ಆದಿಚುಂಚನಗಿರಿಯಲ್ಲಿ ಶ್ರೀಮಲ್ಲೇಶ್ವರಸ್ವಾಮಿ ಉತ್ಸವದ ಸಂಭ್ರಮ

| Published : Mar 21 2024, 01:05 AM IST

ಸಾರಾಂಶ

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ರಾತ್ರಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಶ್ರೀಮಲ್ಲೇಶ್ವರನಾಥ ಸ್ವಾಮಿ ಉತ್ಸವ ಬಹಳ ವಿಜೃಂಭಣೆಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನೆರೆವೇರಿತು. ಸಹಸ್ರಾರು ಸಂಖ್ಯೆಯ ಭಕ್ತರು ರಥವನ್ನು ಎಳೆಯುವ ಮೂಲಕ ತಮ್ಮ ಭಕ್ತಿ ಭಾವ ಮೆರೆದರು. ಕ್ಷೇತ್ರದ ರಥದ ಬೀದಿಯಲ್ಲಿ ವಿವಿಧ ಬಗೆಯ ಕಲಾತಂಡಗಳೊಂದಿಗೆ ಉತ್ಸವ ಸಾಂಗವಾಗಿ ನೆರವೇರಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆದಿಚುಂಚನಗಿರಿಯಲ್ಲಿ ಬುಧವಾರ ರಾತ್ರಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಶ್ರೀಮಲ್ಲೇಶ್ವರನಾಥ ಸ್ವಾಮಿ ಉತ್ಸವ ಬಹಳ ವಿಜೃಂಭಣೆಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನೆರೆವೇರಿತು. ಶ್ರೀಗಳು ದೇವರಿಗೆ ಪೂಜೆ ಸಲ್ಲಿಸಿ, ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಿದರು.

ಇಂದು ಸರಳ ಸಾಮೂಹಿಕ ವಿವಾಹ:

ಮಾ.21ರಂದು ಗುರುವಾರ ಬೆಳಗ್ಗೆ 10 ಗಂಟೆಗೆ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಸರಳ ಸಾಮೂಹಿಕ ವಿವಾಹ ಮತ್ತು ಹಿರಿಯ ದಂಪತಿಗಳಿಗೆ ಸನ್ಮಾನ ಸಮಾರಂಭ, ಸಂಜೆ 6 ಗಂಟೆಗೆ ಶ್ರೀ ಸಿದ್ದೇಶ್ವರ ಸ್ವಾಮಿ ಉತ್ಸವ ನಡೆಯಲಿದೆ.

ಶ್ರೀ ಚಂದ್ರಮೌಳೇಶ್ವರಸ್ವಾಮಿ ಉತ್ಸವ:ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಶ್ರೀ ಚಂದ್ರಮೌಳೇಶ್ವರಸ್ವಾಮಿ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.

ಶ್ರೀಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರು ಸರ್ವಾಲಂಕೃತ ಶ್ರೀ ಚಂದ್ರಮೌಳೇಶ್ವರಸ್ವಾಮಿ ರಥಕ್ಕೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಜಿಲ್ಲೆ ಮತ್ತು ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ರಥವನ್ನು ಎಳೆಯುವ ಮೂಲಕ ತಮ್ಮ ಭಕ್ತಿ ಭಾವ ಮೆರೆದರು. ಕ್ಷೇತ್ರದ ರಥದ ಬೀದಿಯಲ್ಲಿ ವಿವಿಧ ಬಗೆಯ ಕಲಾತಂಡಗಳೊಂದಿಗೆ ಉತ್ಸವ ಸಾಂಗವಾಗಿ ನೆರವೇರಿತು.ಆದಿಚುಂಚನಗಿರಿ ಮಠದ ಪ್ರಧಾನಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ, ಬ್ರಹ್ಮಚಾರಿ ಸಾಯಿಕೀರ್ತಿಸ್ವಾಮೀಜಿಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.