸಿ ಉಪವಾಸ ಆಚರಣೆ ಆರಂಭಿಸಿದರು. ಸಂಜೆ ವಿವಿಧ ದೇವಸ್ಥಾನಗಳಿಗೆ ತೆರಳಿ ಕಾಯಿ, ಕರ್ಪೂರದೊಂದಿಗೆ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಫಲಾಹಾರ ಸೇವಿಸುವ ಮೂಲಕ ಶಿವರಾತ್ರಿ ಉಪವಾಸ ಕೈಬಿಟ್ಟರು. ಐತಿಹಾಸಿಕ ಮೂಲನಂದೀಶ್ವರ(ಬಸವೇಶ್ವರ) ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಸಂಜೆ ವಿಶೇಷ ರುದ್ರಾಭಿಷೇಕವನ್ನು ದೇವಸ್ಥಾನದ ಅರ್ಚಕ ಗೌರಿಶಂಕರ ಚರಂತಿಮಠ ಅವರ ಸಮ್ಮುಖದಲ್ಲಿ ಭಕ್ತರು ನೆರವೇರಿಸಿದರು. ಇಡೀ ರಾತ್ರಿ ಮೂಲನಂದೀಶ್ವರ ದೇವರಿಗೆ ಶಿವರಾತ್ರಿ ಅಂಗವಾಗಿ ಬಿಲ್ವಾರ್ಚನೆ, ವಿಶೇಷ ಪೂಜೆ ನೆರವೇರಿಸಲಾಯಿತು.
ಸಾಮೂಹಿಕ ಇಷ್ಟಲಿಂಗ ಪೂಜೆ:ಪಟ್ಟಣದ ವಿರಕ್ತಮಠದಲ್ಲಿ ಸಂಜೆ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಜರುಗಿತು. ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುರುಸಿದ್ದೇಶ್ವರಯ್ಯ ಕಾಳಹಸ್ತೇಶ್ವರಮಠ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಿದರು. ಹಿರಿಯರಾದ ಬಸವರಾಜ ಹಾರಿವಾಳ ಮಂಗಳಾರತಿ ಹಾಡು, ಶಿವನ ಗೀತೆ ಇತರೆ ಭಕ್ತಿಗೀತೆಗಳನ್ನು ಸಾಮೂಹಿಕವಾಗಿ ಹೇಳಿಸಿದರು. ನಂತರ ಜರುಗಿದ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು. ಪೂಜೆಯ ನಂತರ ಶಿವರಾತ್ರಿ ಹಬ್ಬದ ಅಂಗವಾಗಿ ತಯಾರಿಸಿದ ವಿಶೇಷ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಫ್.ಡಿ.ಮೇಟಿ, ಎಸ್.ಎಸ್.ಝಳಕಿ, ವೀರೇಶ ಕುಂಟೋಜಿ, ಎಚ್.ಎಸ್.ಬಿರಾದಾರ, ಎಸ್.ಬಿ.ಬಶೆಟ್ಟಿ, ಜಗನ್ನಾಥ ಪಾಟೀಲ, ಚಂದ್ರಶೇಖರ ಮುರಾಳ, ಗಂಗಪ್ಪ ಬೇವನೂರ, ಬಸವರಾಜ ಚಿಂಚೋಳಿ, ಬಿ.ವಿ.ಪಟ್ಟಣಶೆಟ್ಟಿ, ಕೊಟ್ರೇಶ ಹೆಗಡ್ಯಾಳ, ಚಂದ್ರಶೇಖರ ಹದಿಮೂರ, ಪಿ.ಎಸ್.ಬಾಗೇವಾಡಿ, ಸಂತೋಷ ಡಂಬಳ, ಪಿಂಟುಗೌಡ ಪಾಟೀಲ, ಶ್ರವಣ ಪಾಟೀಲ, ಮಹಾದೇವಿ ಬಿರಾದಾರ, ಉಮಾ ರೇಶ್ಮಿ, ಪುಷ್ಪಾ ಹೂಗಾರ, ಶಾಂತಾ ಬಸರಕೋಡ, ಕಸ್ತೂರಿ ಮೊಕಾಶಿ, ಬೇಬಿ ಗಣಾಚಾರಿ, ಅನ್ನಕ್ಕ ಮನಗೂಳಿ ಸಮಸ್ತ ಅಕ್ಕನ ಬಳಗ ಸೇರಿದಂತೆ ಇತರರು ಸೇರಿದಂತೆ ಇದ್ದರು.