ಸಾರಾಂಶ
ಹುಬ್ಬಳ್ಳಿ:
ನಗರದ ಎಲ್ಲೆಡೆ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದ್ದು ಮಂದಿರ, ದೇವಸ್ಥಾನಗಳು ಭಕ್ತರಿಂದ ತುಂಬಿವೆ. ಗುರುವಾರದಿಂದ ನಗರದ ಹಲವೆಡೆ ಶಕ್ತಿದೇವತೆಯ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಕಾರ್ಯಕ್ರಮಗಳು ವೈಭವದಿಂದ ಜರುಗಿದವು.ಇಲ್ಲಿನ ವಿದ್ಯಾನಗರದ ರಾಮಕೃಷ್ಣ ವಿವೇಕಾನಂದ ಆಶ್ರಮ, ಗೋಕುಲ ರಸ್ತೆಯ ಗ್ರೀನ್ ಗಾರ್ಡನ್ ಬಳಿ ಇರುವ ಕರಿಯಮ್ಮದೇವಿ ದೇವಸ್ಥಾನ, ಮೇದಾರ ಓಣಿಯ ಕರಿಯಮ್ಮ ದೇವಸ್ಥಾನ, ಹಳೇ ಮ್ಯಾದಾರ ಓಣಿಯ ಪಡದಯ್ಯನ ಹಕ್ಲದಲ್ಲಿರುವ ಏಳು ಮಕ್ಕಳ ತಾಯಿ ದೇವಸ್ಥಾನ, ನಾಗಶೆಟ್ಟಿ ಕೊಪ್ಪದ ಶಾಂಡಿಲ್ಯಾಶ್ರಮ, ಲಕ್ಷ್ಮೀ ದೇವಸ್ಥಾನ, ನೃಪತುಂಗ ಬೆಟ್ಟದ ಹತ್ತಿರವಿರುವ ಕರಿಯಮ್ಮದೇವಿ ದೇವಸ್ಥಾನ, ಹೊಸೂರು ರಸ್ತೆಯಲ್ಲಿರುವ ಗಾಳಿ ದುರ್ಗಾದೇವಿ ದೇವಸ್ಥಾನ, ದಾಜಿಬಾನ ಪೇಟೆಯ ತುಳಜಾ ಭವಾನಿ ದೇವಸ್ಥಾನ, ಕಮರಿಪೇಟೆಯ ತುಳಜಾ ಭವಾನಿ, ನಗರದ ಕರಿಯಮ್ಮ ದೇವಿ ದೇವಸ್ಥಾನ, ರಾಜಧಾನಿ ಕಾಲನಿಯ ಗಣೇಶ ಮಂದಿರ ಹಾಗೂ ಮಹೇಶ್ವರ ದೇವಸ್ಥಾನ, ಮಾರುತಿ ನಗರ ದ್ಯಾಮವ್ವದೇವಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಗ್ಗೆಯಿಂದ ಸಂಜೆಯ ವರೆಗೂ ಭಕ್ತರ ಸಂಖ್ಯೆ ಅಧಿಕವಾಗಿದ್ದು, ಹಲವು ಕಡೆಗಳಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದಸರಾ ಸಮಾರೋಪದ ವರೆಗೂ ನಿತ್ಯ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದ ದೇವಸ್ಥಾನಗಳಲ್ಲಿ 9 ದಿನ ದೇವಿಗೆ ನಿತ್ಯವೂ ಒಂದೊಂದು ಅವತಾರದಲ್ಲಿ ಶೃಂಗರಿಸಿ ಪೂಜಿಸುವುದು ವಿಶೇಷ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ.ನಿತ್ಯ ಬೆಳಗ್ಗೆ ರುದ್ರಾಭಿಷೇಕ, ಸಾಮೂಹಿಕ ಶ್ರೀ ದುರ್ಗಾ ಸಪ್ತಶತೀ ಪಾರಾಯಣ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ, ಶ್ರೀ ಲಲಿತಾ ಕುಂಕುಮಾರ್ಚನೆ, ಶ್ರೀಗಳಿಂದ ಸಂಕೀರ್ತನೆ, ರಾತ್ರಿ ಮಹಾ ಮಂಗಳಾರತಿ ಹಾಗೂ ಪ್ರಸಾದ ಸೇವೆ ನೆರವೇರುತ್ತಿದೆ. ದೇವಿಯರಿಗೆ ಬೆಳ್ಳಿ ಆಭರಣ, ನೂತನ ರೇಷ್ಮೆ ಸೀರೆಗಳ ಶೃಂಗಾರದೊಂದಿಗೆ ಹಾಗೂ ಹಣ್ಣು ಹಂಪಲುಗಳ ನೈವೇದ್ಯ ಅರ್ಪಿಸುವುದರೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ದಾಂಡಿಯಾಗೆ ಸಿದ್ಧತೆ:ನಗರದ ವಿವಿಧ ಕಾಲನಿಗಳಲ್ಲಿ ಮಹಿಳೆಯರು ದಾಂಡಿಯಾ ಸಿದ್ಧತೆ ನಡೆಸಿದ್ದು, ನೃತ್ಯ ಪ್ರದರ್ಶನ ನಡೆಯಲಿದೆ. ಅಬಾಲ ವೃದ್ಧರಾಗಿ ಎಲ್ಲರೂ ಕೋಲು ಹಿಡಿದು ದಾಂಡಿಯಾ ಅಭ್ಯಾಸ ನಡೆಸಿದ್ದರು. ಪ್ರಕೃತಿ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ ಅ. 5ರಂದು ತೋಳನಕೆರೆಯಲ್ಲಿ ಹಾಗೂ ಅ. 6ರಂದು ಸಂಜೆ 6ಕ್ಕೆ ಬಾಲಾಜಿ ಆಸ್ಪತ್ರೆ ಎದುರಿನ ಕಲ್ಲೂರ ಲೇಔಟ್ ನಲ್ಲಿನ ಪ್ರಕೃತಿ ಸ್ಪೋರ್ಟ್ಸ್ ಫೌಂಡೇಶನ್‌ನಲ್ಲಿ, ಹುಬ್ಬಳ್ಳಿಯ ಜೀವಿ ಕಲಾಬಳಗದಿಂದ ಅ. 8ರಂದು ಸಂಜೆ 6.30ಕ್ಕೆ ಲಿಂಗರಾಜ ನಗರದ ಮಹಿಳೆಯರಿಂದ ಆಕರ್ಷಕ ದಾಂಡಿಯಾ ಉತ್ಸವ ಹಮ್ಮಿಕೊಳ್ಳಲಾಗಿದೆ.
ಜನರನ್ನಾಕರ್ಷಿಸುತ್ತಿರುವ ಗೊಂಬೆದಸರಾ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಇಂದಿರಾ ಕಾಲನಿಯಲ್ಲಿ ಮನೆಯೊಂದರಲ್ಲಿ 800ಕ್ಕೂ ಅಧಿಕ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿದೆ.
ಭಾರತಿ ನಂದಕುಮಾರ ಎಂಬುವವರು ಕಳೆದ 32 ವರ್ಷಗಳಿಂದ ಪ್ರತಿವರ್ಷವೂ ಗೊಂಬೆಗಳನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ದಸರಾದ ವೇಳೆ 10 ದಿನ ಇವರ ಮನೆ ಗೊಂಬೆಗಳ ಮ್ಯೂಸಿಯಂನಂತೆ ಕಣ್ಮನ ಸೆಳೆಯುತ್ತದೆ. ಮೊದಲು ಅಮ್ಮ, ಅತ್ತೆಯವರು 10ರಿಂದ 20 ಗೊಂಬೆ ಕೂರಿಸಿ ಪೂಜಿಸುತ್ತಿದ್ದರು. ಇವರಿಂದ ಪ್ರೇರಣೆಗೊಂಡ ನಾನು ಪ್ರತಿವರ್ಷವೂ ಮನೆಯಲ್ಲಿ 600ಕ್ಕೂ ಹೆಚ್ಚು ಗೊಂಬೆ ಕೂರಿಸಿ, ಕುಟುಂಬದವರೆಲ್ಲ ಸೇರಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದೇವೆ ಎನ್ನುತ್ತಾರೆ ಭಾರತಿ ನಂದಕುಮಾರ.ಕಟ್ಟಿಗೆ, ಪಿಂಗಾಣಿ, ಪಿಒಪಿ, ಮಣ್ಣಿನಿಂದ ತಯಾರಿಸಿದ ಗೊಂಬೆಗಳ ಸಂಗ್ರಹ ಹೊಂದಿರುವ ಇವರು, 100 ವರ್ಷಕ್ಕೂ ಹಳೆಯ ಗೊಂಬೆಗಳನ್ನು ಜೋಪಾನ ಮಾಡಿ ಪ್ರತಿವರ್ಷ ಪ್ರತಿಷ್ಠಾಪಿಸುತ್ತಿರುವುದು ವಿಶೇಷ.
ಪ್ರತಿ ವರ್ಷವೂ ಒಂದಿಲ್ಲೊಂದು ವಿಶೇಷ ಪ್ರದರ್ಶನ ಏರ್ಪಡಿಸಿರುವುದು ಇವರ ವೈಶಿಷ್ಟ್ಯ. ರಾಮಾಯಣ, ಮಹಾಭಾರತದಿಂದ ಹಿಡಿದು ಪ್ರಚಲಿತ ವಿದ್ಯಮಾನ, ವಿವಿಧ ಸಂದೇಶಗಳನ್ನು ಗೊಂಬೆಗಳ ಮೂಲಕ ಅನಾವರಣಗೊಳಿಸಿದ್ದಾರೆ. ಈ ಬಾರಿ ದ್ರೌಪದಿ ವಸ್ತ್ರಾಭರಣ ಕಥಾನಕ ತಿಳಿಸುವ ಮಾದರಿಯಲ್ಲಿ ಗೊಂಬೆಗಳನ್ನು ಪ್ರತಿಷ್ಠಾಪಿಸಿದ್ದಾರೆ.