ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಮೊಹರಂ ಕಡೆಯ ದಿನವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಕಳೆದ 3 ದಿನಗಳಿಂದ ಮೊಹರಂ ಕಡೆಯ ದಿನದ ಅಂಗವಾಗಿ ಬಾಬಯ್ಯ ಗುಡಿಯಲ್ಲಿ ರಾತ್ರಿ ವೇಳೆ ವಿಶೇಷ ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಾಗಿತ್ತು.
ನಗರದ ಶಾಂತಿನಗರ ಬಾಬಯ್ಯ, ಚಾಂದಿನಿ ಚೌಕ ಬಾಬಯ್ಯ, ರಾಜೀವ್‌ಗಾಂಧಿ ನಗರ, ವೀರಸಾಗರ ಸೇರಿದಂತೆ ವಿವಿಧ ಬಡಾವಣೆಗಳ ಬಾಬಯ್ಯ ಗುಡಿಯಿಂದ ಬಾಬಯ್ಯ ದೇವರುಗಳು ಚಿಕ್ಕಪೇಟೆಯ ಬಾಬಯ್ಯನ ಗುಡಿಗೆ ಆಗಮಿಸಿ ಹಬ್ಬದ ಆಚರಣೆಯಲ್ಲಿ ತೊಡಗಿದವು. ಚಿಕ್ಕಪೇಟೆಯ ಬಾಬಯ್ಯನ ಗುಡಿಯಲ್ಲಿ ಪ್ರಾರ್ಥನೆ ಬಳಿಕ ಅಗ್ನಿಕೊಂಡ ನಡೆಯಿತು. ಈ ಅಗ್ನಿಕೆಂಡೋತ್ಸವದಲ್ಲಿ ಹಿಂದೂ-ಮುಸ್ಲಿಂರು ಒಂದೆಡೆ ಸೇರಿ ಭಾವೈಕ್ಯತೆ ಮೆರೆದಿದ್ದು ವಿಶೇಷವಾಗಿತ್ತು. ಮೊಹರಂ ಕಡೆಯ ದಿನದ ಅಂಗವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಕ್ಕರೆ ಓದಿಸುವುದು ಪದ್ದತಿ. ಈ ಕಾರ್ಯದಲ್ಲಿ ಹಿಂದೂಗಳು ಪಾಲ್ಗೊಂಡು ತಮ್ಮ ಮನೆ ಹಾಗೂ ಮಕ್ಕಳ ಒಳಿತಿಗಾಗಿ ಸಕ್ಕರೆ ಓದಿಸಿ ಹಬ್ಬದ ಸಡಗರದಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆದರು.ಚರ್ಮದ ರೋಗ, ನರಗುಳ್ಳೆ ಆಗಿರುವವರು ಹರಕೆ ಮಾಡಿಕೊಂಡಿರುತ್ತಾರೆ. ಹಾಗಾಗಿ ಬಾಬಯ್ಯ ಗುಡಿಯ ಬಳಿ ಅಗ್ನಿಕೊಂಡಕ್ಕೆ ಉಪ್ಪು, ಮೆಣಸು ಹಾಕುವ ಮೂಲಕ ತಮ್ಮ ಕಾಯಿಲೆ ಶಮನಕ್ಕೆ ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯಗಳು ಜಿಲ್ಲೆಯಾದ್ಯಂತ ಕಂಡು ಬಂದವು. ಸಂಜೆ ನಗರದ ಜಿಸಿಆರ್ ಕಾಲೋನಿ, ಚಿಕ್ಕಪೇಟೆ, ಟಿಪ್ಪು ನಗರ, ಮೆಕಾನ್ ಸೇರಿದಂತೆ ಎಲ್ಲ ಬಡಾವಣೆಗಳ ಬಾಬಯ್ಯ ದೇವರುಗಳು ಬಿ.ಹೆಚ್. ರಸ್ತೆ, ಎಂ.ಜಿ. ರಸ್ತೆ, ಗುಂಚಿ ಸರ್ಕಲ್ ಮುಖೇನ ಮೆರವಣಿಗೆಯಲ್ಲಿ ಸಾಗಿ ಮಂಡಿಪೇಟೆಯಲ್ಲಿ ಸೇರಿ, ಅಲ್ಲಿಂದ ಈದ್ಗಾ ಮೈದಾನಕ್ಕೆ ಸಾಮೂಹಿಕ ಮೆರವಣಿಗೆಯಲ್ಲಿ ಸಾಗಿದವು. ಈದ್ಗಾ ಮೈದಾನದಲ್ಲಿ ಬಾಬಯ್ಯ ದೇವರುಗಳು ಒಂದೆಡೆ ಸೇರಿ ಪ್ರಾರ್ಥನೆ ಸಲ್ಲಿಸಿದ ನಂತರ ತಮ್ಮ ತಮ್ಮ ಬಡಾವಣೆಗಳತ್ತ ತೆರಳಿದವು.